

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಸ್ಥಾಪನೆ ಸಂಬಂಧ ಆಡಳಿತ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಶೀಲಿಸಲಾಗುವುದೆಂದು ಸಕ್ಕರೆ ಸಚಿವ ಶಂಕರ ಪಾಟೀಲ ಮನೇನಕೊಪ್ಪ ಭರವಸೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಕಾರ್ಖಾನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಂಗಳವಾರ ಅಧಿವೇಶನದಲ್ಲಿ ಸಚಿವರು ಉತ್ತರ ನೀಡಿದ್ದಾರೆ. ಎಥೆನಾಲ್ ಘಟಕ ಪ್ರಾರಂಭಿಸುವ ಸಂಬಂಧ ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. 2019-20ನೇ ಸಾಲಿನಲ್ಲಿ ಸ್ಥಗಿತಗೊಂಡಿದ್ದ ಕಬ್ಬು ಅರೆಯುವ ಹಂಗಾಮನ್ನು 2022-23ರ ಆಯವ್ಯಯದಲ್ಲಿ ಘೋಷಿಸಿದಂತೆ ಸೆ.20ರಿಂದ ಪ್ರಾರಂಭಿಸಲಾಗಿದೆ. ಕಾರ್ಖಾನೆಗೆ 32.58 ಕೋಟಿ ರೂ. ಅನುದಾನ, 15 ಕೋಟಿ ರೂ. ಸಾಲವನ್ನು ಬಿಡುಗಡೆ ಮಾಡಲಾಗಿದೆ. ಉಪಕರಣ ಖರೀದಿ ಮತ್ತು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಇನ್ನು 23.25 ಕೋಟಿ ರೂ. ಬಿಡುಗಡೆ ಮಾಡುವ ಪ್ರಸ್ತಾಪ ಆರ್ಥಿಕ ಇಲಾಖೆಯ ಮುಂದಿದೆ. ಈ ವರ್ಷದ ಆದಾಯದಲ್ಲಿ ಯಂತ್ರೋಪಕರಣಗಳ ದುರಸ್ತಿಗಾಗಿ 50 ಕೋಟಿ ರೂ. ಅನುದಾನ ಘೋಷಿಸಲಾಗಿತ್ತು. ಅದರಲ್ಲಿ 32.58 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, 17.42 ಕೋಟಿ ರೂ. ಬಿಡುಗಡೆಗೆ ಬಾಕಿ ಇದೆ. ಅದರ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆಂದು ತಿಳಿಸಿದ್ದಾರೆ.
ಮಂಡ್ಯ ವಿವಿಗೆ 1 ಕೋಟಿ ರೂ. ಅನುದಾನ: 2019ರಲ್ಲಿ ಮಂಡ್ಯದಲ್ಲಿ ಪ್ರಾರಂಭಿಸಲಾಗಿರುವ ಮಂಡ್ಯ ವಿಶ್ವವಿದ್ಯಾಲಯಕ್ಕೆ 1 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ 75 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉತ್ತರ ನೀಡಿದ್ದಾರೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ವೈಜ್ಞಾನಿಕ ಉಪಕರಣಗಳಿಗೆ 20 ಲಕ್ಷ ರೂ., ಪೀಠೋಪಕರಣಕ್ಕೆ 15 ಲಕ್ಷ ರೂ., ಗ್ರಂಥಾಲಯ ಪುಸ್ತಕಕ್ಕೆ 5 ಲಕ್ಷ ರೂ., ಗಣಕ ಯಂತ್ರ, ಪ್ರಿಂಟರ್ ಮತ್ತು ಜೆರಾಕ್ಸ್ ಮಷಿನ್‌ಗೆ 20 ಲಕ್ಷ ರೂ., ಕುಡಿಯುವ ನೀರಿನ ಘಟಕಕ್ಕೆ 5 ಲಕ್ಷ ರೂ., ಮೂಲ ಸೌಲಭ್ಯಗಳ ನಿರ್ವಹಣೆಗೆ 10 ಲಕ್ಷ ರೂ., ಹೊಸ ಆಡಳಿತ ಭವನದ ಆಂತರಿಕ ಕೆಲಸ ಕಾರ್ಯಕ್ಕೆ 15 ಲಕ್ಷ ರೂ., ಸಿ.ಸಿ ಕ್ಯಾಮೆರಾ ಅಳವಡಿಕೆಗೆ 10 ಲಕ್ಷ ರೂ. ಅಂದಾಜು ವೆಚ್ಚವನ್ನು ನಿಗದಿ ಮಾಡಲಾಗಿದೆ ಎನ್ನುವ ವಿವರ ಸಚಿವರಿಂದ ಬಂದಿದೆ. ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ 276 ಕಟ್ಟಡಗಳಿಗೆ ಹಾನಿಯಾಗಿದೆ. ಕೆ.ಆರ್.ಪೇಟೆ ತಾಲೂಕಿನ 52 ಸರ್ಕಾರಿ ಶಾಲೆಗೆ 1.4 ಕೋಟಿ ರೂ., ಪಾಂಡವಪುರ ತಾಲೂಕಿನಲ್ಲಿ 17 ಶಾಲೆಗೆ 34 ಲಕ್ಷ ರೂ., ಮಂಡ್ಯ ಉತ್ತರ ವಲಯದ 14 ಶಾಲೆಗೆ 28 ಲಕ್ಷ ರೂ., ಮಂಡ್ಯ ದಕ್ಷಿಣ ವಲಯದಲ್ಲಿ 52 ಶಾಲೆಗೆ 1.4 ಕೋಟಿ ರೂ., ಮದ್ದೂರಿನಲ್ಲಿ 28 ಶಾಲೆಗೆ 56 ಲಕ್ಷ ರೂ., ಮಳವಳ್ಳಿ 23 ಶಾಲೆಗೆ 46 ಲಕ್ಷ ರೂ., ನಾಗಮಂಗಲದಲ್ಲಿ 42 ಶಾಲೆಗೆ 84 ಲಕ್ಷ ರೂ., ಶ್ರೀರಂಗಪಟ್ಟಣದಲ್ಲಿ 48 ಶಾಲೆಗೆ 96 ಲಕ್ಷ ರೂ.ನಂತೆ 5.52 ಕೋಟಿ ರೂ.ಗಳ ಅನುದಾನವನ್ನು ದುರಸ್ತಿಗೆ ನಿಗದಿಪಡಿಸಲಾಗಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಮಾಹಿತಿ ನೀಡಿದ್ದಾರೆಂದು ತಿಳಿಸಿದ್ದಾರೆ.