ಮೈಸೂರಿನ ಮೂಲಬೇರು ‘ಯೋಗ’: ವಿಶ್ವಕ್ಕೆ ವಿದ್ಯೆ ಕಲಿಸುತ್ತಿರುವ ಕೀರ್ತಿ

yoga
Published on

ಅವಿನಾಶ್ ಜೈನಹಳ್ಳಿ ಮೈಸೂರು
ಪ್ರತಿವರ್ಷ ಜೂ.21ರಂದು ವಿಶ್ವ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಅಂತೆಯೇ ಮತ್ತೊಂದು ಯೋಗ ದಿನದ ಆಚರಣೆಗೆ ಹತ್ತಿರವಾಗುತ್ತಿದ್ದೇವೆ. ಇಂತಹ ವಿದ್ಯೆಯನ್ನು ಶತಮಾನಗಳಿಂದ ಇಡೀ ವಿಶ್ವಕ್ಕೆ ಕಲಿಸುತ್ತಿರುವ ಕೀರ್ತಿ ಮೈಸೂರು ಹಾಗೂ ಮೈಸೂರಿನ ಯೋಗ ಗುರುಗಳಿಗೆ ಸಲ್ಲುತ್ತದೆ. ಇಂತಹ ಊರಿನಲ್ಲಿ ಯೋಗ ಅರಳಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಕಾರಣ ಎನ್ನುವುದು ವಿಶೇಷ.

ಮೈಸೂರು ನಗರ ವಿವಿಧ ಸಂಸ್ಕೃತಿ, ಆಚಾರ-ವಿಚಾರಗಳನ್ನು ತನ್ನೊಳಗೆ ಹುದುಗಿಸಿಕೊಂಡಿದ್ದು, ಅನೇಕ ವರ್ಷಗಳಿಂದ ಪ್ರಪಂಚದಾದ್ಯಂತ ಯೋಗದ ಕಂಪನ್ನು ಪಸರಿಸುತ್ತಾ ಬಂದಿದೆ. ಹೀಗಾಗಿ ಮೈಸೂರನ್ನು ‘ಯೋಗ ನಗರಿ’ ಎಂದೇ ಪ್ರಖ್ಯಾತಿ ಪಡೆದಿದೆ.

ಶತಮಾನದ ಹಿಂದೆಯೇ ಮೈಸೂರು ಪ್ರಾಂತ್ಯವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಯೋಗದ ಅಭಿವೃದ್ಧಿಗೂ ಕೊಡುಗೆ ನೀಡಿರುವುದನ್ನು ಹಾಗೂ ಮೈಸೂರು ಯೋಗ ಶಿಕ್ಷಕರ ಕೊಡುಗೆಯನ್ನು ಅಂತಾರಾಷ್ಟ್ರೀಯ ಯೋಗ ದಿನ ಸಮಯದಲ್ಲಿ ಸ್ಮರಿಸಬೇಕಿದೆ.

ಮೈಸೂರು ಸಂಸ್ಥಾನದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿಯೇ ರಾಜಮನೆತನದವರು ಯೋಗ ಕಲಿಯುತ್ತಿದ್ದ ಉದಾಹರಣೆಗಳಿವೆ. ಬಳಿಕ ಯೋಗವನ್ನು ಸಾರ್ವಜನಿಕವಾಗಿ ಅಭಿವೃದ್ಧಿಪಡಿಸುವ ಜತೆಗೆ, ಮೈಸೂರಿನಲ್ಲಿ ಯೋಗ ಹಾಗೂ ಯೋಗ ಗುರುಗಳಿಗೆ ನೆಲೆ ಕೊಡಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲಬೇಕು. ಯೋಗದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ಮದ್ರಾಸಿನಿಂದ ಕೃಷ್ಣಮಾಚಾರ್ಯರನ್ನು ಮೈಸೂರಿಗೆ ಕರೆಸಿ ಯೋಗ ಅಭಿವೃದ್ಧಿಗೆ ಕಾರಣರಾದರು. ಅವರ ಬಹುತೇಕ ಕೃತಿಗಳಲ್ಲಿ ಯೋಗದ ಬಗ್ಗೆ ಉಲ್ಲೇಖಿಸಿದ್ದಾರೆ.

