ಮೈಶುಗರ್ ಶಾಲೆಯಿಂದ ಆರ್ಥಿಕ ಹೊರೆ: ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಸಮಜಾಯಿಷಿ

MySugar President Press Conference Mandya
Published on

ಮಂಡ್ಯ: ಜಿಲ್ಲೆಯ ಅಸ್ಮಿತೆಯಾಗಿರುವ ಮೈಶುಗರ್ ಕಾರ್ಖಾನೆಯ ಅಧೀನದಲ್ಲಿರುವ ಪ್ರೌಢಶಾಲೆಯನ್ನು ಸರ್ಕಾರಿ ಸ್ವಾಮ್ಯದಿಂದ ಖಾಸಗಿ ಶಿಕ್ಷಣ ಟ್ರಸ್ಟ್‌ಗೆ ವಹಿಸುವ ಆಡಳಿತ ಮಂಡಳಿ ನಿಲುವಿನ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಹಲವು ಪ್ರತಿಭಟನೆ ನಡೆದಿವೆ. ಇದರ ಬೆನ್ನಲ್ಲೇ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಸ್ಪಷ್ಟನೆ ನೀಡಿದ್ದು, ಆರ್ಥಿಕ ಹೊರೆ ತಪ್ಪಿಸಲು ಶಾಲೆಯನ್ನು ಗುತ್ತಿಗೆ ನೀಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಮೈಶುಗರ್ ಪ್ರೌಢಶಾಲೆಗೆ ಸಂಬಂಧಿಸಿದಂತೆ ಜೆಡಿಎಸ್‌ನ ನಾಯಕರು ಮತ್ತು ಮುಖಂಡರು ವಿನಃ ಕಾರಣ ಅನಗತ್ಯವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾರ್ಖಾನೆಗೆ ಆರ್ಥಿಕ ಹೊರ ತಪ್ಪಿಸಲು ಶಾಲೆಯನ್ನು ಗುತ್ತಿಗೆ ನೀಡಲು ಮುಂದಾಗಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಮ್ಮ ಆಡಳಿತ ಮಂಡಳಿ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಶಾಲೆ, ಸಮುದಾಯ ಭವನಗಳು, ವಿದ್ಯಾಸಂಸ್ಥೆಗಳ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಕೆಲವು ವರ್ಷಗಳಿಂದ ಕಂಪನಿಗೆ ಆರ್ಥಿಕ ಹೊರೆಯಾಗುತ್ತಿದೆ. ಮೈಶುಗರ್ ಶಾಲೆಯಲ್ಲಿ 2 ಶಿಕ್ಷಕರಿಗೆ ಮಾತ್ರ ಸರ್ಕಾರದಿಂದ ವೇತನ ನೀಡಲಾಗುತ್ತಿದೆ. ಹೆಚ್ಚುವರಿ ನಾಲ್ವರು ಶಿಕ್ಷಕರು ಹಾಗೂ ಶಿಕ್ಷಣೇತರ ಸಿಬ್ಬಂದಿಗೆ ವೇತನ ನೀಡಬೇಕಾದ ಸ್ಥಿತಿಯನ್ನು ನಿಭಾಯಿಸಬೇಕಾಗಿದೆ. ಅಲ್ಲದೇ ಶಾಲೆಗೆ ಸಂಬಂಧಿಸಿದಂತೆ 3 ಸಮುದಾಯ ಭವನಗಳಿಂದ ವಾರ್ಷಿಕ ಒಂದು ಲಕ್ಷ ರೂ ಆಸುಪಾಸಿನಲ್ಲಿ ಆದಾಯ ದೊರೆಯುತ್ತಿದ್ದು, ಗುತ್ತಿಗೆ ನೀಡುವುದರಿಂದ 2 ರಿಂದ 2.5 ಲಕ್ಷ ರೂ ಆದಾಯ ನಿರೀಕ್ಷಿಸಬಹುದಾಗಿದೆ ಎಂದು ಹೇಳಿದರು.

ಪ್ರೌಢಶಾಲೆಯನ್ನು 20 ವರ್ಷದ ಅನುಭವವುಳ್ಳ ಸಂಸ್ಥೆಗಳಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಡಿಯಾಲದ ವಿನಾಯಕ ಮತ್ತು ವರದಾ ಕೈಗಾರಿಕಾ ತರಬೇತಿ ಸಂಸ್ಥೆ, ಬಸರಾಳಿನ ಪಾಂಚಜನ್ಯ ಎಜುಕೇಷನ್ ಟ್ರಸ್ಟ್ ಹಾಗೂ ಮದ್ದೂರಿನ ಕೀರ್ತನಾ ಟ್ರಸ್ಟ್ ಟೆಂಡರ್ ಸಲ್ಲಿಸಿದ್ದವು. ಈ ಪೈಕಿ 20 ವರ್ಷಗಳ ಅನುಭವವುಳ್ಳ ಕೀರ್ತನ ಟ್ರಸ್ಟ್‌ಗೆ ಗುತ್ತಿಗೆ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಇದಲ್ಲದೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಅಗತ್ಯಕ್ಕಿಂತ ಕಡಿಮೆಯಿದ್ದು, ಶಿಕ್ಷಣ ಇಲಾಖೆ ಮುಚ್ಚುವಂತೆ ಆದೇಶ ನೀಡಿರುವುದು ತಿಳಿದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ವಿರುದ್ಧ ಹಗಲು ದರೋಡೆಯ ಪದಬಳಕೆ ಮಾಡಿರುವುದು ಖಂಡನೀಯ. ಇದಲ್ಲದೆ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿ ಟನ್ ಕಬ್ಬಿನ 4 ರೂ ಹಾಗೂ ರೈತರಿಂದ ಪ್ರತಿ ಟನ್ ಕಬ್ಬಿಗೆ 4 ರೂ ಸೇರಿ ಒಟ್ಟಾಗಿ ನೀಡಲಾಗುವ 8 ರೂಪಾಯಿಯಲ್ಲಿ ಯಾವುದೇ ಬಾಕಿ ಉಳಿಸಿಕೊಳ್ಳದಿದ್ದರೂ, ಕಳೆದ ಆರು ತಿಂಗಳಿನಿಂದ 18 ಲಕ್ಷ ರೂ ವೇತನದ ಬಾಕಿ ಉಳಿದಿದೆ. ಇದನ್ನು ಪಾವತಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಕಾಂಗ್ರೆಸ್ ಕಿಸಾನ್ ಜಿಲ್ಲಾಧ್ಯಕ್ಷ ಬೋರೇಗೌಡ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ವಿಜಿಕುಮಾರ್, ಸ್ವಾಮಿಗೌಡ, ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ವಕೀಲ ಸುಂಡಹಳ್ಳಿ ಮಂಜುನಾಥ್, ಸಾತನೂರು ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net