ಮೈಶುಗರ್ ಖಾಸಗೀಕರಣಕ್ಕೆ ಹುನ್ನಾರ: ಸಚಿವ ಮುರುಗೇಶ್ ನಿರಾಣಿ ವಿರುದ್ಧ ಹಿತರಕ್ಷಣಾ ಸಮಿತಿ ಆಕ್ರೋಶ

14_11_Mdy_04(Meeting)
Published on

ಮಂಡ್ಯ: ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗಳು ಸರಿಯಿಲ್ಲ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿರುವುದಕ್ಕೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಸಚಿವರ ಹೇಳಿಕೆ ಖಂಡಿಸಿ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಸಚಿವ ಮುರುಗೇಶ್ ನಿರಾಣಿ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೈಶುಗರ್ ಖಾಸಗೀಕರಣ ಮಾಡುವ ಹುನ್ನಾರವಾಗಿದೆ. ಇಂತಹ ದಿಕ್ಕು ತಪ್ಪಿಸುವ ಹೇಳಿಕೆ ನೀಡುವುದನ್ನು ಬಿಟ್ಟು ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸುವ ನಿಟ್ಟಿನಲ್ಲಿ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಕಾರ್ಖಾನೆಗಳು ಸರಿಯಿಲ್ಲ ಎಂದು ಹೇಳುವ ಮೂಲಕ ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸವನ್ನು ಸಚಿವರು ಮಾಡುತ್ತಿದ್ದಾರೆ. ಮಾತ್ರವಲ್ಲದೆ ಮೈಶುಗರ್ ಕಾರ್ಖಾನೆಯನ್ನೂ ಖಾಸಗೀಕರಣ ಮಾಡಿ ಅದಕ್ಕೆ ಸಂಬಂಧಿಸಿದ ಆಸ್ತಿಯನ್ನು ಕಬಳಿಸುವ ಹುನ್ನಾರವನ್ನು ಮೂರು ವರ್ಷದಿಂದ ಸತತವಾಗಿ ಮಾಡುತ್ತಿದ್ದಾರೆ. ಇದಕ್ಕಾಗಿ ತಮ್ಮ ಪರ ಲಾಭಿಯನ್ನು ಮಂಡ್ಯದಲ್ಲಿ ಸೃಷ್ಟಿ ಮಾಡುತ್ತಿದ್ದಾರೆ. ಸರ್ಕಾರ ಜಿಲ್ಲೆಯ ರೈತರಿಗೆ ಭರವಸೆ ನೀಡಿದಂತೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಪ್ರಾರಂಭಿಸಿದೆ. ಹೀಗಿರುವಾಗ ಸರ್ಕಾರದ ನಿರ್ಧಾರದಂತೆ ನಡೆದುಕೊಳ್ಳದೆ ದಿಕ್ಕು ತಪ್ಪಿಸುವಂತಹ ಮಾತುಗಳನ್ನಾಡುತ್ತಿರುವುದು ಸರಿಯಲ್ಲ. ಅಂತೆಯೇ ಮುಂದಿನ ದಿನದಲ್ಲಿ ಇಂತಹ ಹೇಳಿಕೆಗಳನ್ನು ಕೊಡಬಾರದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಕೆ.ಟಿ.ಶ್ರೀಕಂಠೇಗೌಡ, ಸುನಂದಾ ಜಯರಾಂ, ತಗ್ಗಹಳ್ಳಿ ವೆಂಕಟೇಶ್, ಮಂಜುನಾಥ್, ಇಂಡುವಾಳು ಚಂದ್ರಶೇಖರ್, ಕೆ.ಬೋರಯ್ಯ, ಸಾತನೂರು ವೇಣುಗೋಪಾಲ್, ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net