

ಮಧುಗಿರಿ: ಹೆತ್ತವರನ್ನು ನಿರ್ಲಕ್ಷಿಸುವ, ಅವರ ಆಸೆಗಳಿಗೆ ಕಿವಿಗೊಡದ ಇಂದಿನ ದಿನಗಳಲ್ಲಿ ಮೈಸೂರು ಮೂಲದ ಇಂಜಿನಿಯರ್ ಒಬ್ಬರು ಮಾತೃಸೇವಾ ಸಂಕಲ್ಪ ಯಾತ್ರೆ ಕೈಗೊಂಡು ಬೈಕಿನಲ್ಲಿ ಬರೋಬ್ಬರಿ 56,027 ಕಿಲೋಮೀಟರ್ ಸಂಚರಿಸಿ ಉತ್ತರ ಭಾರತದ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುವ ಮೂಲಕ ತಾಯಿಯ ಆಸೆ ಪೂರೈಸಿದ್ದಾರೆ.
ಕರ್ನಾಟಕದ ಪ್ರಸಿದ್ಧ ದೇವಾಲಯಗಳ ದರ್ಶನ ಮಾಡಿದ್ದೀರಾ ಎಂದು ಮಗ ಕೇಳಿದ್ದಕ್ಕೆ ತಾಯಿ ಚೂಡಾರತ್ನಾ, ಮೈಸೂರು ಬಿಟ್ಟು ಹೊರಗೆಲ್ಲೂ ಕಾಲಿಟ್ಟಿಲ್ಲ ಎಂದಿದ್ದೇ ಯಾತ್ರೆಗೆ ದಾರಿ ಮಾಡಿಕೊಟ್ಟಿತು. ಅಂದೇ ವೃತ್ತಿಗೆ ಗುಡ್ ಬೈ ಹೇಳಿ ಯಾತ್ರೆ ಕೈಗೊಂಡು ಉತ್ತರ ಭಾರತ ಸೇರಿ ಪ್ರಸಿದ್ಧ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಲು ನಿರ್ಧರಿಸಿದೆ ಎನ್ನುತ್ತಾರೆ ನಲವತ್ತು ವರ್ಷದ ಕೃಷ್ಣಕುಮಾರ್. 13 ವರ್ಷ ಕೆಲಸ ಮಾಡಿ ಕೂಡಿಟ್ಟ ಹಣದಲ್ಲಿ 2018ರ ಜನವರಿ 16ರಂದು ಮೈಸೂರಿನಿಂದ ಪ್ರವಾಸ ಕೈಗೊಂಡು ಕಾಶಿ, ಕೈಲಾಸ ಪರ್ವತ, ನೇಪಾಳ, ಮಾನಸ ಸರೋವರ, ಭೂತಾನ್, ಟಿಬೆಟ್, ಮ್ಯಾನ್ಮಾರ್ ಸೇರಿ ನೂರಾರು ಕ್ಷೇತ್ರಗಳನ್ನು ಸುತ್ತಿದ್ದಾರೆ.
ಬೈಕಿನಲ್ಲಿ ಪ್ರವಾಸ: ತಂದೆ ದಕ್ಷಿಣಮೂರ್ತಿ ನಿಧನರಾಗಿದ್ದು. ಅವರ 20 ವರ್ಷದ ಬಜಾಜ್ ಚೇತಕ್ ಬೈಕಿನಲ್ಲಿ ಪ್ರಯಾಣ ಕೈಗೊಂಡಿದ್ದು, ದಾರಿಯುದ್ದಕ್ಕೂ ತಂದೆ ನನ್ನ ಜತೆಯೇ ಇದ್ದು, ನಮಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಭಾವನೆ ಉಂಟಾಗುತ್ತಿತ್ತು. ಗುಡ್ಡಗಾಡು ಪ್ರದೇಶ, ಬೆಟ್ಟದ ಕಣಿವೆಯಲ್ಲಿ ಸಂಚರಿಸಿದಾಗಲೂ ವಾಹನ ಕೈಕೊಡಲಿಲ್ಲ ಎನ್ನುತ್ತಾರೆ ಕೃಷ್ಣಕುಮಾರ್.
