ಆಸ್ತಿ ಮಾರಾಟ ಮಾಡಿ ಕಾರ್ಖಾನೆ ನಿರ್ಮಾಣ: ಬಿಜೆಪಿ ಕಾರ್ಯಕರ್ತರ ಆರೋಪ

Mysugar New Factory Construction mandya
Published on

ಮಂಡ್ಯ: ಮೈಷುಗರ್ ಆಸ್ತಿ ಮಾರಾಟ ಮಾಡಿ ನೂತನ ಕಾರ್ಖಾನೆ ಆರಂಭಿಸುವ ಹುನ್ನಾರವನ್ನು ಸರ್ಕಾರ ಮಾಡುತ್ತಿದ್ದು, ಈ ಕೂಡಲೇ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ಪಕ್ಷದ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಸಕ್ಕರೆ ಕಾರ್ಖಾನೆಗೆ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿ ಪಾರಂಪರಿಕ ಕಟ್ಟಡ ಸೇರಿದಂತೆ 1 ಎಕರೆ 37 ಗುಂಟೆ ಜಾಗವಿದೆ. ಪ್ರಸ್ತುತ ಅದರ ಬೆಲೆ ಸಾವಿರಾರು ಕೋಟಿ ರೂ. ಇದೆ. ಇದನ್ನು ಖಾಸಗಿ ಅವರಿಗೆ ಪರಭಾರೆ ಮಾಡುವ ಅಥವಾ ಆ ಬೆಲೆ ಬಾಳುವ ಭೂಮಿ ಕಬಳಿಸುವ ಕುತಂತ್ರವಿರುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಹೊಸ ಸಕ್ಕರೆ ಕಾರ್ಖಾನೆಗೆ ಹಣ ಹಾಕುವ ಬದಲು ಹೀಗಿರುವ ಕಾರ್ಖಾನೆಗೆ ಆಧುನಿಕ ಸ್ಪರ್ಶ ನೀಡಿದರೆ ಜನರ ತೆರಿಗೆ ಹಣ ಉಳಿಯುತ್ತದೆ. ಮಾರಾಟ ಮಾಡುವ ಕೆಲಸಕ್ಕೆ ಕೈ ಹಾಕಿದರೆ ಮಂಡ್ಯ ಜನ ರೊಚ್ಚಿಗೇಳುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೇವಲ ಚುನಾವಣಾ ಗಿಮಿಕ್‌ನಿಂದ ಹೊರಬಂದು ಜನಪರ ಕೆಲಸವನ್ನು ಮಾಡಲು ಮುಂದಾಗಲಿ ಎಂದು ಒತ್ತಾಯಿಸಿದರು.

ಮೈಷುಗರ್ ಕಾರ್ಖಾನೆಯ ಪ್ರಸ್ತುತ ಆಸ್ತಿಯ ಖಾಲಿ ಜಾಗಗಳಲ್ಲಿ ಸರ್ಕಾರವೇ ನೇರವಾಗಿ ವಾಣಿಜ್ಯ ಸಂಕೀರ್ಣ, ಕಲ್ಯಾಣ ಮಂಟಪ ಸೇರಿದಂತೆ ಇತರ ವಾಣಿಜ್ಯ ಉದ್ದೇಶಕ್ಕಾಗಿಯೇ ಕಟ್ಟಡಗಳನ್ನು ನಿರ್ಮಾಣ ಮಾಡಲಿ. ಅದರಿಂದ ಬರುವ ಆದಾಯದಿಂದ ಕಾರ್ಖಾನೆ ಅಭಿವೃದ್ಧಿಪಡಿಸಬಹುದು. ಜತೆಗೆ ಕಬ್ಬು ಬೆಳೆಗಾರರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೂ ಸಹಾಯ ಹಸ್ತ ನೀಡಬಹುದು. ಇದನ್ನು ಮನಗಂಡು ಸರ್ಕಾರ ಕಾರ್ಖಾನೆಯ ಆಸ್ತಿ ಸಂರಕ್ಷಣೆ ಮಾಡಬೇಕು. ಲಾಭ ಗಳಿಕೆ ಮಾಡುವಂತಹ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಸಚಿವರು ಹಾಗೂ ಶಾಸಕರು ಸಾತನೂರು ಫಾರ್ಮ್ ಬಳಿ ಹೊಸ ಕಾರ್ಖಾನೆ ಮಾಡುತ್ತೇವೆ ಎನ್ನುತ್ತಾರೆ. ಇನ್ನೊಂದೆಡೆ ಈಗಿರುವ ಕಾರ್ಖಾನೆ ಪಕ್ಕದಲ್ಲಿ ಹೊಸ ಕಾರ್ಖಾನೆ ಮಾಡುತ್ತೇವೆ ಎನ್ನುತ್ತಾರೆ. ಮಗದೊಮ್ಮೆ ಐಟಿ ಹಬ್ ಮಾಡುತ್ತೇವೆ ಎನ್ನುತ್ತಾರೆ. ಆದರೆ ಬಜೆಟ್‌ನಲ್ಲಿ ಎಷ್ಟು ಹಣ ಮೀಸಲಿಟ್ಟಿದ್ದಾರೆ ಎನ್ನುವ ಮಾಹಿತಿ ಇಲ್ಲ. ಬಜೆಟ್ ಪತ್ರದಲ್ಲಿ, ಸರ್ಕಾರಿ ಅನುದಾನ, ಇತರ ಸಂಪನ್ಮೂಲ ಕ್ರೋಡೀಕರಣ, ಅಸೆಟ್ ಮಾನಿಟೈಜೇಶನ್ ಎಂದು ನಮೂದಿಸಲಾಗಿದೆ. ಆದ್ದರಿಂದ ಈ ಕೂಡಲೇ ಮೀಸಲಿಟ್ಟಿರುವ ಹಣದ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮಹೇಶ್, ಕೆ.ಎಂ.ಶಾರದಾ, ಹನಿಯಂಬಾಡಿ ನಾಗರಾಜು, ಶಂಕರ್, ಲೋಕೇಶ್, ಧನಂಜಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net