ಮೈಶುಗರ್ ಸುಪರ್ದಿಗೆ 27.39 ಎಕರೆ: ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಮಾಹಿತಿ

MySugar Chairman Press Conference Mandya
Published on

ಮಂಡ್ಯ: ಮೈಶುಗರ್ ಕಾರ್ಖಾನೆಗೆ ಸೇರಿರುವ 27 ಎಕರೆ 39 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಆಸ್ತಿಗಳ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ವಾಪಸ್ ಕಾರ್ಖಾನೆ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ತಿಳಿಸಿದರು.

ಕಾರ್ಖಾನೆ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹದೊಂದು ಮಹತ್ವದ ನಿರ್ಧಾರ ಮಾಡಲಾಯಿತು. ಇದಕ್ಕೆ ಪೂರಕವಾಗಿ ಅಧಿಕಾರಿಗಳೊಂದಿಗೆ ಹಲವು ಸಭೆ ಮಾಡಿ ನಿರ್ಣಯ ಕೈಗೊಳ್ಳಲಾಯಿತು ಅದರಂತೆ ಕಾರ್ಖಾನೆಗೆ ಸೇರಿದ 27.30 ಎಕರೆ ಜಮೀನಿನ ಪೈಕಿ 8.30 ಎಕರೆ ವಾಣಿಜ್ಯ ಬಳಕೆ ಹಾಗೂ 19.09 ಎಕರೆ ವ್ಯವಸಾಯದ ಬಳಕೆಗೆ ಒಳಪಟ್ಟಿದೆ. ಈ ಹಿನ್ನೆಲೆಯಲ್ಲಿ ಅನುಭವದಾರರಾಗಿರುವ ವ್ಯಕ್ತಿಗಳಿಗೆ ಈಗಾಗಲೇ ಅಗತ್ಯ ದಾಖಲೆ ಲಭ್ಯವಿದ್ದರೆ ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಬಾಡಿಗೆ ಪಾವತಿಸಿ ಆಸ್ತಿ ಬಳಕೆಗೆ ಮುಂದಾಗುವಂತೆ ಸೂಚಿಸಲಾಗಿದ್ದು, ಇಲ್ಲದಿದ್ದರೆ ಕಾನೂನು ಕ್ರಮ ಅನಿವಾರ್ಯ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಆಸ್ತಿಯನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡಿರುವ ಬಗ್ಗೆ ಯಾರಿಗೂ ನೋಟಿಸ್ ನೀಡಿಲ್ಲ. ಬದಲಿಗೆ ಮೌಖಿಕವಾಗಿ ತಿಳಿಸಲಾಗಿದೆ. ಅಂತೆಯೇ ಆಸ್ತಿ ವಶಕ್ಕೆ ಪಡೆದಿರುವ ಮಾಹಿತಿಯನ್ನು ಸರ್ಕಾರಕ್ಕೂ ಸಲ್ಲಿಸಲಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಾಗಿದೆ. ಮೈಶುಗರ್ ಕಾರ್ಖಾನೆ ಸರ್ಕಾರ ಮತ್ತು ಷೇರುದಾರರ ಆಸ್ತಿಯಾಗಿದೆ. ಆದ್ದರಿಂದ ಆಸ್ತಿ ಮತ್ತೆ ವಾಪಸ್ ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಒತ್ತಡ ಬಂದಿದೆ. ಆದರೂ ಯಾವುದೇ ಒತ್ತಡ ಎದುರಾದರೂ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅನಧಿಕೃತ ಸಾಗುವಳಿದಾರರ ವಿವರ: ಮಂಡ್ಯ ತಾಲೂಕು ಹನಕೆರೆ ಗ್ರಾಮದ ಮಹೇಶ್ ಅವರ ಒಡೆತನದ ಶಾಲಾ ಸಂಕಿರ್ಣ 3.33 ಎಕರೆ, ನಗರದ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆ ಕಾಳಿಕಾಂಬ ಟ್ರಸ್ಟ್ 20 ಗುಂಟೆ, ಹೊನ್ನಯ್ಯ ಬಡಾವಣೆಯ ವಿವಿಧ ಅನಧಿಕೃತ ಸಾಗುವಳಿಗಾಗಿ 2.37 ಎಕರೆ ಜಮೀನು ವಾಣಿಜ್ಯ ಬಳಕೆಯಾಗುತ್ತಿದೆ. ಅಂತೆಯೇ ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ತಗ್ಗಹಳ್ಳಿ ಜಯರಾಮು 2 ಎಕರೆ, ಹೊಳಲು ಗ್ರಾಮದ ಕುಚೇಲ 3.04 ಎಕರೆ, ಶಿವಳ್ಳಿ ಕೃಷ್ಣ ಹಾಗೂ ಇತರರು 7.17 ಎಕರೆ, ಮಂಡ್ಯ ಮತ್ತು ಮಳವಳ್ಳಿ ತಾಲೂಕು ಗಡಿ ಗ್ರಾಮ ಭೀಮನಹಳ್ಳಿಯ ಚನ್ನಮ್ಮ ಹಾಗೂ ಇತರರು 6 ಎಕರೆ, ರಾಜಿ, ಮರಿಯಯ್ಯ 1.10 ಎಕರೆ, ಸಂಪಹಳ್ಳಿ ಕುಮಾರ್ 0.15 ಗುಂಟೆ, ಹೊಳಲು ಗ್ರಾಮದ ನಿಂಗರಾಜಮ್ಮ 0.10 ಗುಂಟೆ, ಚಿಕ್ಕಮಂಡ್ಯ ಗ್ರಾಮದ ಚಿಕ್ಕತಾಯಮ್ಮ 0.13 ಗುಂಟೆ ಜಮೀನಿನಲ್ಲಿ ಅನಧಿಕೃತ ಸಾಗುವಳಿಯಲ್ಲಿದ್ದಾರೆ. ಈ ಎಲ್ಲರಿಗೂ ಮಾಹಿತಿ ನೀಡಲಾಗಿದೆ. ಒಂದು ವೇಳೆ ಜಮೀನು ಬಳಕೆ ಮಾಡಿಕೊಳ್ಳುವುದಾದರೆ ವಾಣಿಜ್ಯ ಹಾಗೂ ವ್ಯವಸಾಯಕ್ಕೆ ಪ್ರತ್ಯೇಕ ಗೇಣಿ ನಿಗದಿಮಾಡಲಾಗುವುದು. ಅದರಂತೆ ವಾಣಿಜ್ಯ ಬಳಕೆ ಮಾಡುವವರು ಮಾಸಿಕ ಹಾಗೂ ವ್ಯವಸಾಯಕ್ಕೆ ಬಳಸುವವರು ವಾರ್ಷಿಕ ಗೇಣಿ ಪಾವತಿ ಮಾಡಲೇಬೇಕು. ಈ ಗೇಣಿಯನ್ನು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಬೋರೇಗೌಡ, ಎಚ್.ಪಿ.ನಾಗರಾಜು, ಉದಯ್‌ಕುಮಾರ್, ದ್ಯಾವಣ್ಣ, ಚಂದಗಾಲು ವಿಜಯ್‌ಕುಮಾರ್ ಉಪಸ್ಥಿತರಿದ್ದರು.

