

ಮಂಡ್ಯ: ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಟೀಕಿಸಿದರು.
ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸರಿಯಾಗಿ ಸ್ಪಂದಿಸಲಿಲ್ಲ. ಜಿಲ್ಲೆಯ ರೈತ ಸಂಘಟನೆ, ಪ್ರಗತಿಪರ ಸಂಘಟನೆ ಹಾಗೂ ಕೆಲ ರಾಜಕೀಯ ಪಕ್ಷಗಳ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದು 2022-23ನೇ ಸಾಲಿಗೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸುವುದಾಗಿ ತಿಳಿಸಿತ್ತು. ಆದರೆ ಕೊಟ್ಟ ಭರವಸೆಯಂತೆ ಸರ್ಕಾರ ನಡೆದುಕೊಳ್ಳಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಸಕಾಲದಲ್ಲಿ ಕಾರ್ಖಾನೆ ಪ್ರಾರಂಭ ಮಾಡದೇ ವಿಳಂಬ ಮಾಡಿದರು. ಇನ್ನು ದುರಸ್ತಿಯನ್ನು ಪರಿಣತಿ ಇಲ್ಲದ ತಜ್ಞರಿಗೆ ನೀಡಿದ ಪರಿಣಾಮ ಗುಣಮಟ್ಟವಾಗಿ ರಿಪೇರಿ ನಡೆಯಲಿಲ್ಲ. ಐದು ತಿಂಗಳ ಅವಧಿಯಲ್ಲಿ ಸುಮಾರು 1 ಲಕ್ಷ ಟನ್ ಕಬ್ಬನ್ನಷ್ಟೇ ನುರಿಸಿದ್ದಾರೆ. ಈ ಅವಧಿಯಲ್ಲಿ ಐದು ಲಕ್ಷ ಟನ್ ಕಬ್ಬನ್ನು ನುರಿಸಬೇಕಿತ್ತು. ಇತ್ತ ವಿದ್ಯುತ್ ಘಟಕವನ್ನು ಸಹ ಪ್ರಾರಂಭ ಮಾಡದೆ ಕೆಇಬಿಗೆ ದುಬಾರಿ ಹಣ ಕೊಡಬೇಕಾಯಿತು. ಈ ನಡುವೆ ಗುಣಮಟ್ಟದ ಸಕ್ಕರೆಯನ್ನು ಉತ್ಪಾದನೆ ಮಾಡಲಿಲ್ಲ. ಕಬ್ಬು ಕಟಾವು ಮಾಡಲು ಕೆಲಸಗಾರರಿಲ್ಲ. ಈ ಎಲ್ಲ ಕಾರಣದಿಂದ ರೈತರು ಕಷ್ಟಕ್ಕೆ ಗುರಿಯಾಗುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಮಸ್ಯೆಯಾದ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ಸರ್ಕಾರ 2023-24ನೇ ಸಾಲಿಗಾದರೂ ಜೂನ್‌ನಲ್ಲಿಯೇ ಕಾರ್ಖಾನೆಯನ್ನು ಪ್ರಾರಂಭಿಸಬೇಕು. ಜತೆಗೆ ಕಾರ್ಖಾನೆಗೆ ನೀರಿನ ತೊಂದರೆ ಇದೆ. ಅಂತೆಯೇ ಕೋಣನಹಳ್ಳಿ ಕೆರೆಯಿಂದ ನೀರಾವರಿ ಇಲಾಖೆ ನೀರು ಕೊಡಲು ಒಪ್ಪಂದವಾಗಿರುವುದರಿಂದ ಜರೂರಾಗಿ ನೀರನ್ನು ಕಾರ್ಖಾನೆಗೆ ಕೊಡಬೇಕೆಂದು ಒತ್ತಾಯಿಸಿದರು.
ಮೈಷುಗರ್ ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ ಇದ್ದರು.