ಮೈಸೂರಿನ ‘ರೈತರ ವಾರದ ಸಂತೆ’ಗೆ ದಶಮಾನೋತ್ಸವ ಸಂಭ್ರಮ

Raita Sante-2
Published on

ಆರ್.ಕೃಷ್ಣ ಮೈಸೂರು

ನಗರದ ಕಾಡಾ ಕಚೇರಿ ಆವರಣದಲ್ಲಿ ಪ್ರತಿ ಭಾನುವಾರ ಆಯೋಜಿಸಿಕೊಂಡು ಬರುತ್ತಿರುವ ‘ರೈತರ ವಾರದ ಸಂತೆ’ ಈಗ 9 ವರ್ಷ ಪೂರೈಸಿ, ದಶಮಾನೋತ್ಸವದತ್ತ ಹೆಜ್ಜೆ ಹಾಕಿದೆ. ರೈತರಿಂದ ಗ್ರಾಹಕರಿಗೆ ನೇರ ಮಾರಾಟದ ಉದ್ದೇಶದಿಂದ ಆರಂಭಗೊಂಡ ಪ್ರಥಮ ‘ರೈತರ ವಾರದ ಸಂತೆ’ ಯಶಸ್ವಿ ಪಯಣ ಸಾಗಿದೆ.

‘ಅರಿವು, ಪ್ರದರ್ಶನ, ಮಾರಾಟ’ ಧ್ಯೇಯದೊಂದಿಗೆ ಕೃಷಿ ಇಲಾಖೆ, ಮೈಸೂರಿನ ನಾರಿ ಟ್ರಸ್ಟ್ ಸಹಯೋಗದಲ್ಲಿ ನಗರದ ಕಾಡಾ ಕಚೇರಿ ಆವರಣದಲ್ಲಿ ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ರೈತರು ಹಾಗೂ ಗ್ರಾಹಕರು ವ್ಯವಹಾರ ನಡೆಸುತ್ತಾ ಬರುತ್ತಿದ್ದಾರೆ.

ರೈತರಿಗೆ ನೇರವಾಗಿ ಮಾರುಕಟ್ಟೆ ಒದಗಿಸಿ, ಮಧ್ಯವರ್ತಿಗಳ ಒತ್ತಡದಿಂದ ಮುಕ್ತಗೊಳಿಸಿರುವ ಈ ಸಂತೆ, ನೂರಾರು ರೈತರ ಬದುಕಿನಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ. ಈ ಸಂತೆಯ ಸ್ಥಾಪನೆಯ ಆರಂಭಿಕ ಹೆಜ್ಜೆಯಲ್ಲಿ ಚಾಮರಾಜನಗರದ ಅಲೂರು ಮೂರ್ತಿ ಅವರ ದೃಢಸಂಕಲ್ಪ ಮತ್ತು ಸಮರ್ಪಣೆಯಿಂದಲೇ ಮಾದರಿಯಾಗಿದೆ.

ಮೈಸೂರು, ಚಾಮರಾಜನಗರ ಭಾಗದ ರೈತರು ರಾಸಾಯನಿಕ ಮುಕ್ತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಿಕೊಂಡು ಬರುತ್ತಿದ್ದು, ಗ್ರಾಹಕರ ವಿಶ್ವಾಸ ಗಳಿಸಿದೆ. ವಾರದ ಸಂತೆಗಾಗಿಯೇ ಕಾಯುವ ಗ್ರಾಹಕರ ಬಳಗವೇ ಸೃಷ್ಟಿಯಾಗಿದೆ.

ಯಾವುದೇ ರಾಸಾಯನಿಕ ಬಳಸದ ಸೊಪ್ಪು, ತರಕಾರಿಯಿಂದ ಹಿಡಿದು ಮನೆಗೆ ಅಗತ್ಯ ಇರುವ ವಸ್ತ್ತುಗಳು, ಸೌಂದರ್ಯವರ್ಧಕ, ಮೌಲ್ಯವರ್ಧಿತ ಆಹಾರ ಪದಾರ್ಥಗಳ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ.

