

ಮಂಡ್ಯ: ಸುಳ್ಳು ಮಾಹಿತಿ ಕೊಟ್ಟು ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿ ನಗರದ ಮೈಷುಗರ್ ಕಾರ್ಖಾನೆ ಎದುರು ನೌಕರರು ಪ್ರತಿಭಟನೆ ನಡೆಸಿದರು.
ಕಾರ್ಖಾನೆ ಎದುರು ಧರಣಿ ಕುಳಿತಿರುವ ನೌಕರರು ವಾಮಮಾರ್ಗ ಬಳಸಿ ಬಲವಂತದ ಕಾರ್ಮಿಕರು ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಮಾಡಲಾಗಿದೆ. ಮೈಷುಗರ್ ಆಡಳಿತ ಮಂಡಳಿಯಿಂದಾಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಮಾಯಕ ಸ್ಥಳೀಯ ನೌಕರರ ಮೇಲೆ ಒತ್ತಡ ತಂದು ಸ್ವಯಂ ನಿವೃತ್ತಿ ಬರೆದುಕೊಳ್ಳುವಂತೆ ಹೆದರಿಕೆ ಹುಟ್ಟಿಸಿ 144 ಕಾರ್ಮಿಕರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಈ ಪೈಕಿ 22 ಜನರನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಅದರಂತೆ ಉಳಿದ 122 ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಅಂದಿನ ಸರ್ಕಾರದ ಕಾರ್ಯದರ್ಶಿ ಶೀಲಾಬಾಯಿ ಅವರು ಕಂಪನಿಯನ್ನು 40 ವರ್ಷಗಳ ಲೀಸ್ ಔಟ್ ಮಾಡಲಾಗಿದೆ ಎಂದು ಗೆಜೆಟ್ ನೋಟಿಫಿಕೇಷನ್ ಪ್ರತಿಯನ್ನು ಕಾರ್ಮಿಕ ಮುಖಂಡರಿಗೆ ನೀಡಿ, ಗೊಂದಲ ಉಂಟು ಮಾಡಿ ವಿಆರ್‌ಎಸ್ ಮೂಲಕ ಅಮಾಯಕ ಕಾರ್ಮಿಕರನ್ನು ಸೇವೆಯಿಂದ ಹೊರಹಾಕಿದರು. ಆದರೆ ನಂತರ ಅದೇ ಆದೇಶವನ್ನು ಒಂದು ವರ್ಷದ ಬಳಿಕ ವಾಪಸ್ ಪಡೆದಿದ್ದಾರೆ ಎಂದು ಆರೋಪಿಸಿದರು.
ಸ್ವಯಂ ನಿವೃತ್ತಿ ಬೇಡವೆಂದರೂ ಬಲವಂತವಾಗಿ ಕಂಪನಿ ಸೇವೆಯಿಂದ ಅಮಾಯಕ-ನುರಿತ ಕಾರ್ಮಿಕರನ್ನು ಕಂಪನಿ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಕೆಲವರನ್ನು ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿ ಅವರಿಗೆ ನಿಗದಿತ ಸಮಯಕ್ಕೆ ವೇತನ ನೀಡದೆ, ಸಾರಿಗೆ ಭತ್ಯೆಯನ್ನೂ ನೀಡಲಿಲ್ಲ. ಆ ಸಮಯದಲ್ಲಿ ಕರೊನಾ ಕಾರಣ ಸ್ವಯಂ ನಿವೃತ್ತಿ ತೆಗೆದುಕೊಳ್ಳದಿದ್ದರೆ ಇದೇ ರೀತಿ ಮುಂದುವರಿಸುವುದಾಗಿ ಮಾನಸಿಕ ಹಿಂಸೆ ನೀಡಿದ್ದಾರೆ. ಮಾ.2ರಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರೂ ಸಹ ಈಗಿನ ವ್ಯವಸ್ಥಾಪಕರು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿವಾರ್ಯ ಎಂದರು.
ಪ್ರತಿಭಟನೆಯಲ್ಲಿ ವೆಂಕಟೇಶ್, ಬೋರೇಗೌಡ, ಬಸವರಾಜು, ವೀರೇಗೌಡ, ಶ್ರೀನಿವಾಸ್, ಪ್ರಮೀಳಾ, ಭಾಗ್ಯ, ರತ್ನಮ್ಮ ಇತರರಿದ್ದರು.