4.5 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ: ಶಾಸಕ ರವಿಕುಮಾರ್ ಗಣಿಗ ಮಾಹಿತಿ

Mysugar Factory Boiler set ablaze Mandya
Published on

ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಈ ಬಾರಿ 4.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ನಗರದ ಮೈಷುಗರ್ ಕಾರ್ಖಾನೆಯ ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಯಾವುದೇ ತೊಂದರೆ ಇಲ್ಲದೆ ಕಬ್ಬು ನುರಿಸಿ ಎಲ್ಲರಿಗೂ ಯಾವುದೇ ತೊಂದರೆ ಇಲ್ಲದೆ ಹಣವನ್ನು ಬಟವಾಡೆ ಮಾಡಲಾಗಿದೆ. ಮೈಶುಗರ್ ಕಾರ್ಖಾನೆಯ ಮೂಲ ಬಂಡವಾಳಕ್ಕೆ 25 ಕೋಟಿ ರೂ ಬಿಡುಗಡೆ ಮಾಡುವಂತೆ ಅಧ್ಯಕ್ಷ ಸಿ.ಡಿ.ಗಂಗಾಧರ ಅವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಹ 25 ಕೋಟಿ ರೂ ಕೊಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ಬಾರಿಯಿಂದ ಸಕ್ಕರೆ ಮಾರಾಟ ಮಾಡಿ ಕಾರ್ಖಾನೆಯನ್ನು ನಡೆಸುವಂತೆ ತಿಳಿಸಲಾಗಿದೆ ಎಂದರು.

ಮೈಶುಗರ್ ರೈತರ ಏಳಿಗೆಗಾಗಿ ನಡೆಸುತ್ತಿರುವ ಕಾರ್ಖಾನೆಯಾಗಿದ್ದು, ಲಾಭ-ನಷ್ಟ ಲೆಕ್ಕ ಮಾಡಿಕೊಂಡು ನಡೆಸಲು ಸಾಧ್ಯವಿಲ್ಲ. ರೈತರ ಒಳಿತಿಗಾಗಿ ಸೇವಾ ಮನೋಭಾವದಿಂದ ಮಾಡಬೇಕಾಗಿದೆ. ನಿಧಾನಗತಿಯಲ್ಲಿ ಕಾರ್ಖಾನೆ ಲಾಭ ಗಳಿಸಲಿದ್ದು, ಇದಕ್ಕೆ ಸಮಯಾವಕಾಶ ಬೇಕಿದೆ. ಈ ಬಾರಿಯೂ ಸಹ ಯಾವುದೇ ಅಡ್ಡಿಯಿಲ್ಲದೆ ಕಾರ್ಖಾನೆಯನ್ನು ಮುನ್ನಡೆಸುತ್ತೇವೆ. ಕಾರ್ಖಾನೆ ವ್ಯಾಪ್ತಿಯ ರೈತರಿಗೆ ಒಪ್ಪಿಗೆ ಪತ್ರ ನೀಡಲಾಗಿದೆ. ಅವರು ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಳ್ಳಲು ಒಪ್ಪಿಗೆ ಪತ್ರ ನೀಡಲಾಗಿದೆ. ಆರ್ಥಿಕವಾಗಿ ಸಬಲರಾಗಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾಂಗ್ರೆಸ್ ಮುಖಂಡರಾದ ಸಿ.ಎಂ.ದ್ಯಾವಪ್ಪ, ಎಚ್.ಕೆ.ರುದ್ರಪ್ಪ, ಅಂಜನಾ ಶ್ರೀಕಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net