ಸುಸ್ಥಿತಿಯಲ್ಲಿದೆ ಮೈಷುಗರ್ ಕಾರ್ಖಾನೆ ಆತಂಕಬೇಡ: 11,019 ಕ್ವಿಂಟಾಲ್ ಸಕ್ಕರೆ ಉತ್ಪಾದನೆ, 10 ಲಕ್ಷ ಯೂನಿಟ್ ವಿದ್ಯುತ್ ರಫ್ತು

MySugar Factory Chairman Press Conference Mandya
Published on

ಮಂಡ್ಯ: ಜಿಲ್ಲೆಯ ಜೀವನಾಡಿ ಮೈಷುಗರ್ ಕುರಿತು ಇತ್ತೀಚೆಗೆ ಸಾಕಷ್ಟು ದೂರು ಕೇಳಿಬಂದ ಹಾಗೂ ಬಿಜೆಪಿಯಿಂದ ಪ್ರತಿಭಟನೆ ನಡೆದಿದ್ದ ಹಿನ್ನೆಲೆಯಲ್ಲಿ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ದಾಖಲೆ ಬಿಡುಗಡೆಗೊಳಿಸಿದರು. ಜತೆಗೆ ಕಾರ್ಖಾನೆ ಸುಸ್ಥಿತಿಯಲ್ಲಿದ್ದು, ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಬ್ಬು ಕಟಾವು ಮಾಡುವ ತಂಡ ಕಾರ್ಖಾನೆ ಹಣವನ್ನು ಹೊತ್ಯೊಯಿದ್ದಾರೆ. ನಿಗದಿತ ಅವಧಿಗಿಂತ ತಡವಾಗಿ ಕಬ್ಬು ಕಟಾವು ಮಾಡಲಾಗುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆ ಸ್ಥಗಿತಗೊಳಿಸಲಾಗಿದೆ ಎನ್ನುವ ಗಂಭೀರ ಆರೋಪ ಮಾಡಲಾಗಿತ್ತು. ಇದಕ್ಕೆ ದಾಖಲೆ ಸಹಿತ ಉತ್ತರ ನೀಡಿದ ಸಿ.ಡಿ.ಗಂಗಾಧರ, ಖಾಸಗಿಯವರಿಗೆ ಮಾರಾಟ ಮಾಡಲು ಹುನ್ನಾರದಲ್ಲಿದ್ದ ಕಾರ್ಖಾನೆಯನ್ನು ಜಿಲ್ಲೆಯ ಜನರ ಹೋರಾಟದಿಂದ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಜತೆಗೆ ರಾಜ್ಯಸರ್ಕಾರದ ಸಹಕಾರದಿಂದ ಪಾರದರ್ಶಕವಾಗಿ ಕೆಲಸ ನಡೆಯುತ್ತಿದೆ. ಜತೆಗೆ ಒಂದಷ್ಟು ಮಹತ್ವದ ಬದಲಾವಣೆಯಾಗಿದ್ದು, ಕಾರ್ಖಾನೆ ದೃಷ್ಟಿಯಿಂದ ದೊಡ್ಡ ಮಟ್ಟದ ಅನುಕೂಲವಾಗಿದೆ. ಆದ್ದರಿಂದ ಚುನಾವಣೆ ಬಂದಾಗಷ್ಟೇ ರಾಜಕೀಯ ಮಾಡಿ, ಕಾರ್ಖಾನೆ ವಿಚಾರದಲ್ಲಿ ಇಲ್ಲದ ಆರೋಪ ಮಾಡುವುದು ಬೇಡ ಎಂದು ತಿರುಗೇಟು ನೀಡಿದರು.
