

ಮಂಡ್ಯ: ತಾಲೂಕಿನ ಕೀಲಾರ ಗ್ರಾಮದ ರೈತ ಶಂಕರೇಗೌಡ ಅವರ ಕುಟುಂಬದಲ್ಲಿ ಮತ್ತೆ ಜಾನುವಾರುಗಳ ಸಾವನ್ನಪ್ಪುವ ಪ್ರಕರಣ ಮರುಕಳಿಸಿದೆ. ಇದು ಕುಟುಂಬವನ್ನು ಮತ್ತೆ ಆತಂಕಕ್ಕೆ ದೂಡಿದೆ.
ನಿಖರ ಕಾರಣವಿಲ್ಲದೇ ಕಳೆದ ಐದು ವರ್ಷದಲ್ಲಿ ಸುಮಾರು 32 ಜಾನುವಾರುಗಳು ಈ ಕುಟುಂಬದಲ್ಲಿ ಮೃತಪಟ್ಟಿವೆ. ಇನ್ನು ಕೆಲ ತಿಂಗಳ ಹಿಂದೆ ಸರಣಿಯಾಗಿ ಜಾನುವಾರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ನಡುವೆ ಸ್ವಲ್ಪ ದಿನ ಯಾವುದೇ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಆದರೆ ಕಳೆದ ಹದಿನೈದು ದಿನದಲ್ಲಿ ಮತ್ತೆ ಸರಣಿ ಸಾವು ಸಂಭವಿಸುತ್ತಿದೆ.
ಕಳೆದ ಹದಿನೈದು ದಿನದಲ್ಲಿ 25 ಸಾವಿರ ರೂ ಮೌಲ್ಯದ ಸೀಮೆಹಸು, ಹಳ್ಳಿಕಾರ್ ತಳಿಯ ಉಳುಮೆ ಮಾಡುತ್ತಿದ್ದ ಜೋಡೆತ್ತಿನ ಪೈಕಿ ಒಂದು ಎತ್ತು, ಭಾನುವಾರ ಸುಮಾರು 30 ಸಾವಿರ ರೂ ಮೌಲ್ಯದ ಎಚ್‌ಎ್ ತಳಿಯ ಹಸು ಮೃತಪಟ್ಟಿದೆ. ಇದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಮಾತ್ರವಲ್ಲದೆ ಜಾನುವಾರುಗಳ ಸರಣಿ ಸಾವು ದಿಕ್ಕು ತೋಚದಂತೆ ಮಾಡಿದೆ.
ಲಕ್ಷಾಂತರ ರೂ ನಷ್ಟ: ಜಾನುವಾರುಗಳು ನಿರಂತರವಾಗಿ ಸಾವನ್ನಪ್ಪುತ್ತಿರುವುದು ಕುಟುಂಬಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ. ಒಂದೆಡೆ ಆತಂಕ, ಮತ್ತೊಂದೆಡೆ ನಷ್ಟದಿಂದ ಕುಟುಂಬ ನಲುಗಿ ಹೋಗಿದೆ. ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು ಜಾನುವಾರುಗಳನ್ನು ಖರೀದಿಸಿ ಸಾಕಲಾಗುತ್ತಿದೆ. ಆದರೂ ಇದ್ದಕ್ಕಿದ್ದಂತೆ ಜಾನುವಾರು ಮರಣವನ್ನಪ್ಪುತ್ತಿವೆ. ಲಕ್ಷಾಂತರ ರೂ ನಷ್ಟ ಅನುಭವಿಸಿದರೂ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಆರ್ಥಿಕ ನೆರವು ಸಿಕ್ಕಿಲ್ಲ. ಇನ್ನಾದರೂ ನಮ್ಮ ನೆರವಿಗೆ ಬರಬೇಕೆಂಬುದು ಕುಟುಂಬದವರ ಮನವಿಯಾಗಿದೆ.
ಬಯಲಾಗದ ಸಾವಿನ ಮಿಸ್ಟ್ರಿ: ಜಾನುವಾರುಗಳ ಸಾವಿನ ರಹಸ್ಯ ಇಂದಿಗೂ ಬಯಲಾಗಿಲ್ಲ. ಈಗಾಗಲೇ ಹಲವು ಬಾರಿ ಪರಿಶೀಲನೆ ಹಾಗೂ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೆಲ ಸ್ಯಾಂಪಲ್‌ಗಳನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಅಂತೆಯೇ ಅಮೋನಿಯಂ ಟಾಕ್ಸಿಟಿ ಎನ್ನುವ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎನ್ನಲಾಗುತ್ತಿದೆಯಾದರೂ ಶಂಕರೇಗೌಡ ಕುಟುಂಬದಲ್ಲಿ ಇಂತಹ ಘಟನೆ ಮರುಕಳಿಸುತ್ತಿರುವುದು ನಿಗೂಢವಾಗಿದೆ.