ನಾಲ್ವಡಿ ಅವರು ಸಂಸ್ಕೃತ ಪಾಠಶಾಲೆಯಲ್ಲಿ ಯೋಗಕ್ಕೆ ಪ್ರತ್ಯೇಕ ವಿಭಾಗವನ್ನೇ ಸ್ಥಾಪಿಸಿದ್ದರು. ಅದಕ್ಕೆ ಕೃಷ್ಣಮಾಚಾರ್ಯರನ್ನು ಮುಖ್ಯಸ್ಥರನ್ನಾಗಿ ನೇಮಿಸಿ, ಜಗನ್ಮೋಹನ ಅರಮನೆ ಹಿಂಭಾಗ ಅವರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಕೃಷ್ಣಮಾಚಾರ್ಯರು ಅರಸು ಮನೆತನದವರು ಹಾಗೂ ಸಾರ್ವಜನಿಕರಿಗೆ ಯೋಗ ಕಲಿಸುತ್ತಿದ್ದರು. ಅವರೇ ಮುಂದೆ ಮೈಸೂರು ಪ್ರಾಂತ್ಯದ ಯೋಗ ಶಿಕ್ಷಕರ ಮೂಲ ಗುರುಗಳಾದರು. ಅವರ ನೇರ ಶಿಷ್ಯರಾದ ಬಿಕೆಎಸ್ ಅಯ್ಯಂಗಾರ್, ಪಟ್ಟಾಬಿ ಜೋಯಿಸ್ ಮತ್ತು ಬಿಎನ್‌ಎಸ್ ಅಯ್ಯಂಗಾರ್ ‘ಅಷ್ಟಾಂಗ ವಿನ್ಯಾಸ ಯೋಗ’ವನ್ನು ವಿಶ್ವಾದ್ಯಂತ ಪ್ರಚುರಪಡಿಸಿದ್ದಾರೆ.

ಸದ್ಯ ಕೇಶವಮೂರ್ತಿ, ಶಂಕರನಾರಾಯಣ ಜೋಯಿಸ್, ಬಿಎನ್‌ಎಸ್ ಅಯ್ಯಂಗಾರ್ ಮೈಸೂರಿನಲ್ಲಿರುವ ಹಿರಿಯ ಯೋಗ ಗುರುಗಳಾಗಿದ್ದಾರೆ. ಜತೆಗೆ ರಾಘವೇಂದ್ರ ಪೈ, ಡಾ.ಯೋಗ ಗಣೇಶ್‌ಕುಮಾರ್, ಶ್ರೀಹರಿ, ಅನಂತು, ಶಶಿಕುಮಾರ್, ಎಂ.ಎಸ್.ರಮೇಶ್‌ಕುಮಾರ್, ಎಚ್.ಟಿ.ಭಾಸ್ಕರ್, ಗೀತಾ ಕುಮಾರ್ ಸೇರಿದಂತೆ ಅನೇಕ ಹಿರಿಯರು ಯೋಗ ಪಸರಿಸುವ ಕೆಲಸ ಮಾಡುತ್ತಿದ್ದಾರೆ.

ಯೋಗ ಪರಂಪರೆ ಹೊಂದಿರುವ ಮೈಸೂರಿನಲ್ಲೀಗ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಹಿಮಾಲಯ ಯೋಗ ಫೌಂಡೇಷನ್, ಮೈಸೂರು ಯೋಗ ಒಕ್ಕೂಟ, ಮಾರುತಿ ಯುವ ಕೇಂದ್ರ, ವೈಎಸ್‌ಎಫ್, ಜಿಎಸ್‌ಎಸ್ ಯೋಗ ಫೌಂಡೇಷನ್, ಭಾರತ್ ಸ್ವಾಭಿಮಾನಿ ಟ್ರಸ್ಟ್ ಬಾಬಾ ರಾಮದೇವ್ ಯೋಗ, ಪತಂಜಲಿ ಸೇರಿದಂತೆ ನೂರಾರು ಯೋಗ ಕೇಂದ್ರಗಳಿದ್ದು, ಯೋಗ ಪ್ರಚಾರ ಮಾಡುತ್ತಿವೆ.

ವಿದೇಶಿಗರಿಂದ ಕಲಿಕೆ ಇಳಿಕೆ

ಕರೊನಾ ಬರುವುದಕ್ಕೂ ಮುನ್ನ ಮೈಸೂರಿನಲ್ಲಿ ನಿತ್ಯ 2000 ವಿದೇಶಿಯರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ನಿತ್ಯ ಯೋಗ ಕಲಿಯುತ್ತಿದ್ದರು. ಪ್ರವಾಸೋದ್ಯಮ, ಶಿಕ್ಷಣದ ಜತೆಗೆ ಯೋಗ ಕಲಿಯುವುದಕ್ಕಾಗಿಯೇ ಹೆಚ್ಚು ವಿದೇಶಿಯರು ಮೈಸೂರಿಗೆ ಬರುತ್ತಿದ್ದರು. ಆದರೀಗ ವಿದೇಶಿಗರ ಸಂಖ್ಯೆ ಕಡಿಮೆಯಾಗಿದೆ. ಅನೇಕ ಯೋಗಾಪಟುಗಳು ಪ್ರಪಂಚದ ನಾನಾ ಮೂಲೆಗಳಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿರುವುದು ಇದಕ್ಕೆ ಮತ್ತೊಂದು ಕಾರಣ.

