ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಸಚಿವರಾದ ಚಲುವರಾಯಸ್ವಾಮಿ, ಶಿವಾನಂದ ಪಾಟೀಲ್ ಭಾಗಿ

1 (3)
Published on

ಮಂಡ್ಯ: ಜಿಲ್ಲೆಯ ಜೀವನಾಡಿ ಹಾಗೂ ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಮೈಷುಗರ್‌ನಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಗೆ ಚಾಲನೆ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಕ್ಕರೆ ಸಚಿವ ಶಿವಾನಂದ್ ಎಸ್.ಪಾಟೀಲ್, ಶಾಸಕರಾದ ಪಿ.ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ ಸೇರಿದಂತೆ ಹಲವರು ಕನ್ವೇಯರ್‌ಗೆ ಕಬ್ಬು ಹಾಕುವ ಮೂಲಕ ಚಾಲನೆ ನೀಡಿದರು. ಕಾಂಗ್ರೆಸ್ ಸರ್ಕಾರ ಬಂದರೆ ಕಾರ್ಖಾನೆ ಪುನಶ್ಚೇತನಗೊಳಿಸಿ ಒಂದು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಹಾಗೂ ಎನ್.ಚಲುವರಾಯಸ್ವಾಮಿ ಅವರು ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಭರವಸೆ ನೀಡಿದ್ದರು. ಅದರಂತೆ ಕಾರ್ಖಾನೆ ಪುನಶ್ಚೇತನಕ್ಕೆ 50 ಕೋಟಿ ರೂ ನೀಡುವುದರ ಜತೆಗೆ 15 ದಿನಗಳ ಹಿಂದೆ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಿದ್ದರು. ಅಂತೆಯೇ ಗುರುವಾರ ಕಬ್ಬು ನುರಿಸುವುದು ಪ್ರಾರಂಭವಾಯಿತು.

ಜಿಲ್ಲಾಧಿಕಾರಿ ಡಾ.ಕುಮಾರ, ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ ಪಾಟೀಲ್, ರೈತ ಮುಖಂಡರಾದ ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಎಂ.ಎಸ್.ಚಿದಂಬರ್, ಸಾತನೂರು ವೇಣುಗೋಪಾಲ್, ರುದ್ರಪ್ಪ, ಅಂಜನಾ ಶ್ರೀಕಾಂತ್, ಶ್ರೀಧರ್ ಇತರರಿದ್ದರು.

ಪ್ರತಿದಿನ 3 ಸಾವಿರ ಟನ್ ಅರೆಯುವ ಗುರಿ: ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಮೈಷುಗರ್ ಕಾರ್ಖಾನೆಯಲ್ಲಿ ಪ್ರತಿದಿನ 3 ಸಾವಿರ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ್ ತಿಳಿಸಿದರು.

ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕಾರ್ಯ ಕೆಲವು ದಿನ ಟರ್ಬೈನ್ ಸಮಸ್ಯೆಯಿಂದ ತಡವಾಗಿದೆ. ಮೊದಲೆರೆಡು ದಿನ 1,500 ರಿಂದ 2 ಸಾವಿರ ಟನ್ ಕಬ್ಬು ನುರಿಸಲಾಗುವುದು. ಮುಂದಿನ ದಿನದಲ್ಲಿ ದಿನಕ್ಕೆ ಮೂರು ಸಾವಿರ ಟನ್ ನಿಂದ ಐದು ಸಾವಿರ ಟನ್‌ವರೆಗೂ ಕಬ್ಬು ನುರಿಯುವ ಕೆಲಸ ನಡೆಯಲಿದೆ ಎಂದರು.

ರೈತರಿಗೆ ಎಫ್‌ಆರ್‌ಪಿ ಪ್ರಕಾರ ದರ ನೀಡಿ ಕಬ್ಬು ಖರೀದಿಸಲಾಗುವುದು. ಕಳೆದ ಬಾರಿ ಕಡಿಮೆ ರಿಕವರಿ ಇದ್ದರೂ ರೈತರಿಗೆ 2,800 ರೂ ನೀಡಲಾಗಿದೆ. ಅಂತೆಯೇ ಪ್ರಸಕ್ತ ಹಂಗಾಮಿನಲ್ಲಿ 3 ಲಕ್ಷ ಟನ್ ಕಬ್ಬು ನುರಿಸುವ ಗುರಿ ಇದೆ. ಆದ್ದರಿಂದ ರೈತರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವಂತೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದ ಬೆಂಬಲದಿಂದ ಕಾರ್ಖಾನೆ ಪ್ರಾರಂಭವಾಗಿದೆ. ಕಬ್ಬು ಅರೆಯುವ ಕಾರ್ಯ ಹೆಚ್ಚು ನಡೆಯುತ್ತದೆ. ಮುಂದಿನ ದಿನಗಳಲ್ಲಿ ಕಾರ್ಖಾನೆ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net