ಎಥೆನಾಲ್ ಘಟಕ ಹೊಸದಾಗಿ ಪ್ರಾರಂಭಿಸಿ: ಉಸ್ತುವಾರಿ ಸಚಿವ ಚಲುವರಾಯಸ್ವಾಮಿಗೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮನವಿ

1 (1)
Published on

ಮಂಡ್ಯ: ಮೈಷುಗರ್ ಕಾರ್ಖಾನೆಗೆ 50 ಕೋಟಿ ರೂ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರವನ್ನು ಅಭಿನಂದಿಸಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು, ಕಾರ್ಖಾನೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಎಥೆನಾಲ್ ಘಟಕ ಹೊಸದಾಗಿ ಆರಂಭಿಸುವುದು ಸೇರಿದಂತೆ ಹಲವು ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿರುವ ಸಮಿತಿ ಸದಸ್ಯರು, ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆ ಅನುಕೂಲವಾಗುವಂತೆ ಅನುದಾನ ಬಿಡುಗಡೆ ಮಾಡಿರುವುದರಿಂದ ರೈತರು ನಿರಾಳರಾಗಿದ್ದಾರೆ. ಇದರೊಂದಿಗೆ ಕಾರ್ಖಾನೆ ಶಾಶ್ವತವಾಗಿ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯಲಿದೆ ಎನ್ನುವ ವಿಶ್ವಾಸವಿದೆ. ಇದಕ್ಕೆ ಪೂರಕವಾಗಿ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ವಿಶ್ವಾಸವಿದೆ. ಜತೆಗೆ ಹೊಸ ಕಾರ್ಖಾನೆ ಸ್ಥಾಪಿಸಲು ನಿರ್ಧಾರ ಮಾಡಿರುವುದು ಸಂತೋಷದ ವಿಷಯ. ಅದರಂತೆ ಕಾರ್ಖಾನೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲ ತುರ್ತು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.

ಅದರಂತೆ ಸಕ್ಕರೆ ಘಟಕ ಸರಿಯಾಗಿದ್ದು, ಪ್ರಾರಂಭ ಮಾಡಬಹುದು. ವಿದ್ಯುತ್ ಘಟಕ ಕಾರ್ಯಗತದಲ್ಲಿದ್ದು, ಅಲ್ಪಸ್ವಲ್ಪ ಕಾಯಕಲ್ಪ ಮಾಡಬೇಕು. ಡಿಸ್ಟಲರಿ ಘಟಕ ಸಿದ್ಧವಿದ್ದು, ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಬೇಕು. ಕಾರ್ಖಾನೆಯ ಲೆಕ್ಕ ಪರಿಶೋಧನೆಯು 2015ರಿಂದ ಬಾಕಿ ಇದೆ. ಆದ್ದರಿಂದ ಲೆಕ್ಕ ಪರಿಶೋಧನೆಯನ್ನು ಮುಗಿಸಿ ಒಂದೇ ವರ್ಷದ ಜಿಬಿಎಂನಲ್ಲಿ ಅಂಗೀಕಾರ ಮಾಡಬೇಕು. ಇನ್ನು ವಾರ್ಷಿಕ ಲೆಕ್ಕ ಪರಿಶೋಧನಾ ಸಭೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದ್ದು, ಭೌತಿಕವಾಗಿ ನಡೆಸಬೇಕೆಂದು ಆಗ್ರಹಿಸಿದರು.

ಅಂತೆಯೇ ಮಂಡ್ಯ ನಗರದ ತೋಟಗಾರಿಕೆ ಇಲಾಖೆಗೆ ಸೇರಿದ 2 ಎಕರೆ 30 ಗುಂಟೆ ಜಮೀನನ್ನು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಹಸ್ತಾಂತರ ಮಾಡಲಾಗುತ್ತಿದೆ. ಇದಕ್ಕೆ ಈಗಾಗಲೇ ಹಲವು ವಿರೋಧ ಮಾಡಲಾಗಿದ್ದು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಮಾತ್ರವಲ್ಲದೆ ಜಾಗ ಹಸ್ತಾಂತರ ವಿರೋಧಿಸಿ ಮಂಡ್ಯ ನಗರಸಭೆಯಲ್ಲಿಯೂ ನಿರ್ಣಯ ಮಾಡಲಾಗಿದೆ. ಆದ್ದರಿಂದ ತೋಟಗಾರಿಕೆ ಪಿತಾಮಹಾ ಎಂ.ಎಚ್.ಮರೀಗೌಡರ ತೋಟಗಾರಿಕೆಯ ಅಭಿವೃದ್ಧಿ ಆಶಯ, ಮಂಡ್ಯ ನಗರದ ಸೌಂದರ್ಯ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹಸ್ತಾಂತರ ಮಾಡಬಾರದೆಂದು ಒತ್ತಾಯಿಸಿದರು.

ಇನ್ನು ಮಂಡ್ಯ ನಗರದ ಆರ್‌ಎಪಿಸಿಎಂಎಸ್ ಸುಮಾರು 60 ದಶಕದ ಹಿಂದೆ ಸ್ಥಾಪಿತವಾಗಿದೆ. ಹಿರಿಯ ಸಹಕಾರಿ ಧುರೀಣರ ಹೊಸ ಆಲೋಚನೆಯಿಂದ ರೈತ ಸಭಾಂಗಣವನ್ನು ನಿರ್ಮಿಸಲಾಗಿತ್ತು. ಇದು ದೇಶದಲ್ಲಿಯೇ ಅದ್ಭುತ ಸಭಾಂಗಣವೆನ್ನುವ ಹೆಗ್ಗಳಿಕೆ ಹೊಂದಿದೆ. ಆದರೆ ಕಳೆದ ಕೆಲ ವರ್ಷದಿಂದ ಸಭಾಂಗಣ ಶಿಥಿಲವಾಗಿದ್ದು, ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ ಎಂದು ಆಗ್ರಹಿಸಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಉಪಾಧ್ಯಕ್ಷ ಎಂ.ಎಸ್.ಆತ್ಮಾನಂದ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಕೀಲಾರ ಸೋಮಶೇಖರ್, ಮಂಜುನಾಥ್, ಬೋರಲಿಂಗೇಗೌಡ, ಶಂಭೂನಹಳ್ಳಿ ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net