ವಾಮಮಾರ್ಗ ಬಳಸಿ ಸೇವೆಯಿಂದ ಬಿಡುಗಡೆ: ಮೈಷುಗರ್ ಕಂಪನಿ ಅಸೋಸಿಯೇಷನ್‌ನ ಕಾರ್ಯದರ್ಶಿ ವೆಂಕಟೇಶ್ ಗಂಭೀರ ಆರೋಪ

Mysugar)
Published on

ಮಂಡ್ಯ: ಸುಳ್ಳು ಮಾಹಿತಿ ಕೊಟ್ಟು, ವಾಮಮಾರ್ಗ ಬಳಸಿ ಬಲವಂತದ ಕಾರ್ಮಿಕರು ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಮಾಡಲಾಗಿದೆ. ಮೈಷುಗರ್ ಆಡಳಿತ ಮಂಡಳಿಯಿಂದಾಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದು ಮೈಷುಗರ್ ಕಂಪನಿ ಎಂಪ್ಲಾಯೀಸ್ ಅಸೋಸಿಯೇಷನ್‌ನ ಕಾರ್ಯದರ್ಶಿ ವೆಂಕಟೇಶ್ ಆಗ್ರಹಿಸಿದರು.

ಅಮಾಯಕ ಸ್ಥಳೀಯ ಕನ್ನಡಿಗ ನೌಕರರ ಮೇಲೆ ಒತ್ತಡ ತಂದು ಸ್ವಯಂ ನಿವೃತ್ತಿ ಬರೆದುಕೊಳ್ಳುವಂತೆ ಹೆದರಿಕೆ ಹುಟ್ಟಿಸಿ 144 ಕಾರ್ಮಿಕರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಈ ಪೈಕಿ 22 ಜನರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಅದರಂತೆ ಉಳಿದ 122 ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಅಂದಿನ ಸರ್ಕಾರದ ಕಾರ್ಯದರ್ಶಿ ಶೀಲಾಬಾಯಿ ಅವರು ಕಂಪನಿಯನ್ನು 40 ವರ್ಷಗಳ ಲೀಸ್ ಔಟ್ ಮಾಡಲಾಗಿದೆ ಎಂದು ಗೆಜೆಟ್ ನೋಟಿಫಿಕೇಷನ್ ಪ್ರತಿಯನ್ನು ಕಾರ್ಮಿಕ ಮುಖಂಡರಿಗೆ ನೀಡಿ, ಗೊಂದಲ ಉಂಟು ಮಾಡಿ ವಿಆರ್‌ಎಸ್ ಮೂಲಕ ಅಮಾಯಕ ಕಾರ್ಮಿಕರನ್ನು ಸೇವೆಯಿಂದ ಹೊರಹಾಕಿದರು. ಆದರೆ ನಂತರ ಅದೇ ಆದೇಶವನ್ನು ಒಂದು ವರ್ಷದ ಬಳಿಕ ವಾಪಸ್ ಪಡೆದಿದ್ದಾರೆ. ಹಿಂದಿನ ಅಧ್ಯಕ್ಷ ಜೆ.ಶಿವಲಿಂಗೇಗೌಡ ಕೂಡ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ನಡೆಸಲು ಸಾಧ್ಯವಿಲ್ಲವೆಂದು ಸುಳ್ಳು ಹೇಳಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಯಂ ನಿವೃತ್ತಿ ಬೇಡವೆಂದರೂ ಬಲವಂತವಾಗಿ ಕಂಪನಿ ಸೇವೆಯಿಂದ ಅಮಾಯಕ-ನುರಿತ ಕಾರ್ಮಿಕರನ್ನು ಕಂಪನಿ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಕೆಲವರನ್ನು ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿ ಅವರಿಗೆ ನಿಗದಿತ ಸಮಯಕ್ಕೆ ವೇತನ ನೀಡದೆ, ಸಾರಿಗೆ ಭತ್ಯೆಯನ್ನೂ ನೀಡಲಿಲ್ಲ. ಆ ಸಮಯದಲ್ಲಿ ಕರೊನಾ ಕಾರಣ ಸ್ವಯಂ ನಿವೃತ್ತಿ ತೆಗೆದುಕೊಳ್ಳದಿದ್ದರೆ ಇದೇ ರೀತಿ ಮುಂದುವರಿಸುವುದಾಗಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಕಿಡಿಕಾರಿದರು.

ಮಾ.2ರಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರೂ ಸಹ ಈಗಿನ ವ್ಯವಸ್ಥಾಪಕರು ಯಾವುದೇ ಸ್ಪಂದನೆ ನೀಡುತ್ತಿಲ್ಲ. 2022-23ರಲ್ಲಿ ಕಂಪನಿ ಸ್ಥಳೀಯ ನುರಿತ ಕೆಲಸಗಾರರನ್ನು ನೇಮಿಸಿಕೊಳ್ಳದೆ ಹೊರ ರಾಜ್ಯದ ಕನ್ನಡೇತರ ಕಾರ್ಮಿಕರನ್ನು ಬಲವಂತವಾಗಿ ಕರೆತಂದು ಮೈಷುಗರ್ ಕಂಪನಿಯ 90 ವರ್ಷಗಳ ಇತಿಹಾಸದಲ್ಲಿ ಅನುಭವವಿಲ್ಲದ ಕಾರ್ಮಿಕರಿಂದ ಒಂದು ಲಕ್ಷ ಟನ್ ಕಬ್ಬು ನುರಿಸಿ ಕೇವಲ ಶೇ.3 ರಿಂದ 4ರಷ್ಟು ಸಕ್ಕರೆ ಉತ್ಪಾದನೆ ಮಾಡುವ ಮೂಲಕ ಕಂಪನಿಗೆ 20 ರಿಂದ 30 ಕೋಟಿ ರೂ ನಷ್ಟ ಉಂಟುಮಾಡಿದೆ ಎಂದು ಆರೋಪಿಸಿದರು.

ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಮುಖಂಡರಾದ ಮಧು, ಬಸವರಾಜು, ವೀರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net