ಇತಿಹಾಸ ಗೊತ್ತಿಲ್ಲದವರಿಂದ ಮೈಸೂರು ಹೆಸರು ಹಾಳು

Published on

ಮೈಸೂರು: ಇತಿಹಾಸ ಗೊತ್ತಿಲ್ಲದವರು ಮೈಸೂರು ನಗರದ ಹೆಸರು ಹಾಳು ಮಾಡಲು ಮುಂದಾಗಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎಂ.ಮೋಹನ್ ಟೀಕಿಸಿದರು.

ಪಾರಂಪರಿಕ ನಗರವಾಗಿರುವ ಮೈಸೂರಿನ ಹೆಸರು ಸ್ವಾತಂತ್ರೃ ಪೂರ್ವದಿಂದಲೂ ರಾಜ್ಯ ಮೀರಿ ಬೆಳೆದಿದೆ. ರಾಜರ ಆಳ್ವಿಕೆಯಲ್ಲಿ ಶಾಶ್ವತವಾಗಿ ಉಳಿಯುವಂತಹ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಆದರೆ ಈ ಇತಿಹಾಸ ತಿಳಿಯದೆ ರಾಜಮನೆತನದಲ್ಲಿರುವ ಪ್ರಿನ್ಸೆಸ್ ಹೆಸರನ್ನು ಅಳಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪ್ರಿನ್ಸೆಸ್ ರಸ್ತೆ ಎಂದು ಇದ್ದ ನಾಮಫಲಕವನ್ನು ಈ ಹಿಂದೆ ರಸ್ತೆ ವಿಸ್ತರಣೆ ಸಮಯದಲ್ಲಿ ಒಡೆದು ಹಾಕಲಾಗಿದೆ. ಪಾಲಿಕೆ ಕಮಿಷನರ್ ದಾಖಲೆ ಇಲ್ಲ ಎನ್ನುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ಮೈಸೂರಿನ ಇತಿಹಾಸ ಪರಂಪರೆ ತಿಳಿದು ಮಾತನಾಡಲಿ. ನಕಲಿ ಗಾಂಧಿ ಪಕ್ಷದಲ್ಲಿರುವ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಒಬ್ಬ ನಕಲಿ ವಕ್ತಾರ. ಹಾಗಾಗಿ ರಾಜವಂಶಸ್ಥ ಯದುವೀರ್ ಅವರು ನೀಡಿದ ದಾಖಲೆಯನ್ನೇ ನಕಲಿ ಎನ್ನುತ್ತಾರೆ ಎಂದು ಟೀಕಿಸಿದರು.

ಬಿಜೆಪಿಯವರು ನೀಡಿದ ಮುಡಾ ನೈಜ ದಾಖಲೆಯಿಂದಾಗಿಯೇ ಸಿದ್ದರಾಮಯ್ಯ ಅವರು 14 ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಈಗ ಕೆ.ಆರ್.ಎಸ್ ರಸ್ತೆ ಕುರಿತು ಪ್ರಿನ್ಸೆಸ್ ಹೆಸರು ಕುರಿತು ಬಿಡುಗಡೆ ಮಾಡಿರುವ ದಾಖಲೆಯೂ ನಕಲಿ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.

ಮಹಾರಾಜರು ನಿರ್ಮಿಸಿದ ಕಟ್ಟಡಗಳ ಮುಂದಿನ ರಸ್ತೆಗಳಿಗೆಲ್ಲ ಅವರ ಹೆಸರು ಇಟ್ಟುಕೊಂಡಿಲ್ಲ ಎನ್ನುವುದನ್ನು ಕಾಂಗ್ರೆಸ್‌ನವರು ಗಮನಿಸಬೇಕು. ಪಾರಂಪರಿಕ ದೇವರಾಜ, ವಾಣಿ ವಿಲಾಸ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ ದುಸ್ಥಿತಿಯಲ್ಲಿದ್ದು, ಅವುಗಳನ್ನು ಸುಸ್ಥಿತಿಗೆ ತರುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.

ಜಿಲ್ಲೆಯಿಂದ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ಹೆಸರ ಹೆಸರಿಗೆ ಕಪ್ಪು ಚುಕ್ಕಿ ತರುವ ಹಾಗೂ ಅಧಿಕಾರದಿಂದ ಕೆಳಗೆ ಇಳಿಸುವ ಕೆಲಸವನ್ನು ಅವರದೇ ಪಕ್ಷದವರು ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net