

ಮೈಸೂರು: ಹಲವು ದಶಕಗಳಿಂದ ಸಿನಿಮಾ ಪ್ರಿಯರಿಗೆ ಮನರಂಜನೆ ನೀಡಿದ್ದ, ವರನಟ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರಂತಹ ದಿಗ್ಗಜ ನಟರ ಚಿತ್ರಗಳು ಪ್ರದರ್ಶನ ಕಂಡಿದ್ದ ನಗರದ ಸರಸ್ವತಿಪುರಂನ ‘ಸರಸ್ವತಿ’ ಚಿತ್ರಮಂದಿರವನ್ನು ಮಂಗಳವಾರ ನೆಲಸಮ ಗೊಳಿಸಲಾಯಿತು.
ಇತ್ತೀಚೆಗೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ನತ್ತ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿಲ್ಲ. ಸರಸ್ವತಿ ಚಿತ್ರಮಂದಿರ ಸಹ ಪ್ರೇಕ್ಷಕರ ಕೊರತೆಯಿಂದ ನಷ್ಟಕ್ಕೆ ಒಳಗಾಯಿತು. ಈ ಹಿನ್ನೆಲೆಯಲ್ಲಿ ಚಿತ್ರಮಂದಿರವನ್ನು ನೆಲಸಮಗೊಳಿಸಿ ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರ ಕೊರತೆ ಹಾಗೂ ವಿವಿಧ ಕಾರಣಗಳಿಂದ ನಗರದಲ್ಲಿ ಹಲವಾರು ಚಿತ್ರಮಂದಿರಗಳು ನೆಲಸಮಗೊ ಂಡಿವೆ. ಸರಸ್ವತಿ ಚಿತ್ರಮಂದಿರ ನಗರದ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾಗಿತ್ತು. ಈ ಚಿತ್ರ ಮಂದಿರದಲ್ಲಿ ಹಲವಾರು ನಾಯಕ ನಟರ ಚಿತ್ರದ ಮೊದಲ ಪ್ರದರ್ಶನ ಪ್ರದರ್ಶನ ಕಂಡಿವೆ.
ನಗರದ ಬಿ.ಎನ್.ರಸ್ತೆಂು ರಣಜಿತ್ ಚಿತ್ರಮಂದಿರ, ಹರ್ಷ ರಸ್ತೆಯ ಅಪೇರಾ, ಮಂಡಿ ಮೊಹಲ್ಲಾದ ಶಾಲಿಮಾರ್, ಶ್ರೀನಾಗರಾಜ್, ರತ್ನ, ಗೋಕುಲ, ಗಣೇಶ, ಚಾಮರಾಜ ಜೋಡಿರಸ್ತೆಯ ಲಕ್ಷ್ಮೀ ಚಿತ್ರಮಂದಿರಗಳು ಇತ್ತೀಚಿನ ವರ್ಷಗಳಲ್ಲಿ ನೆಲಸಮಗೊಂಡಿವೆ. ಶಾಂತಲಾ ಚಿತ್ರಮಂದಿರವನ್ನು ನೆಲಸಮಗೊಳಿಸಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ. ಒಲಂಪಿಯಾ ಚಿತ್ರ ಮಂದಿರ ಸ್ಥಗಿತಗೊಳಿಸಿದ್ದು, ಪುನರ್ ನವೀಕರಣ ಮಾಡಿ ವಾಣಿಜ್ಯ ಉದ್ದೇಶಕ್ಕೆ ಬಳಸಲು ಉದ್ದೇಶಿಸಲಾಗಿದೆ. ರೀಜೆನ್ಸಿ ಚಿತ್ರಮಂದಿರ ಈಗ ಮನರಂಜನಾ ತಾಣವಾಗಿ ರೂಪುಗೊಂಡಿದೆ. ರತ್ನ ಚಿತ್ರಮಂದಿರ ಕಟ್ಟಡ ನವೀಕರಣವಾಗಿ ಕಾಲೇಜು ಕಟ್ಟಡವಾಗಿದೆ.
ಅಗ್ರಹಾರದಲ್ಲಿರುವ ಪದ್ಮ, ಬಿ.ಎನ್.ರಸ್ತೆಯಲ್ಲಿರುವ ಉಡ್‌ಲ್ಯಾಂಡ್, ಲಿಡೋ, ಹಳ್ಳದಕೇರಿಯಲ್ಲಿರುವ ಸಂಗಂ, ಗಾಂಧಿವೃತ್ತದ ಪ್ರಭಾ, ಚಾಮರಾಜ ಜೋಡಿ ರಸ್ತೆಯಲ್ಲಿರುವ ಗಾಯತ್ರಿ ಚಿತ್ರಮಂದಿರಗಳಲ್ಲಿ ಇಂದಿಗೂ ಚಿತ್ರ ಪ್ರದರ್ಶನ ಕಾಣುತ್ತಿವೆ.