ಜು.6ರಿಂದ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

4
Published on

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಜು.6ರಿಂದ ಕಬ್ಬು ಅರೆಯುವಿಕೆ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2023-24ನೇ ಸಾಲಿನ ಕಬ್ಬು ಅರೆಯುವಿಕೆ ಕುರಿತಂತೆ ಬುಧವಾರ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೈಷುಗರ್ ಕಾರ್ಖಾನೆ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕಬ್ಬು ಕಟಾವನ್ನು ಜು.4ರಿಂದ ಪ್ರಾರಂಭಿಸಲಾಗುವುದು. ಆದ್ದರಿಂದ ಕಾರ್ಖಾನೆ ವ್ಯಾಪ್ತಿಯ ಬೆಳೆಗಾರರು ಕಬ್ಬನ್ನು ಬೇರೆ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.

ಇನ್ನು ಕಬ್ಬು ಕಟಾವು ಮಾಡುವ ಸಂಬಂಧ ರೈತರ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಇನ್ನು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಮಾತ್ರ ಕಬ್ಬು ಖರೀದಿಸಲು ಕ್ರಮ ವಹಿಸಬೇಕು. ಅದನ್ನು ಹೊರತುಪಡಿಸಿ ಬೇರೆ ಸಕ್ಕರೆ ಕಾರ್ಖಾನೆ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕಬ್ಬು ಖರೀದಿಸಿ ತೊಂದರೆ ಉಂಟು ಮಾಡಿದರೆ ನಿಯಮಾನುಸಾರ ಶಿಸ್ತು ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣ ಕುಮಾರ್, ತಹಸೀಲ್ದಾರ್‌ಗಳಾದ ನಿಸರ್ಗಪ್ರಿಯಾ, ನರಸಿಂಹಮೂರ್ತಿ, ಮೈಷುಗರ್ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಕೋರಮಂಡಲ ಸಕ್ಕರೆ ಕಾರ್ಖಾನೆಯ ಬಾಬುರಾಜ್, ರವಿರೆಡ್ಡಿ, ಕೊಪ್ಪ ಎನ್‌ಎಸ್‌ಸಿಎಲ್ನ ಹಿರಿಯ ವ್ಯವಸ್ಥಾಪಕ ಎಚ್.ಎಸ್.ಸೋಮಶೇಖರ್, ಚಾಂಷುಗರ್ ಕಾರ್ಖಾನೆಯ ಸಹಾಯಕ ವ್ಯವಸ್ಥಾಪಕ ಮಹದೇವಪ್ರಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net