

ಮಂಡ್ಯ: ಕಬ್ಬು ಬೆಳೆಯನ್ನು ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಮೈಷುಗರ್ ಕಬ್ಬು ಬೆಳೆಗಾರರ ಒಕ್ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಜಿಪಂ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದ ಒಕ್ಕೂಟದ ಪದಾಧಿಕಾರಿಗಳು, ಕಾಡು ಪ್ರಾಣಿ ಹಾವಳಿ ಮತ್ತು ಅತಿವೃಷ್ಟಿ, ಅಗ್ನಿ, ವಿದ್ಯುತ್ ಅವಘಡ ದಿಂದ ಬೆಳೆ ಹಾಳಾಗಿ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಬ್ಬು ದೀರ್ಘಾವಧಿ ಬೆಳೆಯಾಗಿದ್ದು, ವರ್ಷಗಳ ಕಾಲ ಕಟಾವಿಗೆ ಕಾಯಬೇಕಾಗಿದೆ. ಅತಿವೃಷ್ಟಿ, ಆಕಸ್ಮಿಕ ಬೆಂಕಿ, ವಿದ್ಯುತ್ ಅವಘಡ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗಿ ರೈತರಿಗೆ ನಷ್ಟವಾಗುತ್ತಿದೆ. ಕಬ್ಬು ಬೆಳೆಯ ಕೃಷಿ ವೆಚ್ಚ ಅಧಿಕವಾಗಿದ್ದು, ಇಂತಹ ಅವಘಡಗಳ ನಷ್ಟದಿಂದ ಕಬ್ಬು ಬೆಳೆಗಾರರು ಆರ್ಥಿಕವಾಗಿ ತತ್ತರಿಸಿ ಹೋಗುತ್ತಿದ್ದಾರೆ. ಆದ್ದರಿಂದ ಕಬ್ಬಿನ ಬೆಳೆಯನ್ನು ವಿಪ್ಪತ್ತು ಪರಿಹಾರ ನಿಧಿಗೆ ಸೇರಿಸುವ ಮೂಲಕ ಕಬ್ಬು ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಪ್ರಸಕ್ತ ಬಜೆಟ್‌ನಲ್ಲಿ ಐತಿಹಾಸಿಕ ನಿರ್ಣಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ಎಸ್.ಕೃಷ್ಣ, ಅಧ್ಯಕ್ಷ ಎಸ್.ಎಂ.ವೇಣುಗೋಪಾಲ್, ಕಾರ್ಯದರ್ಶಿ ಎಂ.ನಾಗರಾಜ್, ಕೆ.ಎಂ.ರುದ್ರೇಶ್ ಇತರರಿದ್ದರು.