ಆಯುಕ್ತರ ಆದೇಶ ಕಾರಣ: ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವಾಗಲು ತಡವಾಗಲು ಸಕ್ಕರೆ ಆಯುಕ್ತರ ಆದೇಶವೇ ಕಾರಣ. ಪ್ರತಿ ಬಾರಿಯಂತೆ ಜುಲೈನಲ್ಲಿಯೇ ಕಬ್ಬು ನುರಿಸುವಿಕೆ ಪ್ರಾರಂಭಿಸಬೇಕಿತ್ತು. ಆದರೆ ಆಯುಕ್ತರು ಆಗಸ್ಟ್‌ನಿಂದ ಪ್ರಾರಂಭಿಸಬೇಕೆಂದು ಆದೇಶ ಹೊರಡಿಸಿದರು. ಇದರ ವಿರುದ್ಧವಾಗಿ ಕಿಸಾನ್ ಕಾಂಗ್ರೆಸ್‌ನಿಂದ ವಿರೋಧವನ್ನು ಮಾಡಲಾಗಿತ್ತು. ಆದಾಗ್ಯೂ ಆಯುಕ್ತರ ಆದೇಶ ಉಲ್ಲಂಘಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಕಬ್ಬು ಕಟಾವು ತಡವಾಗುವಂತಾಯಿತು ಎಂದು ಗಂಗಾಧರ ಸ್ಪಷ್ಟನೆ ನೀಡಿದರು.
ಈ ನಡುವೆಯೂ ಆ.2ರಿಂದ ಅಧಿಕೃತವಾಗಿ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವಿಕೆ ಪ್ರಾರಂಭಿಸಲಾಯಿತು. ಈವರೆಗೆ 30 ಸಾವಿರ ಮೆಟ್ರಿಕ್ ಟನ್ ಕಬ್ಬನ್ನು ನುರಿಸಲಾಗಿದೆ. ಕಬ್ಬು ಕಟಾವು ಮಾಡಲು 152 ಬ್ಯಾಚ್‌ಗಳನ್ನು ನಿಯೋಜಿಸಲಾಗಿದೆ. ಆ.22ರವರೆಗೆ 11,019 ಕ್ವಿಂಟಾಲ್ ಸಕ್ಕರೆ ಹಾಗೂ 1,060 ಮೆಟ್ರಿಕ್ ಟನ್ ಕಾಕಂಬಿ ಉತ್ಪಾದಿಸಲಾಗಿದೆ. ಪ್ರಮುಖವಾಗಿ ಸಹ ವಿದ್ಯುತ್ ಘಟಕದಿಂದ 22,27,700 ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದ್ದು, ಈ ಪೈಕಿ 12,27,400 ಯೂನಿಟ್ ಅನ್ನು ಕಾರ್ಖಾನೆಗೆ ಬಳಕೆ ಮಾಡಿ ಸುಮಾರು 10 ಲಕ್ಷ ಯೂನಿಟ್ ಅನ್ನು ಚೆಸ್ಕಾಂಗೆ ರಫ್ತು ಮಾಡಲಾಗಿದೆ. ಈ ನಡುವೆ ಟ್ರಾನ್ಸ್‌ಫಾರ್ಮರ್ ಸಮಸ್ಯೆಯಿಂದ ಕೆಲವು ಗಂಟೆ ಕಾರ್ಖಾನೆ ಸ್ಥಗಿತಗೊಂಡಿತ್ತು. ಆದರೆ ತ್ವರಿತವಾಗಿಯೇ ಅದನ್ನು ಬಗೆಹರಿಸಿ ಕಬ್ಬು ನುರಿಸುವಿಕೆ ನಡೆಸಲಾಯಿತು ಎಂದು ವಿವರಿಸಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್, ಅಪ್ಪಾಜಿಗೌಡ, ಮಂಜುನಾಥ್, ನಾಗರಾಜು, ಯೋಗೇಶ್, ಉಮೇಶ್, ದ್ಯಾವಣ್ಣ ಇದ್ದರು.