ಸಾವಯವ ಕೃಷಿಯ ಮಹತ್ವ:

ಇಂದಿನ ಜಾಗತಿಕ ಸನ್ನಿವೇಶದಲ್ಲಿ ಸಾವಯವ ಕೃಷಿಗೆ ಹೊಸ ಪ್ರಾಮುಖ್ಯ ದೊರಕುತ್ತಿದೆ. ವಿಷರಹಿತ ಆಹಾರ, ಭೂಮಿ-ನೀರು ಸಂರಕ್ಷಣೆ, ಶಾಶ್ವತ ಅಭಿವೃದ್ಧಿಗೆ ಈಗ ಸಾವಯವ ಕೃಷಿಯೇ ಮೂಲವಾಣಿ ಎನ್ನುವುದನ್ನು ಸಂತೆ ಸಾಬೀತು ಪಡಿಸಲು ಮುಂದಾಗಿದೆ.

ಇಂತಹ ರೈತ ಸಂತೆಯ ಮೂಲಕ ಸಾವಯವ ಉತ್ಪನ್ನಗಳಿಗೆ ನೇರ ಪ್ರೋತ್ಸಾಹ ದೊರಕಿದ್ದು, ರೈತರು ಬೆಳೆದ ಫಸಲು ಗ್ರಾಹಕರಿಗೆ ನೇರವಾಗಿ ತಲುಪುತ್ತಿದೆ. ಇದರಿಂದ ರೈತರಿಗೆ ನ್ಯಾಯಸಮ್ಮತ ಬೆಲೆ ಸಿಗುತ್ತಿದ್ದು, ಗ್ರಾಹಕರಿಗೆ ನಂಬಿಕೆಯ ಪದಾರ್ಥ ದೊರೆಯುತ್ತಿದೆ.

ಆಹಾರ ಉತ್ಪಾದನೆಯ ಮೂಲವಾದ ರೈತನ ದುಡಿಮೆ ಇಲ್ಲದೆ ಸಮಾಜದ ಅಸ್ತಿತ್ವವೇ ಅಸಾಧ್ಯ. ಅಂತಹ ಸಮಾಜ ಶಕ್ತಿಯಾದ ಅನ್ನದಾತ ರೈತನಿಗೆ ಗೌರವ ನೀಡಬೇಕಿದೆ. ಈ ನಿಟ್ಟಿನಲ್ಲಿ ಇಂತಹ ರೈತ ಸಂತೆಗಳು ಆಯೋಜಿಸುವ ಮೂಲಕ ಮಧ್ಯವರ್ತಿಗಳಿಲ್ಲದೇ ನೇರ ಗ್ರಾಹಕರಿಗೆ ಸಂಪರ್ಕ ಕಲ್ಪಿಸಿಕೊಡಬೇಕಿದೆ.

ನಾರಿ ಟ್ರಸ್ಟ್‌ನ ಸಹಭಾಗಿತ್ವ:

ಈ ಮಹತ್ವದ ಪ್ರಯತ್ನದಲ್ಲಿ ಕೃಷಿ ಇಲಾಖೆ ಜತೆಗೆ ನಾರಿ ಟ್ರಸ್ಟ್ ಸಹ ಹಿತಚಿಂತಕವಾಗಿ ಕೈಜೋಡಿಸಿದೆ. ರೈತರ ಜೀವನಮಟ್ಟ ಏರಿಕೆ, ಮಹಿಳಾ ಸಬಲೀಕರಣ ಹಾಗೂ ಸಾವಯವ ಉತ್ಪನ್ನಗಳ ಉತ್ತೇಜನಕ್ಕಾಗಿ ಟ್ರಸ್ಟ್ ತನ್ನ ಶ್ರಮವನ್ನೂ ಹಂಚಿಕೊಂಡಿದೆ.

