

ಮಂಡ್ಯ: ಜಿಲ್ಲೆಯ ಅಸ್ಮಿತೆಯಾಗಿರುವ ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಗೆ ಸೇರಿದ ಪ್ರೌಢಶಾಲೆಯನ್ನು ಖಾಸಗಿ ವ್ಯಕ್ತಿಗೆ ಗುತ್ತಿಗೆಗೆ ನೀಡಬೇಕೆನ್ನುವ ಆಡಳಿತ ಮಂಡಳಿ ನಿಲುವಿಗೆ ಜನಾಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಶಾಲೆಯ ಹಿರಿಯ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಮೈಶುಗರ್ ಕಬ್ಬು ಬೆಳೆಗಾರರ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ(ಏಕೀಕರಣ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಮೈಷುಗರ್ ಪ್ರೌಢಶಾಲೆಯನ್ನು ಗುತ್ತಿಗೆ ನೀಡಲು ಮುಂದಾಗಿರುವ ನಿರ್ಧಾರ ಕೈಬಿಡಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಅಂತೆಯೇ 15 ವರ್ಷದ ಅವಧಿಗೆ ಪ್ರೌಢಶಾಲೆಯನ್ನು ಜಿಲ್ಲೆಯ ಪ್ರಭಾವಶಾಲಿ ರಾಜಕಾರಣಿ ಒಬ್ಬರ ವಿದ್ಯಾಸಂಸ್ಥೆಗೆ ಉಚಿತವಾಗಿ ಗುತ್ತಿಗೆ ನೀಡಲು ಮುಂದಾಗುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಮೈಶುಗರ್ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಮಾತನಾಡಿ, ಮೈಶುಗರ್ ಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ. ಜತೆಗೆ ರೈತರು ಕೂಡ ಪ್ರತಿ ಟನ್‌ಗೆ ನಾಲ್ಕು ರೂಪಾಯಿ ನೀಡುತ್ತಿದ್ದಾರೆ. ಹಳೆ ವಿದ್ಯಾರ್ಥಿಗಳ ಒಕ್ಕೂಟದಿಂದ ಇತ್ತೀಚೆಗೆ 40 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ, ಸುಣ್ಣ ಬಣ್ಣ ಬಳಿದು ವ್ಯವಸ್ಥಿತವಾಗಿ ಇಡಲಾಗಿದೆ. ಭಾರತ್ ಪೆಟ್ರೋಲಿಯಂನವರು 80 ಲಕ್ಷ ರೂ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿದ್ದಾರೆ. ಈ ರೀತಿ ಸುಸಜ್ಜಿತವಾಗಿದ್ದ ಶಾಲೆಯನ್ನು ಅನಾವಶ್ಯಕ ಕಾರಣಗಳನ್ನು ನೀಡುತ್ತಾ 15 ವರ್ಷದ ಅವಧಿಗೆ ಉಚಿತ ಗುತ್ತಿಗೆಯನ್ನು ಯಾರೂ ಒಪ್ಪುವುದಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ನೀಡಬಾರದು ಎಂದು ಆಗ್ರಹಿಸಿದರು.
ಹಿಂದೆ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಮುಂದಾದಾಗ ಕಾಂಗ್ರೆಸ್ ನಾಯಕರಾದ ಎನ್.ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿಯೇ ಪ್ರತಿಭಟನೆ ನಡೆಸಲಾಗಿತ್ತು. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡದಂತೆ ಒತ್ತಾಯಿಸಲಾಗಿತ್ತು. ಆದರೀಗ ಅದನ್ನು ಮರೆತು ತಮ್ಮ ಹಿಂದಿನ ಮಾತನ್ನೇ ಧಿಕ್ಕರಿಸಿ ಮೈಶುಗರ್ ಪ್ರೌಢಶಾಲೆಯನ್ನು ಗುತ್ತಿಗೆ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುಖಂಡರಾದ ಶಿವಳ್ಳಿ ಚಂದ್ರಶೇಖರ್, ತುಳಸೀಧರ್, ವಡ್ಡರಹಳ್ಳಿಕೊಪ್ಪಲು ಚಂದ್ರಶೇಖರ್, ಮಲ್ಲಿಕಾರ್ಜುನ್, ಪ್ರಶಾಂತ್, ಲಕ್ಕಪ್ಪ, ಮಹೇಶ್ ಭಾಗವಹಿಸಿದ್ದರು.