

ಮಂಡ್ಯ: ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆ ಅಧೀನದ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ಕೊಡಬೇಕೆನ್ನುವ ನಿರ್ಧಾರಕ್ಕೆ ಬ್ರೇಕ್ ಬಿದ್ದಿದೆ. ಇದರೊಂದಿಗೆ ಹೋರಾಟಗಾರರಿಗೆ ಜಯ ಸಿಕ್ಕಂತಾಗಿದೆ. ಅಂತೆಯೇ ಜಿದ್ದಿಗೆ ಬಿದ್ದವರಂತೆ ಖಾಸಗಿಗೆ ವಹಿಸಲು ಅತಿ ಉತ್ಸಾಹ ತೋರಿದ ಆಡಳಿತ ಮಂಡಳಿಗೆ ತೀವ್ರ ಹಿನ್ನಡೆಯಾದಂತಾಗಿದೆ.
ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಪಡೆದಿರುವ ಮೈಶುಗರ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಇಂದಿಗೂ ಹಿರಿಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಆದರೆ ಇದ್ಯಾವುದಕ್ಕೂ ಬೆಲೆ ಕೊಡದೇ ಶಾಲೆಯನ್ನು ಗುತ್ತಿಗೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಈ ನಿಲುವಿನ ವಿರುದ್ಧ ಹಿರಿಯ ವಿದ್ಯಾರ್ಥಿಗಳು ಹಾಗೂ ಹೋರಾಟಗಾರರು ಆಕ್ಷೇಪಿಸಿದ್ದರು. ಪ್ರತಿಭಟನೆಗಳು ನಡೆದವು. ಇದಕ್ಕೆ ಬೆದರಿ ಗುತ್ತಿಗೆ ವಹಿಸುವ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ.
ಆರ್ಥಿಕ ಹೊರೆಯ ಕಾರಣ: ಖಾಸಗಿ ಶಿಕ್ಷಣ ಸಂಸ್ಥೆಗೆ ಗುತ್ತಿಗೆ ನೀಡುವ ನಿಲುವು ಹೊರಬೀಳುತ್ತಿದ್ದಂತೆ ಆಕ್ರೋಶ ವ್ಯಕ್ತವಾಯಿತು. ಮಾತ್ರವಲ್ಲದೆ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ವಿರೋಧದ ಬಿಸಿ ತಟ್ಟಲಾರಂಭಿಸಿತು. ಈ ನಡುವೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಸುದ್ದಿಗೋಷ್ಠಿಯಲ್ಲಿ ಸಮಜಾಯಿಷಿ ನೀಡಿದ್ದರು. ಮೈಶುಗರ್ ಪ್ರೌಢಶಾಲೆಗೆ ಸಂಬಂಧಿಸಿದಂತೆ ಜೆಡಿಎಸ್‌ನ ನಾಯಕರು ಮತ್ತು ಮುಖಂಡರು ವಿನಃ ಕಾರಣ ಅನಗತ್ಯವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾರ್ಖಾನೆಗೆ ಆರ್ಥಿಕ ಹೊರ ತಪ್ಪಿಸಲು ಶಾಲೆಯನ್ನು ಗುತ್ತಿಗೆ ನೀಡಲು ಮುಂದಾಗಿದ್ದೇವೆ.
ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಶಾಲೆ, ಸಮುದಾಯ ಭವನಗಳು, ವಿದ್ಯಾಸಂಸ್ಥೆಗಳ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಕೆಲವು ವರ್ಷಗಳಿಂದ ಕಂಪನಿಗೆ ಆರ್ಥಿಕ ಹೊರೆಯಾಗುತ್ತಿದೆ. ಮೈಶುಗರ್ ಶಾಲೆಯಲ್ಲಿ 2 ಶಿಕ್ಷಕರಿಗೆ ಮಾತ್ರ ಸರ್ಕಾರದಿಂದ ವೇತನ ನೀಡಲಾಗುತ್ತಿದೆ. ಹೆಚ್ಚುವರಿ ನಾಲ್ವರು ಶಿಕ್ಷಕರು ಹಾಗೂ ಶಿಕ್ಷಣೇತರ ಸಿಬ್ಬಂದಿಗೆ ವೇತನ ನೀಡಬೇಕಾದ ಸ್ಥಿತಿಯನ್ನು ನಿಭಾಯಿಸಬೇಕಾಗಿದೆ. ಅಲ್ಲದೇ ಶಾಲೆಗೆ ಸಂಬಂಧಿಸಿದಂತೆ 3 ಸಮುದಾಯ ಭವನಗಳಿಂದ ವಾರ್ಷಿಕ ಒಂದು ಲಕ್ಷ ರೂ ಆಸುಪಾಸಿನಲ್ಲಿ ಆದಾಯ ದೊರೆಯುತ್ತಿದ್ದು, ಗುತ್ತಿಗೆ ನೀಡುವುದರಿಂದ 2 ರಿಂದ 2.5 ಲಕ್ಷ ರೂ ಆದಾಯ ನಿರೀಕ್ಷಿಸಬಹುದಾಗಿದೆ. ಪ್ರೌಢಶಾಲೆಯನ್ನು 20 ವರ್ಷದ ಅನುಭವವುಳ್ಳ ಸಂಸ್ಥೆಗಳಿಗೆ ಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಡಿಯಾಲದ ವಿನಾಯಕ ಮತ್ತು ವರದಾ ಕೈಗಾರಿಕಾ ತರಬೇತಿ ಸಂಸ್ಥೆ, ಬಸರಾಳಿನ ಪಾಂಚಜನ್ಯ ಎಜುಕೇಷನ್ ಟ್ರಸ್ಟ್ ಹಾಗೂ ಮದ್ದೂರಿನ ಕೀರ್ತನಾ ಟ್ರಸ್ಟ್ ಟೆಂಡರ್ ಸಲ್ಲಿಸಿದ್ದವು. ಈ ಪೈಕಿ 20 ವರ್ಷಗಳ ಅನುಭವವುಳ್ಳ ಕೀರ್ತನ ಟ್ರಸ್ಟ್‌ಗೆ ಗುತ್ತಿಗೆ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಇದಲ್ಲದೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಅಗತ್ಯಕ್ಕಿಂತ ಕಡಿಮೆಯಿದ್ದು, ಶಿಕ್ಷಣ ಇಲಾಖೆ ಮುಚ್ಚುವಂತೆ ಆದೇಶ ನೀಡಿತ್ತೆಂದು ಹೇಳಿದರು. ಆದರೆ ಇದ್ಯಾವುದಕ್ಕೂ ಹೋರಾಟಗಾರರ ಕಿಮ್ಮತ್ತು ನೀಡಲಿಲ್ಲ.
ಜಿಲ್ಲೆಗೆ ಸಾವಿರಾರೂ ಕೋಟಿ ರೂ ಅನುದಾನ ತಂದಿರುವುದಾಗಿ ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಒಂದು ಶಾಲೆ ಉಳಿಸಲು ಶಕ್ತವಾಗಿಲ್ಲವೇ ಎನ್ನುವ ಟೀಕೆ ವ್ಯಕ್ತವಾಗುತ್ತಿತ್ತು. ಇನ್ನು ಈ ನಡುವೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶಾಲೆಯನ್ನು ಗುತ್ತಿಗೆ ನೀಡುವ ವಿಚಾರವನ್ನು ವಿರೋಧಿಸಿದ್ದರು. ಮಾತ್ರವಲ್ಲದೆ ಸಿಎಸ್‌ಆರ್ ಅನುದಾನದಿಂದ ಹಣ ಕೊಡಿಸುವ ಭರವಸೆ ನೀಡಿದ್ದರು. ಇಷ್ಟಾದರೂ ಆಡಳಿತ ಮಂಡಳಿ ಪಟ್ಟು ಸಡಿಲಿಸಲಿಲ್ಲ. ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಹೋರಾಟಗಾರರು ಆಡಳಿತ ಮಂಡಳಿಯ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಖಾಸಗಿಗೆ ಗುತ್ತಿಗೆ ನೀಡುವುದನ್ನು ನಿಲ್ಲಿಸಿರುವುದಾಗಿ ಶಾಸಕ ಘೋಷಣೆ ಮಾಡಿದರು. ಈ ಮೂಲಕ ಸರ್ಕಾರಿ ಸ್ವಾಮ್ಯದಲ್ಲಿದ್ದ ಶಾಲೆಯನ್ನು ಖಾಸಗಿಗೆ ವಹಿಸಿದ್ದರೆನ್ನುವ ಆರೋಪದಿಂದ ಕಾಂಗ್ರೆಸ್ ಪಾರಾಗಿದೆ.