ಒಂಬತ್ತು ವರ್ಷಗಳ ಈ ಪಯಣ, ಕೇವಲ ಒಂದು ಸಂತೆಯ ಯಶಸ್ಸಲ್ಲ, ಅದು ರೈತರ ಬದುಕಿನ ಕ್ರಾಂತಿಯ ಸಂಕೇತ. ಅಲೂರು ಮೂರ್ತಿ ಅವರ ದೂರ ದೃಷ್ಟಿ, ಎಲ್ಲ ರೈತ ಮಾರಾಟಗಾರರು-ನಾರಿ ಟ್ರಸ್ಟ್‌ನ ಸಹಭಾಗಿತ್ವ, ರೈತರ ಹೋರಾಟದ ದೀಪದಿಂದ ಬೆಳಗಿರುವ ಈ ಸಂತೆ, ಮುಂದಿನ ಪೀಳಿಗೆಗಳಿಗೆ ಮಾದರಿಯಾಗಲಿದೆ.

ಸಂಪ್ರದಾಯ ಉಳಿಸಿಕೊಳ್ಳಬೇಕು:

ನಮ್ಮ ಹಿರಿಯರು ವೈಜ್ಞಾನಿಕ ಕಾರಣಗಳಿಂದ ಕೆಲ ಸಂಪ್ರದಾಯ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದರು. ಆದರೆ ಆಧುನಿಕತೆಯ ಹೆಸರಿನಲ್ಲಿ ಅದನ್ನು ಮುರಿದಿರುವ ನಾವು, ಕೃಷಿಗೆ ರಾಸಾಯನಿಕ, ಕ್ರಿಮಿನಾಶಕ ಸೇರಿದಂತೆ ಪ್ರಕೃತಿಗೆ ವಿರುದ್ಧವಾದ ಬೇಸಾಯವನ್ನು ಮಾಡುತ್ತಿದ್ದೇವೆ. ಇದರಿಂದ ಜನರ ಆರೋಗ್ಯ, ಪರಿಸರದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಪ್ರಗತಿಪರ ರೈತ ಸಾದನಹಳ್ಳಿಯ ಆನಂದ್ ಅಭಿಪ್ರಾಯಪಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮಾಲ್‌ಗಳ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಜನರನ್ನು ಬಣ್ಣಗಳಿಂದ ಆಕರ್ಷಿಸುತ್ತಿವೆ. ಇದರಿಂದ ನಮ್ಮವರೇ ಅದ ರೈತರಿಗೆ ಲಾಭವಿಲ್ಲದಂತಾಗಿ ಕೃಷಿ ಲಾಭದಾಯಕ ಅಲ್ಲ ಎನ್ನುವ ಸ್ಥಿತಿಗೆ ಬಂದಿದೆ. ಆದ್ದರಿಂದ ನಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಪದ್ಧತಿಯನ್ನು ಉಳಿಸಿಕೊಂಡು ಹೋಗಬೇಕಿದೆ. ಈ ಮೂಲಕ ನಮ್ಮತನವನ್ನು ಉಳಿಸಿಕೊಳ್ಳಲು ಇಂತಹ ಸಂತೆಗಳು ಅಗತ್ಯ ಎಂದು ಹೇಳಿದರು.

==========

ಬಾಕ್ಸ್////

ವಾರದ ಸಂತೆಯಲ್ಲಿ ಏನೇನಿದೆ?

ರೈತರ ವಾರದ ಸಂತೆಯಲ್ಲಿ ಅಣಬೆಯಲ್ಲಿ ಮಾಡಿದ ಬಿಸ್ಕತ್, ಮುರುಕಲು, ಕಪ್ಪು ಗೋಧಿ, ಕಪ್ಪು ಕಡಲೆ, ಕಪ್ಪು ಹೆಸರು, ಕೆಂಪಕ್ಕಿ, ಬಿದಿರಕ್ಕಿ, ಎಲ್ಲ ಬಗೆಯ ಸಿರಿಧಾನ್ಯಗಳಲ್ಲದೆ ಸಿರಿಧಾನ್ಯದಿಂದ ಮಾಡಿದ ದೋಸೆ ಹಿಟ್ಟು, ಪುಡಿಮಾಡಿದ ಹಿಟ್ಟುಗಳು, ರವೆ, ಶಾವಿಗೆ, ಅವಲಕ್ಕಿ, ನಾನಾ ಬಗೆಯ ಧಾನ್ಯಗಳು ಮತ್ತು ಕಾಳುಗಳು ಲಭ್ಯ.

