ಪ್ರತಿ ಟನ್‌ಗೆ 2,920 ರೂ ಪಾವತಿ: ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಮಾಹಿತಿ

1 (1)
Published on

ಮಂಡ್ಯ: ಕೇಂದ್ರ ಸರ್ಕಾರವು ನಿಗದಿ ಮಾಡಿರುವ ಎಫ್‌ಆರ್‌ಪಿ ದರ ಪ್ರತಿ ಟನ್ ಕಬ್ಬಿಗೆ 2,920 ರೂಗಳನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರವು ಬೆಲೆಯನ್ನು ಹೆಚ್ಚು ಮಾಡಿ ಆದೇಶ ಮಾಡಿದಲ್ಲಿ ಹೆಚ್ಚುವರಿ ಮೊತ್ತವನ್ನು ಸಹ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮೈಷುಗರ್ ಕಂಪನಿಯ ಏಳಿಗೆಗೆ ರೈತರು ಹೆಚ್ಚಿನ ರೀತಿಯಲ್ಲಿ ಗುಣಮಟ್ಟದ ತಾಜಾ ಕಬ್ಬನ್ನು ಸರಬರಾಜು ಮಾಡಬೇಕಿದೆ. ಇನ್ನು ಕಾರ್ಖಾನೆಗೆ ಆ.2ರಂದು ಸಹವಿದ್ಯುತ್ ಘಟಕದ ಟರ್ಬೈನ್ ಬರಲಿದ್ದು, ಅದನ್ನು ಮುಂದಿನ 7 ದಿನದಲ್ಲಿ ಅಳವಡಿಸಿ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ 2023-24ನೇ ಸಾಲಿನ ಕಬ್ಬು ಅರೆಯುವ ಕಾರ್ಯವನ್ನು ಜು.6ರಂದು ಪ್ರಾರಂಭಗೊಳಿಸಿದ್ದು, ಕಬ್ಬು ಸರಬರಾಜು ಮಾಡಿರುವ ರೈತರ ಸಹಕಾರದಿಂದ ಆ.1ರವರೆಗೆ 56,626 ಮೆಟ್ರಿಕ್ ಟನ್ ಕಬ್ಬನ್ನು ನುರಿಸಲಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿರುವ ಮೈಷುಗರ್ ಕಾರ್ಖಾನೆ 1933ರಿಂದ ಪ್ರಾರಂಭವಾಗಿದ್ದು, ತನ್ನದೆ ಆದ ಇತಿಹಾಸ ಹೊಂದಿದೆ. ಕೆಲವು ವರ್ಷಗಳ ನಂತರ ಕಬ್ಬು ಅರೆಯುವ ಕಾರ್ಯವು ನಿಂತು ಹೋಗಿದ್ದರೂ, 2022-23ನೇ ಸಾಲಿನಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಿ ಬಳಿಕ ಮುಗಿಸಿದ ನಂತರ ಅನೇಕ ತೊಂದರೆಗಳನ್ನು ಎದುರಿಸಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಕ್ಕರೆ ಸಚಿವರು, ಶಾಸಕರು, ಕಬ್ಬು ಬೆಳೆಗಾರರ ಸಂಘ, ರೈತ ಪರ ಸಂಘಟನೆಗಳು, ಕಬ್ಬು ಸಾಗಾಣಿಕ ವಾಹನಗಳ ಮಾಲೀಕರ ಸಹಕಾರದಿಂದ ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯುವ ಕಾರ್ಯವನ್ನು ಸುಗಮವಾಗಿ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net