ಎಚ್‌ಡಿಕೆ ಭರವಸೆ ಈಡೇರಿಸಲಿ: ಮೈಷುಗರ್ ಶಾಲೆಗೆ ಠೇವಣಿ ಇಡುವಂತೆ ಸಿ.ಡಿ.ಗಂಗಾಧರ ಆಗ್ರಹ

Mysugar President CD Gangadhar press conference Mandya
Published on

ಮಂಡ್ಯ: ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮೈಷುಗರ್ ಶಾಲೆಯನ್ನು ಗುತ್ತಿಗೆ ವಿಚಾರದಲ್ಲಿ ಶಿಕ್ಷಕರಿಗೆ ವೇತನ ನೀಡಲು ಠೇವಣಿ ಇಡುತ್ತೇನೆ ಎಂದು ಭರವಸೆ ನೀಡಿದ್ದು, ಆದರೆ ಇದುವರೆಗೂ ಠೇವಣಿ ಇಟ್ಟಿಲ್ಲ. ಕೊಟ್ಟ ಮಾತಿನಂತೆ ಠೇವಣಿ ಇಡಬೇಕೆಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಆಗ್ರಹಿಸಿದರು.

ಎಚ್.ಡಿ. ಕುಮಾರಸ್ವಾಮಿ ಅವರು ಠೇವಣಿಯನ್ನು ಇಡದ ಕಾರಣ ಶಿಕ್ಷಕರಿಗೆ ಸಂಬಳವನ್ನು ನೀಡಿಲ್ಲ. ವೇತನ ನೀಡುವಂತೆ ಶಿಕ್ಷಕರು ಮನವಿ ಮಾಡಿದ್ದು, ತಕ್ಷಣವೇ ಕೇಂದ್ರ ಸಚಿವರು ಹಣ ನೀಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಈ ಸಂಬಂಧ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ. ಆದರೆ ಅವರ ಆಪ್ತ ಸಹಾಯಕರು ಈ ಸಂಬಂಧ ಯಾವುದೇ ಸೂಚನೆ ನೀಡಿಲ್ಲ. ಕೇಂದ್ರ ಸಚಿವರು ಕೊಟ್ಟ ಮಾತಿನಂತೆ ಶಿಕ್ಷಕರ ವೇತನ ಪಾವತಿಗೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಮೈಷುಗರ್ ಕಾರ್ಖಾನೆಯ ಕಬ್ಬು ಅರಿಯುವಿಕೆ 2025-26ರ ಹಂಗಾಮು ಈಗಾಗಲೇ ಅಂತಿಮ ಹಂತಕ್ಕೆ ತಲುಪಿದ್ದು, ಇದುವರೆಗೂ 1.25 ಲಕ್ಷ ಟನ್ ಕಬ್ಬು ನುರಿಸಲಾಗಿದೆ. ಕಾರ್ಖಾನೆಗೆ ಕಬ್ಬು ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಪ್ರಸಕ್ತ ಸಾಲಿನ ನುರಿಸುವಿಕೆಯ ಹಂಗಾಮಿನ ಅಂತ್ಯವನ್ನು ಘೋಷಿಸಲಾಗಿದೆ ಎಂದರು.

ಇತರ ಖಾಸಗಿ ಕಾರ್ಖಾನೆಗಳಿಗಿಂತಲೂ 60-70 ರೂ. ಕಡಿಮೆ ದರದಲ್ಲಿ ಕಬ್ಬು ಕಟಾವು ಮಾಡಿಕೊಡಲಾಗುತ್ತಿದೆ. ಆದರೂ ಆಲೆಮನೆಗಳಲ್ಲಿ ಹೆಚ್ಚಿನ ಬೆಲೆ ನೀಡಿ ಕಬ್ಬು ಖರೀದಿ ಮಾಡುತ್ತಿರುವ ಹಿನ್ನೆಲೆ ರೈತರು ಆಲೆಮನೆಗಳಿಗೆ ಒಪ್ಪಿಗೆ ಕಬ್ಬನ್ನು ಸರಬರಾಜು ಮಾಡಿದ್ದಾರೆ. ಇದರಿಂದ ಜಿಲ್ಲೆಯ ಎಲ್ಲ ಕಾರ್ಖಾನೆಗಳಲ್ಲಿಯೂ ಕಬ್ಬು ಸರಬರಾಜು ಕಡಿಮೆಯಾಗಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಸಕ್ಕರೆ ಕಾರ್ಖಾನೆಯ ಹಿಂದಿನ ಆಡಳಿತ ಮಂಡಳಿಯಲ್ಲಿ ಆರ್ಥಿಕ ಲೋಪಗಳು ಕಂಡು ಬಂದಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಲ್ಲದೆ, ನ.3 ರಂದು ಮೈಷುಗರ್ ಕಂಪನಿಯ ಸರ್ವ ಸದಸ್ಯರ ಸಭೆಯನ್ನು ಕರೆಯಲಾಗಿದ್ದು, 2016-17ರ ಆಡಿಟ್ ವರದಿಯನ್ನು ಅನುಮೋದಿಸುವ ಸಂಬಂಧ ಸಭೆ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿ.ಎಂ.ದ್ಯಾವಪ್ಪ, ಚಿನಕುರಳಿ ರಮೇಶ್, ನಾಗರಾಜು, ಸಾತನೂರು ಕೃಷ್ಣ, ದೇವಣ್ಣ, ಉದಯ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net