

ಮಂಡ್ಯ: ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಪ್ರಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಜೂ.30ರಿಂದ ಕಬ್ಬು ನುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲದೆ ಕಬ್ಬು ಪೂರೈಸಿದ ರೈತರಿಗೆ 14 ದಿನಕ್ಕೊಮ್ಮೆ ಹಣ ಪಾವತಿ ಮಾಡಲು ನಿರ್ಧರಿಸಲಾಗಿದೆ.
ಕಬ್ಬು ಅರೆಯುವಿಕೆ ಪ್ರಾರಂಭಿಸುವ ಸಂಬಂಧ ಕಾರ್ಖಾನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ್ ಚನ್ನಪ್ಪಗೌಡ ಪಾಟೀಲ್, ಕಬ್ಬು ಅರೆಯಲು ಕಾರ್ಖಾನೆಯಲ್ಲಿ ಎಲ್ಲ ರೀತಿಯಿಂದಲೂ ಸನ್ನದ್ಧವಾಗಿದೆ. ಯಾವುದೇ ತಾಂತ್ರಿಕ ದೋಷಗಳಿಲ್ಲ. ಎಲ್ಲ ಯಂತ್ರೋಪಕರಣಗಳನ್ನು ದುರಸ್ತಿಗೊಳಿಸುವುದರ ಜತೆಗೆ ಓವರ್ ಆಯಿಲ್ ಮಾಡಲಾಗಿದೆ. ಕಬ್ಬು ಕಟಾವು ಮಾಡಲು ಕಾರ್ಮಿಕರ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಕಬ್ಬು ಸಾಗಾಣಿಕೆಗೆ ಟ್ರ್ಯಾಕ್ಟರ್ ಮತ್ತು ಲಾರಿಗಳನ್ನು ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.
ಕಬ್ಬು ಕಟಾವು ಮಾಡುವವರು, ಸಾಗಾಣಿಕೆದಾರರಿಗೆ ವಾರಕ್ಕೊಮ್ಮೆ ಹಣ ಪಾವತಿಸಲಾಗುವುದು. ಕಳೆದ ವರ್ಷ 12 ಗಂಟೆ ಕಾರ್ಖಾನೆಯನ್ನು ನಿರಂತರ ಚಾಲನೆ ಮಾಡಿ 1800 ಟನ್ ಕಬ್ಬು ಅರೆದು ಪರಿಶೀಲನೆ ಮಾಡಲಾಗಿದೆ. ಆದ್ದರಿಂದ ಈ ವರ್ಷ ಕಾರ್ಖಾನೆಯು ಪ್ರತಿನಿತ್ಯ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯವಿದ್ದರೂ ಪ್ರತಿದಿನ 3000 ರಿಂದ 3500 ಟನ್ ಕಬ್ಬು ಅರೆಯಲು ಗುರಿ ಹೊಂದಲಾಗಿದೆ ಎಂದರು.
ಕಳೆದ ವರ್ಷ ಜಿಲ್ಲೆಯ ಬೇರೆ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿದಾಗ ನಾವು ದುರಸ್ತಿ ಕಾರ್ಯ ಕೈಗೊಂಡಿವೆ. ಜತೆಗೆ ಯಂತ್ರೋಪಕರಣಗಳ ಸಮಸ್ಯೆ ಹೆಚ್ಚಾಗಿತ್ತು. ಅದೆಲ್ಲವನ್ನೂ ಪರಿಹರಿಸಿಕೊಳ್ಳುವಲ್ಲಿ ವಿಳಂಭವಾಯಿತು. ಪರಿಣಾಮ ಕಳೆದ ವರ್ಷ 1 ಲಕ್ಷ ಟನ್ ಕಬ್ಬನ್ನಷ್ಟೇ ಅರೆಯಲು ಸಾಧ್ಯವಾಯಿತು. ಆದರೆ, ಈ ವರ್ಷ 5.50 ಲಕ್ಷ ಟನ್ ಕಬ್ಬನ್ನು ರೈತರಿಂದ ಒಪ್ಪಿಗೆ ಮಾಡಿಕೊಳ್ಳಲಾಗಿದ್ದು, ಕನಿಷ್ಟ 4 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಪ್ರಸ್ತುತ ಪ್ರಮುಖ ಯಂತ್ರೋಪಕರಣಗಳನ್ನು ಮೂಲ ತಯಾರಿಕಾ ಕಂಪನಿಗಳಿಗೆ(ಪೂನಾ, ಕೊಲ್ಲಾಪುರ ಇತರ) ಕಳುಹಿಸಿ ದುರಸ್ತಿ ಮಾಡಿಸುವುದರ ಜತೆಗೆ ಪರೀಕ್ಷಿಸಲಾಗಿದೆ. ಶೇ.90ರಷ್ಟು ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ. ಮಾತ್ರವಲ್ಲದೆ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಸ್ಥಳದಲ್ಲೇ ಪರಿಹರಿಸಲು ನಮ್ಮಲ್ಲಿ ತಾಂತ್ರಿಕ ತಂಡ ಸಿದ್ಧವಾಗಿದೆ. ಈಗಾಗಲೇ ಕಳೆದೆರಡು ದಿನಗಳಿಂದ ಟ್ರಯಲ್ ರನ್ ಕೂಡ ನಡೆಯುತ್ತಿದ್ದು, ಜೂ.30ರಿಂದ ಅಧಿಕೃತವಾಗಿ ಕಬ್ಬು ಅರೆಯುವಿಕೆ ಆರಂಭಿಸಲಾಗುವುದು ಎಂದು ಹೇಳಿದರು.
ಕಾರ್ಖಾನೆಯಲ್ಲಿನ ಸಹ ವಿದ್ಯುತ್ ಘಟಕವು 30 ಮೆಗಾವ್ಯಾಟ್ ಸಾಮರ್ಥ್ಯದ್ದಾಗಿದೆ. ಆದರೆ, ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಕಬ್ಬು ಅರೆಯುವಿಕೆ ಸಾಧ್ಯವಿಲ್ಲ. ಕಬ್ಬಿನ ಕೊರತೆಯಾಗಲಿದೆ. ಆದ್ದರಿಂದ ಸಹ ವಿದ್ಯುತ್ ಘಟಕದ ಟರ್ಬೈನ್ ಅನ್ನು ಬ್ಯಾಕ್ ಪ್ರೆಷರ್ ಆಗಿ ಪರಿವರ್ತಿಸಿ 20 ರಿಂದ 24 ಮೆಗಾವ್ಯಾಟ್‌ಗೆ ಇಳಿಸಲಾಗಿದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ಕಬ್ಬು ಪೂರೈಕೆದರೂ ಸಹ ವಿದ್ಯುತ್ ಘಟಕವನ್ನು ಚಾಲನೆ ಮಾಡಬಹುದು. ನಿರೀಕ್ಷೆಯಂತೆ ಪ್ರತಿದಿನ ಮುರ‌್ನಾಲ್ಕು ಸಾವಿರ ಟನ್ ಕಬ್ಬನ್ನು ಅರೆದರೆ ಕಾರ್ಖಾನೆಗೆ ಬೇಕಾದ 6 ರಿಂದ 7 ಮೆಗಾವ್ಯಾಟ್ ವಿದ್ಯುತ್‌ನ್ನು ಬಳಸಿಕೊಂಡು ಉಳಿದಿದ್ದನ್ನು ಸೆಸ್ಕ್‌ಗೆ ಪೂರೈಸಬಹುದು. ಆಗ ಸೆಸ್ಕ್‌ನಿಂದ ನಮಗೆ ವಿದ್ಯುತ್ ಮಾರಾಟದ ಮೊತ್ತ ಪಾವತಿಯಾಗುತ್ತದೆ. ಜತೆಗೆ ಸೆಸ್ಕ್ ವಿದ್ಯುತ್ ಬಾಕಿ ಮೇಲಿನ ಹೊರೆಯೂ ಕಡಿಮೆಯಾಗಲಿದೆ ಎಂದು ವಿವರಿಸಿದರು.
ಮೈಷುಗರ್ ಮುಖ್ಯ ಕಬ್ಬು ಅಭಿವೃದ್ಧಿ ಅಧಿಕಾರಿ ಡಿ.ಎನ್.ಚಂದ್ರಶೇಖರ್ ಹಾಜರಿದ್ದರು.