ಹುನ್ನಾರ ನಿಲ್ಲಿಸಿ, ಕಾರ್ಖಾನೆ ಆರಂಭಿಸಿ

17_12_Mdy_Sunandajayram
Published on

ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಮಾರಾಟ ಮಾಡುವ ತೆರೆಮರೆಯ ಹುನ್ನಾರ ನಿಲ್ಲಿಸಿ, ಕೂಡಲೇ ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಒತ್ತಾಯಿಸಿದರು.
ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸಕ್ಕರೆ ಸಚಿವರು ಹುನ್ನಾರ ನಡೆಸುತ್ತಿದ್ದಾರೆ. ಇದರ ವಿರುದ್ಧ ರೈತರು, ಜನಪರ ಹೋರಾಟಗಾರರು, ರೈತ ಹಾಗೂ ದಲಿತ ಸಂಘಟನೆಗಳು ಈಗಾಗಲೇ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗುತ್ತಿಗೆ ಆಧಾರದಲ್ಲಿ ಖಾಸಗಿಯವರಿಗೆ ನೀಡುವ ತಯಾರಿ ಗೌಪ್ಯವಾಗಿ ನಡೆಯುತ್ತಿದೆ. ಅಂತೆಯೆ ಇದಕ್ಕೆ ಟೆಂಡರ್ ಕರೆಯಲು ಸಿದ್ಧತೆ ನಡೆಸಿದ್ದು, ಜಿಲ್ಲೆಯ ಜನರಿಗೆ ದ್ರೋಹ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದರೊಂದಿಗೆ ಮೈಷುಗರ್‌ನ ಒಟ್ಟು 1800 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾರಾಟ ಮಾಡುವ ಯತ್ನ ನಡೆಯುತ್ತಿದೆ. ಖಾಸಗಿಗೆ ವಹಿಸುವ ಮೂಲಕ ಮುಖ್ಯಮಂತ್ರಿ, ಸಂಸದರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಹಗಲು ದರೋಡೆ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ದಸಂಸ ರಾಜ್ಯ ಸಂಚಾಲಕ ಎಂ.ಬಿ.ಶ್ರೀನಿವಾಸ್, ಸಿಐಟಿಯು ಸಿ.ಕುಮಾರಿ, ರೈತ ಮುಖಂಡರಾದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net