ಜೂ.30ರಂದು ಮೈಷುಗರ್ ಬಾಯ್ಲರ್‌ಗೆ ಅಗ್ನಿಸ್ಪರ್ಶ: ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಮಾಹಿತಿ

Mysugar President Press Conference Mandya
Published on

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಜೂ.30ರಂದು ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಲಾಗುವುದು ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು.

ಪ್ರಸಕ್ತ ಸಾಲಿನ ಕಬ್ಬು ಅರೆಯುವ ಕಾರ್ಯಕ್ಕೆ ಶೀಘ್ರ ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಿರುವ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜುಲೈ ಮಧ್ಯದಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 2.50 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದ್ದು, ಈಗಾಗಲೇ 1.90 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ಸರಿಯಾಗಿ ಮಳೆ ಬಾರದ ಕಾರಣ ಕಬ್ಬಿನ ಕೊರತೆ ಎದುರಾಗಿದೆ. ಆದರೂ ಕಾಖಾನೆ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿತ್ತು. ಕಬ್ಬು ಸರಬರಾಜು ಮಾಡಿದ ಎಲ್ಲ ರೈತರಿಗೂ ಸಂಪೂರ್ಣ ಹಣ ಪಾವತಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ ಕಬ್ಬಿನ ಕೊರತೆ ಎದುರಾಗುವ ಸಾಧ್ಯತೆಗಳಿದ್ದು, ಹೊರ ಜಿಲ್ಲೆಯಿಂದ ಕಬ್ಬು ತಂದು ನುರಿಸಲು ಚಿಂತನೆ ನಡೆಸಲಾಗಿದೆ. ಜತೆಗೆ ಕಾರ್ಖಾನೆಯ ಸಹ ವಿದ್ಯುತ್ ಘಟಕವನ್ನೂ ಆರಂಭಿಸಿ ಕಾರ್ಖಾನೆಗೆ ಅಗತ್ಯವಿರುವ ವಿದ್ಯುತ್ ಅನ್ನು ಇಟ್ಟುಕೊಂಡು ಉಳಿದಿದ್ದನ್ನು ಸೆಸ್ಕ್‌ಗೆ ಮಾರಾಟ ಮಾಡಲಾಗುವುದು. ಕಳೆದ ಬಾರಿ ಅಂತಿಮ ಹಂತದಲ್ಲಿ ಸ್ವಲ್ಪ ಪ್ರಮಾಣದ ವಿದ್ಯುತ್ ಮಾರಾಟ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 3,150 ರೂ ಎಫ್‌ಆರ್‌ಪಿ ನಿಗದಿ ಮಾಡಲಾಗಿದೆ. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ 10 ದಿನಗಳೊಳಗೆ ಪಾವತಿಸಲಾಗುವುದು. ಕಬ್ಬಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಲೆಮನೆ ಮಾಲೀಕರ ಸಭೆ ಕರೆಯಲು ನಿರ್ಧರಿಸಲಾಗಿದೆ. ಪರವಾನಗಿ ಇರುವ ಆಲೆಮನೆ ಮಾತ್ರ ಬೆಲ್ಲ ಉತ್ಪಾದನೆ ಮಾಡಬೇಕು. ಉಳಿದವರು ಮಾಡಬಾರದು ಎಂದು ಮನವಿ ಮಾಡಲು ಚಿಂತನೆ ನಡೆಸಲಾಗಿದೆ. ಮೈಷುಗರ್ ಉಳಿವಿಗೆ ಎಲ್ಲರ ಸಹಕಾರ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ವಿವರಿಸಿದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಮೈಷುಗರ್ ವ್ಯಾಪ್ತಿಯಲ್ಲಿ ಇತರೆ ಖಾಸಗಿ ಕಾರ್ಖಾನೆಗಳವರು ಕಬ್ಬು ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಇದನ್ನು ತಡೆಯಲು ಈಗಾಗಲೇ ಜಾಗೃತ ದಳ ರಚಿಸಲಾಗಿದೆ. ಒಂದು ವೇಳೆ ಇಂತಹ ಕಾನೂನು ಬಾಹಿರ ಕೃತ್ಯಗಳು ಕಂಡುಬಂದಲ್ಲಿ ಅವರ ಪರವಾನಗಿ ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.

ಮುಖಂಡರಾದ ಉಮೇಶ್, ದೇಶಹಳ್ಳಿ ಮೋಹನ್‌ಕುಮಾರ್, ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net