ಸೆ.10ರಿಂದ ರೈತರಿಗೆ ಹಣ ಪಾವತಿ

ಮೈಶುಗರ್ ಕಾರ್ಖಾನೆಯಲ್ಲಿ ಪ್ರಸ್ತುತ 40 ಸಾವಿರ ಕ್ವಿಂಟಾಲ್ಯಷ್ಟು ಸಕ್ಕರೆ ದಾಸ್ತಾನಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಕ್ಕರೆ ಸಚಿವರನ್ನು ಭೇಟಿ ಮಾಡಿದ ಫಲವಾಗಿ ಹೆಚ್ಚುವರಿಯಾಗಿ 25 ಸಾವಿರ ಕ್ವಿಂಟಾಲ್ ಸಕ್ಕರೆ ಮಾರಾಟಕ್ಕೆ ಅನುಮತಿ ದೊರೆತಿದೆ. ಅದರಂತೆ 28,340 ಕ್ವಿಂಟಾಲ್ ಸಕ್ಕರೆ ಮಾರಾಟ ಟೆಂಡರ್ ಕರೆಯಲಾಗಿದ್ದು, ಸಕ್ಕರೆ ಮಾರಾಟದಿಂದ ಬಂದ ಹಣದಲ್ಲಿ ಕಬ್ಬು ಪೂರೈಸಿರುವ ರೈತರಿಗೆ ಒಂದೇ ಕಂತಿನಲ್ಲಿ ಅಂದರೆ ಸೆ.10ರಿಂದ ರೈತರ ಖಾತೆಗೆ ಹಣ ಪಾವತಿಸಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಎಚ್‌ಡಿಕೆಗೆ ಪತ್ರ: ಮೈಶುಗರ್ ಕಾರ್ಖಾನೆ ಸುಪರ್ದಿಯಲ್ಲಿ ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಬೋಧಕ ಸಿಬ್ಬಂದಿಗೆ ವೇತನ ಪಾವತಿಸುವ ಭರವಸೆ ನೀಡಿದ್ದ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪತ್ರ ವ್ಯವಹಾರ ನಡೆಸಲಾಗುವುದು. ನಂತರ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಇನ್ನು ಕೆಲವರು ಕಾರ್ಖಾನೆ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆ ಆರೋಪವೆಲ್ಲವೂ ಸತ್ಯಕ್ಕೆ ದೂರ. ಪೂರ್ವಭಾವಿಯಾಗಿ ತೆಗೆದುಕೊಂಡು ನಿರ್ಧಾರದಿಂದ ಈ ಬಾರಿ ಕಬ್ಬು ಕಟಾವು ಮಾಡುವ ಆಳುಗಳು ಹೆಚ್ಚಾಗಿ ಬಂದಿದ್ದಾರೆ. ಆದರೆ ಆಳುಗಳ ಅಭಾವ ಉಂಟಾಗಬಹುದೆಂದು ರೈತರು ಹೆಚ್ಚಿನ ಕಬ್ಬನ್ನು ಕಟಾವು ಮಾಡಿಸಿದ್ದಾರೆ. ಕಾರ್ಖಾನೆಯ ಸಾಮರ್ಥ್ಯಕ್ಕಿಂತ ಹೆಚ್ಚು ಕಬ್ಬು ಸರಬರಾಜಾಗಿ ಒಂದೆರರಡು ದಿನ ಕಬ್ಬು ನುರಿಸುವ ಕೆಲಸ ನಿಧಾನವಾಗಿತ್ತಾದರೂ ಈಗ ಎಲ್ಲವೂ ಸರಿ ಹೋಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 26 ಸಾವಿರ ಟನ್ ಕಬ್ಬು ಅರೆಯಲಾಗಿತ್ತು. ಈ ಬಾರಿ ಸುಮಾರು 71 ಸಾವಿರ ಟನ್ ಕಬ್ಬು ನುರಿಸಲಾಗಿದ್ದು, ಇಳುವರಿಯೂ ಕೂಡ ಉತ್ತಮವಾಗಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net