

ಆರ್.ಕೃಷ್ಣ ಮೈಸೂರು
ನಗರದ ಪಾರಂಪರಿಕ ಹೆಗ್ಗುರುತಾಗಿದ್ದ ಲ್ಯಾನ್ಸ್‌ಡೌನ್ ಕಟ್ಟಡ ಈಗ ಮೂತ್ರಾಲಯವಾಗಿ ಮಾರ್ಪಟಿದೆ.
ಬ್ರಿಟಿಷ್ ಅಧಿಕಾರಿಯ ನೆನಪಿನಲ್ಲಿ ಮೈಸೂರು ಅರಸರು ನಿರ್ಮಿಸಿದ್ದ ಲ್ಯಾನ್ಸ್‌ಡೌನ್ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೆ ಒಂದು ಭಾಗ ಕುಸಿದು ಬಿದ್ದು ದಶಕಗಳೇ ಕಳೆದಿದೆ. ಅಂದಿನಿಂದ ಅದನ್ನು ಉಳಿಸುವ ಅಥವಾ ಕೆಡವಿ ಮರು ನಿರ್ಮಾಣದ ಕಾರ್ಯ ಆಗಿಲ್ಲ. ಹೀಗಾಗಿ ನಗರದ ಹೃದಯಭಾಗದಲ್ಲಿ ಇರುವ ಈ ಪಾರಂಪರಿಕ ಕಟ್ಟಡ ಈಗ ಹಾಳುಕೊಂಪೆಯಾಗಿದೆ.
ದಿನದಿಂದ ದಿನಕ್ಕೆ ಶಿಥಿಲಾವಸ್ಥೆ ತಲುಪುತ್ತಿರುವ ಕಟ್ಟಡದ ಮಳಿಗೆಗಳು ಈಗ ಮೂತ್ರಾಲಯವಾಗಿದ್ದು, ದುರ್ನಾತ ಬೀರುತ್ತಿದೆ. ಸಾವಿರಾರು ಜನರು ಈ ಜಾಗದಲ್ಲಿ ಸಂಚರಿಸುತ್ತಿದ್ದು, ಮೂಗು ಮುಚ್ಚಿ ಹೋಗಬೇಕಿದೆ. ಪಾರಂಪರಿಕ ಕಟ್ಟಡಗಳನ್ನು ವೀಕ್ಷಣೆಗಾಗಿ ಮಾರ್ಗದರ್ಶಿಗಳು ಪ್ರವಾಸಿಗರನ್ನು ಕರೆದು ಮುಜುಗರಕ್ಕೀಡಾಗುವಂತಾಗಿದೆ.
2012ರ ಆ.25 ರಂದು ಲ್ಯಾನ್ಸ್‌ಡೌನ್ ಕಟ್ಟಡ ಮಳಿಗೆ ಸಂಖ್ಯೆ 17 ಮತ್ತು 18ರ ಮೇಲ್ಛಾವಣಿ ಕುಸಿದು ನಾಲ್ವರು ಮೃತಪಟ್ಟಿದ್ದರು. ಈ ನಡುವೆ ಶಿಥಿಲವಾಗಿರುವ ಪಾರಂಪರಿಕ ಕಟ್ಟಡವನ್ನು ನವೀಕರಿಸಬೇಕೇ? ಮರು ನಿರ್ಮಿಸಬೇಕೇ? ಎಂಬ ಚರ್ಚೆ ಇನ್ನೂ ನಡೆಯುತ್ತಿದೆ.
ಕಟ್ಟಡದಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ಸ್ಥಳಾಂತರ ಮಾಡಿ ಮುಂದೆ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ಕಟ್ಟಡದ ಮುಂಭಾಗಕ್ಕೆ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ತಡೆಗೋಡೆ ನಿರ್ಮಿಸಿ ಯಾರೂ ಕಟ್ಟಡದ ಹತ್ತಿರ ಹೋಗದಂತೆ ಮಾಡಲಾಗಿದೆ.
ಆದರೆ ಕಟ್ಟಡದ ಹಿಂಭಾಗದಲ್ಲಿ ಹಳೇ ಸಂತೆಪೇಟೆಗೆ ಬರುವ ಜನರಿಗೆ, ಅಂಗಡಿ ಮಾಲೀಕರಿಗೆ ಈ ಕಟ್ಟಡ ಸುಲಭ ಶೌಚಗೃಹವಾಗಿ ಮಾರ್ಪಟ್ಟಿದೆ. ಇಲ್ಲಿನ ಖಾಲಿ ಗೋದಾಮುಗಳಲ್ಲಿ ಅಂಗಡಿ ತ್ಯಾಜ್ಯ ತುಂಬಲಾಗುತ್ತಿದೆ. ಮಳೆ ಬಂದಾಗ ಕಟ್ಟಡದ ಛಾವಣಿಗಳಿಂದ ನೀರು ಸೋರುವುದು, ಗಾರೆ ಕಳಚಿ ಬೀಳುವುದು ಸಾಮಾನ್ಯವಾಗಿದೆ.
