

ಮಂಡ್ಯ: ಮೈಷುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ಮಂಜೂರಾಗಿರುವ ಹಣದಲ್ಲಿ ಬಾಕಿ ಉಳಿಕೆಯಾಗಿರುವ 17.42 ಕೋಟಿ ರೂಗಳನ್ನು ಶೀಘ್ರವೇ ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಮಾ.31ರಂದು ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಎಂಎಲ್‌ಸಿ, ಪ್ರಮುಖವಾಗಿ ಮುಂದಿನ ಜೂನ್‌ನಿಂದಲೇ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಲಿದೆ. ಇದೇ ವೇಳೆ ಕಾರ್ಖಾನೆಯಲ್ಲಿ ಮುಂಚಿತವಾಗಿ ಹಣದ ಅವಶ್ಯಕತೆ ಇರುತ್ತದೆ. ರೈತರಿಗೆ ಮುಂಗಡ ಪಾವತಿ ಸೇರಿದಂತೆ ಕಬ್ಬು ಅರೆಯುವ ಸಂಬಂಧ ಅನೇಕ ಖರ್ಚು ವೆಚ್ಚಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಬರಬೇಕಾದ ಅನುದಾನವು ಬಿಡುಗಡೆಯಾಗದೇ ಹೋದರೆ ರೈತರಿಗೆ ಬಹಳವೇ ತೊಂದರೆಯಾಗಲಿದೆ. ಆದ್ದರಿಂದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ 6112 ಎಕರೆ ಪ್ರದೇಶದಲ್ಲಿ 3,05,600 ಮೆಟ್ರಿಕ್ ಟನ್ ಕಬ್ಬು ಬೆಳೆದ 3395 ರೈತರು 2023-24ನೇ ಸಾಲಿಗೆ ಕಬ್ಬು ಸರಬರಾಜು ಮಾಡಲು ಈಗಾಗಲೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರೆಲ್ಲರೂ ಜೂನ್‌ನಿಂದಲೇ ಕಬ್ಬು ಪೂರೈಕೆಯನ್ನು ಪ್ರಾರಂಭಿಸಬಹುದಾಗಿದೆ. ಈಗಾಗಲೇ ಸರ್ಕಾರ ನೀಡಿ ಬಜೆಟ್‌ನಲ್ಲಿ ಘೋಷಿಸಿದ್ದ 50 ಕೋಟಿ ರೂನಲ್ಲಿ ಬಾಕಿ ಇರುವ 17.42 ಕೋಟಿ ರೂ ಬಿಡುಗಡೆ ಮಾಡಿಕೊಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.