ಗಾಣದಿಂದ ತೆಗೆದ ಎಲ್ಲ ವಿಧದ ಎಣ್ಣೆಗಳು, ಸ್ಥಳೀಯವಾಗಿಯೇ ತಯಾರಿಸಿದ ರಾಸಾಯನಿಕ ಮುಕ್ತ ಸೌಂದರ್ಯವರ್ಧಕಗಳು, ಹಲ್ಲುಜ್ಜುವ ಪುಡಿ, ಸೋಪು, ಸಾಂಬಾರ ಪದಾರ್ಥ, ಹಪ್ಪಳ, ಸಂಡಿಗೆ, ಹೊಲ, ಗದ್ದೆಗಳಲ್ಲಿ ಸಿಗುವ ಅಣ್ಣೆಸೊಪ್ಪು, ನುಗ್ಗೆಸೊಪ್ಪು, ನಾಟಿ ತಳಿಯ ಹಣ್ಣುಗಳು, ಎಲ್ಲ ವಿಧದ ತರಕಾರಿ, ಕುರುಕಲು ಚಿನಕುರುಳಿ, ಔಷಧ ಗುಣಗಳಿರುವ ಸಸ್ಯಗಳು ಇಲ್ಲಿವೆ.

ಕೋಟ್ಸ್///

ಇನ್ನಷ್ಟು ಜನರಿಗೆ ತಲುಪಬೇಕಿದೆ

ಎಲ್ಲವೂ ವಿಷಮಯ ಎನ್ನುವ ಇಂದಿನ ದಿನಗಳಲ್ಲಿ ಸಾವಯವ ಪದ್ಧತಿ ಮೂಲಕ ಬೆಳೆದ ಪದಾರ್ಥಗಳನ್ನು ಜನರಿಗೆ ತಲುಪಿಸಲು ರೈತರು ಶ್ರಮವಹಿಸುತ್ತಿದ್ದಾರೆ. ರೈತರ ಇಂತಹ ಪ್ರಯತ್ನ ಸಾಕಷ್ಟು ಜನರಿಗೆ ತಲುಪುವಂತಾಗಬೇಕು. ಇದಕ್ಕಾಗಿ ದಶಮಾನೋತ್ಸವ ಅಂಗವಾಗಿ ನಾನಾ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ಸರ್ಕಾರ, ಜಿಲ್ಲಾಡಳಿತ ಇನ್ನಷ್ಟು ಸಹಕಾರ ನೀಡಿ ದೊಡ್ಡ ಪ್ರಮಾಣದಲ್ಲಿ ಸಂತೆ ಆಗುವಂತೆ ಮಾಡಬೇಕು.

ಮುರಳೀಧರ್

ನಾರಿ ಟ್ರಸ್ಟ್, ಮೈಸೂರು

==========

ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಗತ್ಯ

ರೈತರು ಲಾಭ ಇಲ್ಲ ಎಂದು ಕೂರುವ ಬದಲು, ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನ ಮಾಡಬೇಕು. ಯಾವುದೋ ವಸ್ತುವನ್ನು ನೇರ ಮಾರಾಟ ಮಾಡುವ ಬದಲು ಅದರಿಂದ ಬೇರೇನು ಮಾಡಲು ಸಾಧ್ಯ ಎಂದು ನೋಡಿದಾಗ ಲಾಭವಾಗುತ್ತದೆ. ಮಧ್ಯವರ್ತಿಗಳಿಗೆ ವಸ್ತುಗಳನ್ನು ಮಾರಾಟ ಮಾಡದೆ ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬೇಕು. ಅದಕ್ಕಾಗಿ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಇಂತಹ ರೈತ ಸಂತೆಗಳು ಅಗತ್ಯ.

ಅಲೂರು ಮೂರ್ತಿ

ಪ್ರಗತಿಪರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net