ಕಟ್ಟಡದ ಇತಿಹಾಸ:
ಮೈಸೂರು ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ಅವರು ಜನರಿಗೆ ಅಗತ್ಯ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆಂಬ ಸದುದ್ದೇಶದಿಂದ ನಗರದ ಹೃದಯ ಭಾಗದಲ್ಲಿ ಈ ಕಟ್ಟಡವನ್ನು ನಿರ್ಮಿಸಿದ್ದರು. ಬ್ರಿಟಿಷ್ ವೈಸ್‌ರಾಯ್ ಆಗಿದ್ದ ಲ್ಯಾನ್ಸ್ ಡೌನ್ ವಿಕ್ಟೋರಿಯಾ ರಾಣಿಯ ಪ್ರತಿನಿಧಿಯಾಗಿ 1892ರಲ್ಲಿ ನವೆಂಬರ್ ತಿಂಗಳಿನಲ್ಲಿ ಮೈಸೂರಿಗೆ ಭೇಟಿ ನೀಡಿದ್ದರ ಜ್ಞಾಪಕಾರ್ಥವಾಗಿ ಈ ಕಟ್ಟಡಕ್ಕೆ ಅವರ ಹೆಸರಿಡಲಾಗಿತ್ತು.
ಮುಂಬೈನ ವಿಕ್ಟೋರಿಯಾ ಟರ್ಮಿನಲ್ ಮಾದರಿಯಲ್ಲಿ ಕಟ್ಟಿದ ಈ ಕಟ್ಟಡ ಅಂದು ಮೈಸೂರಿನ ಹೆಗ್ಗುರುತಾಗಿತ್ತು. 1927ರಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಈ ಕಟ್ಟಡದಲ್ಲಿದ್ದ ಖಾದಿ ಭಂಡಾರಕ್ಕೂ ಭೇಟಿ ನೀಡಿ, ಶುಭ ಕೋರಿದ ಇತಿಹಾಸವೂ ಇದೆ.
ಭೂಮಿ ಪೂಜೆಯೂ ನೆರವೇರಿತ್ತು:
ಎರಡು ಮಳಿಗೆ ಕುಸಿದು ಬಿದ್ದಿದ್ದಲ್ಲದೆ, ಕೆಲ ಮಳಿಗೆಗಳು ಶಿಥಿಲಗೊಂಡಿದ್ದರಿಂದ ಲ್ಯಾನ್ಸ್‌ಡೌನ್ ಕಟ್ಟಡವನ್ನು ಮರುನಿರ್ಮಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿತ್ತು.
2015ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಲ್ಯಾನ್ಸ್‌ಡೌನ್ ಕಟ್ಟಡ ನವೀಕರಣಕ್ಕಾಗಿ 6 ಕೋಟಿ ರೂ. ಬಿಡುಗಡೆ ಮಾಡಿ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ಮುಂಬೈನ ಮೆ. ಸಾವನಿ ಕನ್‌ಸ್ಟ್ರಕ್ಷನ್ ಕಂಪನಿ ಶೇ.40ರಷ್ಟು ಕೆಲಸ ಮುಗಿಸಿತ್ತು. ಆದರೆ ದೇವರಾಜ ಮಾರುಕಟ್ಟೆಯ ಕಮಾನು ದ್ವಾರ ನವೀಕರಣ ಸಂದರ್ಭದಲ್ಲಿ ಕುಸಿದು ಬಿದ್ದ ಬಳಿಕ ಎಲ್ಲ ಕೆಲಸ ಅಲ್ಲಿಗೇ ಸ್ಥಗಿತಗೊಂಡವು. ಆ ನಂತರದಲ್ಲಿ ಕಟ್ಟಡದ ಸಂರಕ್ಷಣೆಗಾಗಿ ಅಳವಡಿಸಿದ್ದ ಕಿಟಿಕಿ-ಬಾಗಿಲುಗಳು ಕಳ್ಳರ ಪಾಲಾಯಿತು.
ಬಳಿಕ ಕಟ್ಟಡವನ್ನು ಕೆಡವಬೇಕು ಎನ್ನುವ ಮಾತು ಕೇಳಿಬಂದಿತು. ಕಟ್ಟಡವನ್ನು ಇರುವ ಸ್ಥಿತಿಯಲ್ಲಿಯೇ ನವೀಕರಿಸಬೇಕು ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಕಟ್ಟಡ ವಿಚಾರ ಅಲ್ಲಿಗೆ ನಿಂತಿತ್ತು.
ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಕಟ್ಟಡವನ್ನು ಮರು ನಿರ್ಮಿಸಬೇಕೇ? ನವೀಕರಿಸಬೇಕೇ? ಎಂದು ವರದಿ ನೀಡಲು ಎರಡು ಸಮಿತಿಗಳನ್ನು ರಚಿಸಲಾಗಿತ್ತು. ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಮುಖ್ಯಸ್ಥ ಡಾ.ವಿಶ್ವನಾಥ್ ಹಾಗೂ ಭಾರತೀಯ ಪರಂಪರೆ ನಗರಗಳ ಒಕ್ಕೂಟದ ಗೋವಿಂದನ್ ಕುಟ್ಟಿ ಅವರು ಪ್ರತ್ಯೇಕ ವರದಿ ಸಲ್ಲಿಸಿ ಮೈಸೂರು ನಗರ ಪಾಲಿಕೆ ಅಧೀನದಲ್ಲಿರುವ ಪಾರಂಪರಿಕ ಕಟ್ಟಡದ ಪುನರುಜ್ಜೀವನಕ್ಕೆ ಸಲಹೆ ನೀಡಿದ್ದರು. ಅಷ್ಟರಲ್ಲಿ ಎರಡೂವರೆ ವರ್ಷಗಳೇ ಕಳೆದು ಹೋಗಿದ್ದವು.
ತಜ್ಞರ ಸಮಿತಿ ರಚಿಸಿ ಅಭಿಪ್ರಾಯ ಪಡೆದುಕೊಂಡು 6 ತಿಂಗಳೊಳಗೆ ಸಮಸ್ಯೆ ಇತ್ಯರ್ಥಪಡಿಸುವಂತೆ ಎರಡು ವರ್ಷಗಳ ಹಿಂದೆಯೇ ಹೈಕೋರ್ಟ್ ಪಾಲಿಕೆಗೆ ಸೂಚಿಸಿತ್ತು. ಆದರೆ ಕಟ್ಟಡವನ್ನು ಉಳಿಸಿಕೊಂಡು ನವೀಕರಣ ಮಾಡಬೇಕೇ? ಅಥವಾ ಪೂರ್ತಿ ಕೆಡವಿ ಪಾರಂಪರಿಕ ಶೈಲಿಯಲ್ಲಿ ಮತ್ತೆ ಕಟ್ಟಬೇಕೇ ಎನ್ನುವ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳದೆ ಒಂದು ಪಾರಂಪರಿಕ ಕಟ್ಟಡ ಅಸ್ಥಿಪಂಜರದಂತೆ ನಗರದ ಹೃದಯ ಭಾಗದಲ್ಲಿ ನಿಂತಿದೆ.
ಮೈಸೂರಿನ ಹಿರಿಮೆಯಲ್ಲಿ ಒಂದಾದ ನಗರದ ಹೃದಯ ಭಾಗದಲ್ಲಿರುವ ಲ್ಯಾನ್‌ಡೌನ್ ಈಗ ಮೂತ್ರಾಲಯವಾಗಿದೆ. ಮೈಸೂರು ರಾಜರು ನಿರ್ಮಿಸಿದ ಪಾರಂಪರಿಕ ಕಟ್ಟಡ ಈಗ ಕಸ ಹಾಕುವ ಕೊಂಪೆಯಾಗಿರುವುದು ನಿಜಕ್ಕೂ ದುರಂತ. ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರು ಸೇರಿ ಸಾವಿರಾರು ಜನರು ನಿತ್ಯ ಓಡಾಡುವ ಜಾಗವೇ ಇಂತಹ ಸ್ಥಿತಿಯಾಗಿದೆ. ಈ ಬಗ್ಗೆ ನಗರ ಪಾಲಿಕೆ ಸೂಕ್ತ ಕ್ರಮ ಕೈಗೊಂಡು ಪರಿಸರ ಸಂರಕ್ಷಿಸಲಿ.
ಭಾನು ಮೋಹನ್ ಅಧ್ಯಕ್ಷೆ, ಪರಿಸರ ಸಂರಕ್ಷಣಾ ಸಮಿತಿ
ನಗರವನ್ನು ಮಾಲಿನ್ಯ ಮುಕ್ತವಾಗಿ ಇಟ್ಟುಕೊಳ್ಳಲು ನಗರಪಾಲಿಕೆ ಸದಾ ಸಿದ್ಧವಿದೆ. ಲ್ಯಾನ್ಸ್‌ಡೌನ್ ಕಟ್ಟಡದ ಸುತ್ತ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿದೆ. ಆದರೂ ಶೌಚ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು, ತಕ್ಷಣ ಕ್ರಮ ಕೈಗೊಂಡು ಯಾರೂ ಹೋಗದಂತೆ ತಡೆ ಬಲಪಡಿಸಲಾಗುವುದು. ಸಾರ್ವಜನಿಕ ಶೌಚಗೃಹ ಇದ್ದು ಅದನ್ನು ಬಳಸಬೇಕು.
ಅಶಾದ್ ಉರ್ ರೆಹಮಾನ್ ಶರೀಫ್, ಆಯುಕ್ತ, ಮೈಸೂರು ನಗರಪಾಲಿಕೆ