111 ಕೋಟಿ ರೂ ಪಾವತಿಗೆ ವಿನಾಯಿತಿ
ಕಾರ್ಖಾನೆಗೆ 270 ಕೋಟಿ ರೂ ಸಾಲವಿದೆ. ಈ ಹಿನ್ನೆಲೆಯಲ್ಲಿ ಅದನ್ನು ತಿರುವಳಿ ಮಾಡುವ ನಿಟ್ಟಿನಲ್ಲಿ ಕೆಲ ಪ್ರಯತ್ನ ಮಾಡಲಾಗಿದ್ದು, ಅದರಲ್ಲಿ ಯಶಸ್ಸು ಕೂಡ ಸಿಕ್ಕಿದೆ ಎಂದು ಸಿ.ಡಿ.ಗಂಗಾಧರ ಮಾಹಿತಿ ನೀಡಿದರು.
ಪ್ರಮುಖವಾಗಿ ಕಾರ್ಖಾನೆಯಲ್ಲಿ ಡಿಸ್ಟಿಲರಿ ಘಟಕವಿದ್ದ ಹಿನ್ನೆಲೆಯಲ್ಲಿ 34 ಕೋಟಿ ರೂ ಆದಾಯ ತೆರಿಗೆ ಕಟ್ಟಬೇಕಿತ್ತು. ಆದರೆ ಸರಿಯಾಗಿ ಪಾವತಿಸದ ಕಾರಣ 111.51 ಕೋಟಿ ರೂ ಆಗಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡಿದ ಪರಿಣಾಮ ತೆರಿಗೆ ಕಟ್ಟದಂತೆ ಜು.8ರಂದು ಕಾರ್ಖಾನೆ ಪರವಾಗಿ ಆದೇಶ ನೀಡಿದೆ. ಇದಲ್ಲದೆ 16 ವರ್ಷದ ಹಿಂದೆ ಕಾರ್ಖಾನೆಗೆಂದು ಕೆಎಸ್‌ಐಐಡಿಸಿಯಲ್ಲಿ 3.74 ಕೋಟಿ ರೂ ಸಾಲ ಪಡೆಯಲಾಗಿದೆ. ಅದನ್ನು ಪಾವತಿಸದ ಪರಿಣಾಮ ಪ್ರಸ್ತುತ 64.5 ಕೋಟಿ ರೂ ಆಗಿತ್ತು. ಈ ಬಗ್ಗೆ ಕೆಎಸ್‌ಐಐಡಿಸಿಯೊಂದಿಗೆ ಚರ್ಚೆ ಮಾಡಲಾಗಿದ್ದು, ಒನ್ ಟೈಂ ಸೆಟ್ಲಮೆಂಟ್ ಮಾಡಲು ಒಪ್ಪಿಗೆ ಪಡೆಯಲಾಗಿದೆ. ಇದರಿಂದ ಬಹುಶಃ 8 ಕೋಟಿ ರೂನಷ್ಟು ಹಣ ಪಾವತಿಸಬಹುದು. ಅಂತೆಯೇ ಕಾರ್ಖಾನೆಗೆ ಸೇರಿದ ಬೆಂಗಳೂರಿನಲ್ಲಿರುವ ಕಟ್ಟಡಕ್ಕೆ 5.83 ಕೋಟಿ ರೂಗಳನ್ನು ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟಬೇಕಿದೆ. ಅಲ್ಲಿಯೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಒನ್ ಟೈಂ ಸೆಟ್ಲಮೆಂಟ್‌ನಂತೆ 2 ಕೋಟಿ ರೂನಷ್ಟು ಪಾವತಿಸಿ 3.81 ಕೋಟಿ ರೂ ಉಳಿತಾಯ ಮಾಡಲಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದರು.

ಕೆಲವರು ಖಾಸಗಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಶಾಮೀಲಾಗಿ ಮೈಷುಗರ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ರೈತರ ಜೀವನಾಡಿಯಾಗಿರುವ ಕಾರ್ಖಾನೆ ವಿಚಾರದಲ್ಲಿ ರಾಜಕೀಯ ಮಾಡುವುದು ತಪ್ಪು. ಪ್ರಸಕ್ತ ಸಾಲಿನಲ್ಲಿ 2,50,000 ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಆದ್ದರಿಂದ ಕಾರ್ಖಾನೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕರಿಸಬೇಕು.ಸಿ.ಡಿ.ಗಂಗಾಧರಮೈಷುಗರ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net