ಮಧುಗಿರಿಯಲ್ಲೇಕೆ ಆಶ್ರಯ: ಕರೊನಾ ಆತಂಕ ಶುರುವಾದಾಗ ಅನ್ಯ ರಾಜ್ಯದಿಂದ ಕರ್ನಾಟಕಕ್ಕೆ ವಾಪಸಾಗಲು ತೀರ್ಮಾನಿಸಿ ಅಲ್ಲಿನ ಸಂಸದರ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಸ್ಪಂದನೆ ಸಿಕ್ಕಿದ್ದರಿಂದ ಆಂಧ್ರ ಗಡಿ ಮೂಲಕ ಮಧುಗಿರಿ ಪ್ರವೇಶಿಸಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದಲ್ಲಿ ಆಶ್ರಯ ಪಡೆಯಲು ಅವಕಾಶ ಕಲ್ಪಿಸಿದ್ದು, ಶೀಘ್ರವೇ ಮೈಸೂರಿಗೆ ತೆರಳಲಿದ್ದಾರೆ. ಪ್ರವಾಸ ಸಂದರ್ಭದಲ್ಲಿ ಸಾಧು ಸಂತರಿಂದ ಪ್ರಭಾವಿತರಾಗಿದ್ದು, ಮುಂದೆ ಸಂತರಂತೆಯೇ ಜೀವನ ನಡೆಸಲು ಬಯಸಿದ್ದೇನೆ ಎನ್ನುತ್ತಾರೆ ಕೃಷ್ಣಕುಮಾರ್.
ಭೂತಾಯಿಗೆ ನಮಸ್ಕರಿಸಿ ರಾಜ್ಯ ಪ್ರವೇಶ : ತಾಯಿಯೊಂದಿಗೆ ಶನಿವಾರ ಸಂಜೆ ಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗಡಿಯ ಮೂಲಕ ರಾಜ್ಯ ಪ್ರವೇಶಿಸಿದ್ದು ಭೂತಾಯಿಗೆ ನಮಸ್ಕರಿಸಿದರು. ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ಕೊಡಿಗೇನಹಳ್ಳಿ ಪಿಎಸ್‌ಐ ಪಾಲಾಕ್ಷಪ್ರಭು ಇಬ್ಬರನ್ನೂ ಸ್ವಾಗತಿಸಿದರು.
ಹೇಗಿತ್ತು ದಿನಚರಿ? : ಪ್ರತಿ ದಿನ ಮುಂಜಾನೆ ಪ್ರವಾಸ ಕೈಗೊಂಡು ದಿನದಲ್ಲಿ 2 ಹೊತ್ತು ಊಟ ಮಾಡಿ ನಿರಂತರ ಸಂಚರಿಸಿ ಪುಣ್ಯಕ್ಷೇತ್ರಗಳ ದರ್ಶನ ಮಾಡಿಕೊಂಡೆವು. ರಾತ್ರಿ ದೇವಾಲಯ, ಆಶ್ರಮಗಳಲ್ಲಿ ಆಶ್ರಯ ಪಡೆದೆವು. ಅಲ್ಲಿನ ಪರಿಸರಕ್ಕೆ ನಮ್ಮ ತಾಯಿ ಬಹಳಷ್ಟು ಬೇಗ ಹೊಂದಿಕೊಂಡದ್ದೂ, ನಮ್ಮ ಪ್ರಯಾಣಕ್ಕೆ ಅನುಕೂಲವಾಯಿತು ಎನ್ನುತ್ತಾರೆ ಕೃಷ್ಣಕುಮಾರ್.
ನನ್ನ ಮಗ ನನಗೆ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಸಿದ್ದು, ನನ್ನ ಎಲ್ಲ ಕನಸನ್ನು ನೆರವೇರಿಸಿದ್ದಾನೆ. ಇಂತಹ ಮಗನನ್ನು ಪಡೆದದ್ದು ನನ್ನ ಪುಣ್ಯ. ಚೂಡಾರತ್ನ ಕೃಷ್ಣಕುಮಾರ್ ತಾಯಿ