

ಮಂಡ್ಯ: ಮೈಷುಗರ್ ಕಾರ್ಖಾನೆಯ ಆಸ್ತಿಯ ಒಂದಿಂಚೂ ಜಾಗವನ್ನು ಮಾರಾಟ ಮಾಡಲು ಬಿಡುವುದಿಲ್ಲ ಎಂದು ಶಾಸಕ ಎಂ.ಶ್ರೀನಿವಾಸ್ ಹೇಳಿದರು.
ನಗರಸಭೆ ವತಿಯಿಂದ 2019-20ನೇ ಸಾಲಿನ 14ನೇ ಹಣಕಾಸಿನ ಅಂದಾಜು 12 ಲಕ್ಷ ರೂ. ವೆಚ್ಚದಲ್ಲಿ 15ನೇ ವಾರ್ಡ್ ಕುವೆಂಪು ನಗರದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ, ಮೈಷುಗರ್ ಆಸ್ತಿಯನ್ನು ಕೆಲವರು ಮಾರಾಟ ಮಾಡಲು ಕರಾರು ಪತ್ರ ಮಾಡಿಕೊಂಡಿದ್ದಾರೆನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಕಂಪನಿಗೆ ಸೇರಿದ ಜಾಗ ಅತ್ಯಮೂಲ್ಯ ಆಸ್ತಿ. ಅದನ್ನು ಉಳಿಸಿಕೊಳ್ಳುವುದು ನೌಕರರ ಕರ್ತವ್ಯ. ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿರುವರೆಲ್ಲರೂ ಈಗಾಗಲೇ ಸ್ವಯಂ ನಿವೃತ್ತಿ ಪಡೆದು ಕರ್ತವ್ಯದಿಂದ ಬಿಡುಗಡೆಯಾಗಿದ್ದಾರೆ. ಅವರಿಗೆ ಅಸೋಸಿಯೇಷನ್ ಹೆಸರಿನಲ್ಲಿ ಯಾವುದೇ ಅಧಿಕಾರ ಚಲಾಯಿಸುವ ಹಕ್ಕಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮೈಷುಗರ್‌ಗೆ ಸೇರಿದ ಜಾಗವನ್ನು ಮೋಸ ಮಾಡಲು ಬಿಡುವುದಿಲ್ಲ ಎಂದರು.