ಟೆಂಡರ್ ಪ್ರಕ್ರಿಯೆ ಸಂಪೂರ್ಣ ರದ್ದು
ಶಾಸಕ ರವಿಕುಮಾರ್ ಗಣಿಗ ಘೋಷಣೆ
ಮೈಶುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂಬಂಧ ನಡೆಸಲಾಗಿದ್ದ ಟೆಂಡರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಘೋಷಣೆ ಮಾಡಿದರು.
ಸಭೆಯಲ್ಲಿ ಸುಧೀರ್ಘ ಚರ್ಚೆ ಬಳಿಕ ಮಾತನಾಡಿದ ಅವರು, ಮೈಶುಗರ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದರಿಂದ ಮೈಶುಗರ್ ಕಾರ್ಖಾನೆಗೆ ವಾರ್ಷಿಕ 18 ಲಕ್ಷ ರೂ ನಷ್ಟ ಆಗುತ್ತಿದೆ. ಹೀಗಾಗಿ ಶಾಲೆಯನ್ನು ಗುತ್ತಿಗೆ ನೀಡಲು ಮೈಶುಗರ್ ಅಧ್ಯಕ್ಷರು ತೀರ್ಮಾನ ಮಾಡಿದ್ದರು. ಅದರಂತೆ ಲೀಸ್‌ಗೆ ಕೊಡಲು ಎಲ್ಲ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಲೀಸ್‌ಗೆ ಕೊಡಲು ತೀವ್ರ ವಿರೋಧ ವ್ಯಕ್ತವಾಗಿದೆ. ಹಳೆ ವಿದ್ಯಾರ್ಥಿಗಳು, ರೈತರ ಸಭೆಯನ್ನು ನಡೆಸಿದ್ದೇನೆ. ಸಭೆಯಲ್ಲೂ ಖಾಸಗಿಯವರಿಗೆ ನೀಡುವುದು ಬೇಡ ಎಂಬ ವಿರೋಧ ಇದೆ. ಹೀಗಾಗಿ ನಾವು ಲೀಸ್‌ಗೆ ನೀಡಬಾರದು ಎಂದು ತೀರ್ಮಾನ ಮಾಡಿದ್ದೇವೆ ಎಂದರು.
ಎಂದಿನಂತೆ ಮೈಶುಗರ್ ಶಾಲೆ ಕಾರ್ಖಾನೆಯ ಒಡೆತನದಲ್ಲಿ ನಡೆಯಲಿದೆ. ಈಗ ಆಗಿರುವ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ಶಾಲೆಯ ಅಭಿವೃದ್ಧಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹಣ ಕೊಡುತ್ತೇವೆ ಎಂದಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಾಲೆಯ ಅಭಿವೃದ್ಧಿಯ ನೀಲ ನಕ್ಷೆ ತಯಾರು ಮಾಡುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಮಕ್ಕಳನ್ನು ಸೇರಿಸಿ ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳಿದರು.
ಮೈಶುಗರ್ ಪ್ರೌಢಶಾಲೆಯನ್ನು ಗುತ್ತಿಗೆ ನೀಡುವುದನ್ನು ವಿರೋಧ ಮಾಡಲಾಗಿತ್ತು. ಆದರೂ ಆಡಳಿತ ಮಂಡಳಿ ನಿಲುವಿನಿಂದ ಹಿಂದೆ ಸರಿದಿರಲಿಲ್ಲ. ಶಾಸಕ ರವಿಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಹೋರಾಟಗಾರರ ಮನವಿಗೆ ಸ್ಪಂದಿಸಲಾಯಿತು. ಇದರೊಂದಿಗೆ ಗುತ್ತಿಗೆ ನೀಡುವ ನಿರ್ಧಾರವನ್ನು ಕೈಬಿಟ್ಟಿರುವುದು ಉತ್ತಮ ಬೆಳವಣಿಗೆ. ಕೆ.ಬೋರಯ್ಯ ಹಿರಿಯ ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