ಸೆ.7ರಂದು ಮೈಸೂರು ವಲಯದ ‘ಚಿಂತನ-ಮಂಥನ’ ಸಭೆ

Published on

ಮೈಸೂರು: ಬೆಂಗಳೂರಿನ ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್‌ನಿಂದ ನಗರದಲ್ಲಿ ಸೆ.7ರಂದು ಮೈಸೂರು ವಲಯದ ‘ಚಿಂತನ-ಮಂಥನ’ ಸಭೆ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಡಿ.ಜಗನ್ನಾಥ ಸಾಗರ್ ತಿಳಿಸಿದರು.

ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ನೆರವು, ಸಮುದಾಯದಲ್ಲಿ ಶೈಕ್ಷಣಿಕ ಪ್ರಗತಿ ಉದ್ದೇಶದಿಂದ ಸಮುದಾಯದ ನೌಕರರು, ನಿವೃತ್ತರನ್ನು ಒಂದೆಡೆ ಸೇರಿಸಿ ಅವರ ಬೆಂಬಲ, ಸಲಹೆ ಪಡೆಯುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ಸರಸ್ವತಿಪುರಂನಲ್ಲಿರುವ ಉಪ್ಪಾರ ವಿದ್ಯಾರ್ಥಿನಿಲಯದಲ್ಲಿ ಸಭೆ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಟ್ರಸ್ಟ್‌ನ ಸರ್ವ ಸದಸ್ಯರ ಸಭೆ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉಪ್ಪಾರ ಸಮುದಾಯದಲ್ಲಿ ಪ್ರತಿಭಾವಂತರಿದ್ದರೂ ಬಡತನ ಕಾರಣದಿಂದ ಉನ್ನತ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಇದುವರೆಗೆ ರಾಜ್ಯದ 24 ಜಿಲ್ಲೆಗಳ 128 ವಿದ್ಯಾರ್ಥಿಗಳಿಗೆ ಸುಮಾರು 23 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಮುದಾಯದ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲಾಗುತ್ತಿಲ್ಲ. ದೂರದ ಊರುಗಳಲ್ಲಿ ಕಾಲೇಜು ಸಿಕ್ಕರೂ, ಹಾಸ್ಟೆಲ್ ಇಲ್ಲದೆ ತೊಂದರೆಯಾಗಿದೆ. ಮೈಸೂರಿನ ಟ್ರಸ್ಟ್‌ನಲ್ಲಿರುವ ಸುಮಾರು 42 ಲಕ್ಷ ರೂ.ನಲ್ಲಿ ಒಂದು ನಿವೇಶನ ಖರೀದಿಸಿ, ಸರ್ಕಾರದ ನೆರವಿನಿಂದ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಟ್ರಸ್ಟ್‌ನ ಪದಾಧಿಕಾರಿಗಳಾದ ಎ.ಟಿ.ಸೋಮಶೇಖರಪ್ಪ, ಕೃಷ್ಣಸ್ವಾಮಿ, ಸಿ.ಎ.ಮಹದೇವಶೆಟ್ಟಿ, ಡಾ.ಸುರೇಶ್, ಯಶ್ವಂತ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net