ವೇತನ ಪಾವತಿಗೆ ಒತ್ತಾಯ: ಮೈಶುಗರ್ ಮಾಜಿ ನೌಕರರ ಪ್ರತಿಭಟನೆ

Mysugar Ex-Employees Protest Mandya
Published on

ಮಂಡ್ಯ: ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ವಿವಿಧ ವಿಭಾಗಳಲ್ಲಿ ಸೇವೆ ಸಲ್ಲಿಸಿದ್ದವರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು. 2018-19ನೇ ಸಾಲಿನಲ್ಲಿ ಸೇವೆ ಸುರಕ್ಷ ಸೆಕ್ಯೂರಿಟಿ ಸರ್ವಿಸಸ್ ಗುತ್ತಿಗೆ ಸಂಸ್ಥೆಯ ಮೂಲಕ ಸಾಮಗ್ರಿ ನಿರ್ವಾಹಕ ಸೇರಿದಂತೆ ವಿವಿಧ ವಿಭಾಗಳಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದು, ಕೇವಲ 2 ತಿಂಗಳ ವೇತನ ನೀಡಿ 10 ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ವೇತನ ಸಂಬಂಧ ಹಲವು ಬಾರಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ವಾಹಕರನ್ನು ಭೇಟಿ ಮಾಡಲಾಗಿದ್ದು, ವೇತನ ಪಾವತಿಗೆ ಸಬೂಬು ಹೇಳುತ್ತಿದ್ದಾರೆ. ಆದರೆ ಕಳೆದ 6 ವರ್ಷಗಳಿಂದ ಬಾಕಿ ಉಳಿದ 36 ಲಕ್ಷ ರೂಗಳ ವೇತನ ಪಾವತಿಗೆ ಯಾವುದೇ ಕ್ರಮ ವಹಿಸಲಾಗಿಲ್ಲ. ಸಂಕಷ್ಟದ ಸಂದರ್ಭದಲ್ಲಿಯೂ ವೇತನ ಪಾವತಿ ಮಾಡುವಂತೆ ಅಂಗಲಾಚಿದರೂ ಮಾನವೀಯತೆಯನ್ನೂ ತೋರುತ್ತಿಲ್ಲ. ಹಾಲಿ ಅಧ್ಯಕ್ಷರ ಗಮನಕ್ಕೆ ತಂದರೆ ಸಕ್ಕರೆ ಮಾರಾಟವಾದ ನಂತರ ಪಾವತಿ ಮಾಡುವುದಾಗಿ ಹೇಳಿ ಇದುವರೆಗೂ ಪಾವತಿ ಮಾಡದೇ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ವೇತನ ಪಾವತಿ ಸಂಬಂಧ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು, ಸಂಬಅಧಿತ ಅಧಿಕಾರಿಗಳು, ಜಿಲ್ಲಾಧಿಕಾರಿ, ಲೋಕಸಭಾ ಸದಸ್ಯರು, ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿ ವೇತನ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರೂ ಕ್ರಮ ವಹಿಸುತ್ತಿಲ್ಲ ಎಂದು ಎಂದು ಬೇಸರ ವ್ಯಕ್ತಪಡಿಸಿದರು.

ಹೊರಗುತ್ತಿಗೆ ಪಡೆದ ಸುರಕ್ಷ ಸೆಕ್ಯೂರಿಟಿ ಸರ್ವಿಸಸ್ ಸಂಸ್ಥೆಯನ್ನು ಕೇಳಿದರೆ ನಮಗೆ ಯಾವುದೇ ಹಣಸಂದಾಯವಾಗಿಲ್ಲ. ಸಂಸ್ಥೆಯೇ ನೇರವಾಗಿ ಹಣ ಪಾವತಿ ಮಾಡುತ್ತಾರೆ ಎಂದು ಹೇಳುತ್ತಿದ್ದು. 1952ರ ಕಾರ್ಮಿಕ ಕಾಯ್ದೆ ಪ್ರಕಾರ ಮೈಶುಗರ್ ಸಂಸ್ಥೆಯೇ ವೇತನ ಪಾವತಿ ಮಾಡಬೇಕಾಗಿದೆ ಎಂದರು.

ಮಾಜಿ ನೌಕರರಾದ ಎಚ್.ಎಂ.ರಘು, ರಮೇಶ್, ರಾಮದಾಸ್, ಎಸ್.ಸಂಜೀವ್‌ಕುಮಾರ್, ಸಮಿತ್‌ಕುಮಾರ್, ಗಂಗಾಧರ್, ಎಂ.ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net