ಜಿಲ್ಲಾಡಳಿತ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಗರದ ವಿವಿಧ ಯೋಗ ಸಂಸ್ಥೆಗಳಿಂದ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಅರಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈ ಸಂಬಂಧ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 10 ಸಾವಿರ ಜನರು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುತ್ತಾರೆ ಮೈಸೂರು ಜಿಲ್ಲಾ ಯೋಗ ಸ್ಟೋಟ್ಸ್ ಫೌಂಡೇಷನ್ ಅಧ್ಯಕ್ಷ ಡಾ.ಪಿ.ಎನ್.ಗಣೇಶ್‌ಕುಮಾರ್.

‘ಅಷ್ಟಾಂಗ ವಿನ್ಯಾಸ’ದಲ್ಲಿ ಅಪಾರ ಹೆಸರು

ಮೈಸೂರು ಪ್ರಪಂಚದಲ್ಲೇ ‘ಅಷ್ಟಾಂಗ ವಿನ್ಯಾಸ ಯೋಗ’ದಲ್ಲಿ ಹೆಚ್ಚು ಹೆಸರು ಮಾಡಿದೆ. ಇಲ್ಲಿ ಅಪಾರ ಅನುಭವಿ ಯೋಗ ಶಿಕ್ಷಕರು, ಯೋಗಪಟುಗಳು ಇದ್ದು, ವರ್ಷಪೂರ್ತಿ ಯೋಗ ಸ್ಪರ್ಧೆಗಳು, ಯೋಗ ಶಿಬಿರಗಳು, ಯೋಗ ತರಗತಿಗಳು ನಡೆಯುತ್ತಲೇ ಇರುತ್ತವೆ. ನಗರದ ಅನೇಕ ಯೋಗಾಪಟುಗಳು ಚೀನಾ, ಜಪಾನ್, ಅಮೆರಿಕ ಸೇರಿದಂತೆ ಪ್ರಪಂಚದಾದ್ಯಂತ ಯೋಗ ಕಲಿಸುತ್ತಿದ್ದಾರೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದ ಯೋಗಪಟುಗಳಾದ ಮಹೇಂದ್ರ, ಶ್ರೀಕಂಠ, ಕಿರಣ್, ಸುಷ್ಮಿತಾ, ಸುರೇಶ್, ವಿಕ್ರಂ, ಭಾಗ್ಯಾ, ಪ್ರೇಮಾ, ಜನಾರ್ದನ್, ಖುಷಿ ಸೇರಿದಂತೆ ಅಪಾರ ಪ್ರತಿಭೆಗಳೂ ಮೈಸೂರಿನಲ್ಲಿ ಇದ್ದಾರೆ.

ಮಾನಸಿಕ ಒತ್ತಡ ನಿವಾರಣೆ ಮತ್ತು ದೈಹಿಕ ಆರೋಗ್ಯಕ್ಕಾಗಿ ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಹೆಚ್ಚಿನ ಜನರು ಯೋಗದ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ವಿದ್ಯೆಯಾಗಿರುವುದೇ ಇದಕ್ಕೆ ಮೂಲ ಕಾರಣ. ಇಂತಹ ವಿದ್ಯೆಗೆ ಮೈಸೂರು ಮೂಲ ಬೇರು ಎಂದರೆ ತಪ್ಪಾಗಲಾರದು. ಮೈಸೂರಿನಲ್ಲಿ ಯೋಗ ಮುನ್ನೆಲೆಗೆ ಬರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ಕೃಷ್ಣಮಾಚಾರ್ಯರ ನೇರ ಶಿಷ್ಯರಾದ ಬಿಕೆಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸ್ ಮತ್ತು ಬಿಎನ್‌ಎಸ್ ಅಯ್ಯಂಗಾರ್ ‘ಅಷ್ಟಾಂಗ ವಿನ್ಯಾಸ ಯೋಗ’ವನ್ನು ವಿಶ್ವಾದ್ಯಂತ ಪ್ರಚುರಪಡಿಸಿದ್ದಾರೆ.ಡಾ.ಪಿ.ಎನ್. ಗಣೇಶ್‌ಕುಮಾರ್ಅಧ್ಯಕ್ಷ, ಮೈಸೂರು ಜಿಲ್ಲಾ ಯೋಗ ಸ್ಟೋಟ್ಸ್ ಫೌಂಡೇಷನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net