

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ 2024-25ನೇ ಸಾಲಿನ ಕಬ್ಬು ನುರಿಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ತಿಳಿಸಿದರು.
ಆ.5ರಂದು ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯ ಪ್ರಾರಂಭವಾಗಿ 2,05,000 ಟನ್ ಕಬ್ಬಿನ ಗುರಿ ಪೈಕಿ 2,01,900 ಟನ್ ಕಬ್ಬನ್ನು ನುರಿಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2023-24ನೇ ಸಾಲಿನಲ್ಲಿ ಕಾರ್ಖಾನೆಗೆ ನೀಡಿದ ಆರ್ಥಿಕ ನೆರವು ಸದುಪಯೋಗಪಡಿಸಿಕೊಂಡು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ ಹಾರೈಕೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
2005-06ರಿಂದ ಈವರೆಗೆ ಕಾರ್ಖಾನೆಗೆ ಸುಮಾರು 650 ಕೋಟಿ ರೂ ಸರ್ಕಾರ ನೆರವು ನೀಡಲಾಗಿದ್ದು, ಇದೇ ಮೊದಲ ಬಾರಿಗೆ 2024-25ನೇ ಸಾಲಿನಲ್ಲಿ ಸರ್ಕಾರದ ಆರ್ಥಿಕ ನೆರವನ್ನು ಪಡೆಯದೇ ಕಬ್ಬನ್ನು ನುರಿಯಲಾಗಿದೆ. ಅಂತೆಯೇ ಪ್ರಸಕ್ತ ಸಾಲಿನಲ್ಲಿ ಉತ್ಪಾದನೆಯಾದ 1,30,000 ಕ್ವಿಂಟಾಲ್ ಸಕ್ಕರೆ ಮಾರಾಟ ಮಾಡಿ, 45 ಕೋಟಿ ರೂ, ಮೊಲಾಸಸ್ ಮಾರಾಟದಿಂದ 15.36 ಕೋಟಿ ರೂ, ಕಾರ್ಖಾನೆಯ ಸಹ ವಿದ್ಯುತ್ ಘಟಕದಿಂದ 1,54,93,000 ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಕಾರ್ಖಾನೆ ನಡೆಸಲು ಕಳೆದ ಸಾಲಿನಲ್ಲಿ 10 ಕೋಟಿ ರೂ ವ್ಯಯಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸ್ವಯಂ ವಿದ್ಯುತ್ ಉತ್ಪಾದನೆಯಿಂದ ನಡೆಸಿ ಉಳಿದ 71,12,880 ಯೂನಿಟ್ ಚೆಸ್ಕಾಂಗೆ ಮಾರಾಟ ಮಾಡಿ 4.33 ಕೋಟಿ ರೂ ಆದಾಯ ಗಳಿಸಿ ಕಾರ್ಖಾನೆಯನ್ನು ಲಾಭದಲ್ಲಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ಮತ್ತಿತರೆ ಯಾವುದೇ ಮೂಲಗಳಿಂದ ಆರ್ಥಿಕ ನೆರವು ಪಡೆಯದೇ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಕಬ್ಬಿನ ಹಣ ಪಾವತಿ ಮಾಡಲಾಗಿದ್ದು, ಜಿಲ್ಲೆಯ ಇತರೇ ಕಾರ್ಖಾನೆಗಳಿಗೆ ಮಾದರಿಯಾಗಿದೆ. ಇದೀಗ ಖಾಸಗಿ ಕಾರ್ಖಾನೆಗಳು ಸಹ ರೈತರಿಗೆ ಕಬ್ಬಿನ ಹಣವನ್ನು ಹಂತ ಹಂತವಾಗಿ ನೀಡುವುದನ್ನು ಬಿಟ್ಟು ಒಮ್ಮೆಲೆ ಹಣ ಪಾವತಿ ಮಾಡಲು ಮುಂದಾಗಿವೆ ಎಂದರು.
ಕಾಂಗ್ರೆಸ್ ನಗರ ಬ್ಲ್ಯಾಕ್ ಅಧ್ಯಕ್ಷ ರುದ್ರಪ್ಪ, ಗ್ರಾಮಾಂತರ ಅಧ್ಯಕ್ಷ ಅಪ್ಪಾಜಿಗೌಡ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಸಾತನೂರು ಕೃಷ್ಣ, ರೈತ ಘಟಕದ ಅಧ್ಯಕ್ಷ ದೇಶಹಳ್ಳಿ ಮೋಹನ್, ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಶ್ರೀಧರ್ ಇದ್ದರು.