

ಸದೇಶ್ ಕಾರ್ಮಾಡ್ ಮೈಸೂರು
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯ ಅಧಿಕಾರಾವಧಿ ಮುಕ್ತಾಯಗೊಂಡು ಬರೋಬ್ಬರಿ 4 ವರ್ಷಗಳು ಕಳೆದಿದ್ದು, ಚುನಾವಣೆ ಯಾವಾಗ ಎಂಬ ಯಕ್ಷ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಆಡಳಿತ ವಿಕೇಂದ್ರೀಕರಣಗೊಳ್ಳಬೇಕು ಎಂಬ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳನ್ನು ರಚನೆ ಮಾಡಲಾಯಿತು. ಆದರೆ, ಸರ್ಕಾರದ ನಿರ್ಲಕ್ಷೃದಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲದಂತಾಗಿದ್ದು, ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಸರ್ಕಾರಿ ಕಚೇರಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಪಂಚಾಯಿತಿಗೆ 2016ರ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆಯಿತು. 49 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ 22, ಜೆಡಿಎಸ್ 18, ಬಿಜೆಪಿ 8 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಅಯ್ಕೆಗೊಂಡಿದ್ದರು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟಿತ್ತು. ಅಧ್ಯಕ್ಷರಾಗಿ ಜೆಡಿಎಸ್‌ನ ನಯೀಮಾ ಸುಲ್ತಾನ್, ಉಪಾಧ್ಯಕ್ಷರಾಗಿ ಕಯ್ಯಂಬಳ್ಳಿ ನಟರಾಜ್ ಆಯ್ಕೆಗೊಂಡರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆಯ ಒಡಂಬಡಿಕೆಯಾಗಿತ್ತು.
ಆ ಪ್ರಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು 20 ತಿಂಗಳ ನಂತರ ಅಧಿಕಾರ ಬಿಟ್ಟು ಕೊಡಬೇಕಾಗಿತ್ತು. ಆದರೆ, ನಯೀಮಾ ಸುಲ್ತಾನ್ ಹಾಗೂ ಕಯ್ಯಂಬಳ್ಳಿ ನಟರಾಜ್ ಅಧಿಕಾರ ಬಿಟ್ಟುಕೊಡಲು ಹಿಂದೇಟು ಹಾಕಿದರು. ನಂತರ ಜೆಡಿಎಸ್ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ ಬಳಿಕ ನಯೀಮಾ ಸುಲ್ತಾನ್ ಹಾಗೂ ಕಯ್ಯಂಬಳ್ಳಿ ನಟರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ 2019ರ ಫೆಬ್ರವರಿ 23 ರಂದು ತೆರವಾದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆ ಸಂದರ್ಭ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಆಡಳಿತ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲೂ ಜೆಡಿಎಸ್-ಕಾಂಗ್ರೆಸ್ ನಡುವೆ ಅಧಿಕಾರಕ್ಕೆ ಮೈತ್ರಿ ಏರ್ಪಟ್ಟಿತ್ತು. ಅಧ್ಯಕ್ಷರಾಗಿ ಜೆಡಿಎಸ್‌ನ ಬಿ.ಸಿ. ಪರಿಮಳ ಶ್ಯಾಮ್, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಗೌರಮ್ಮ ಆಯ್ಕೆಗೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಯೀಮಾ ಸುಲ್ತಾನ್ ರಾಜೀನಾಮೆ ನೀಡಿದಾಗ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದ ಎಸ್.ಆರ್.ನಂದೀಶ್ 46 ದಿನಗಳ ಕಾಲ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಆಡಳಿತಾಧಿಕಾರಿ ನೇಮಕ: ಜಿಲ್ಲಾ ಪಂಚಾಯಿತಿಯ ಅಧಿಕಾರಾವಧಿ 2021 ಏಪ್ರಿಲ್ ನಲ್ಲಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 2021ರ ಮೇ 7ರಂದು ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಮ್ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು 17 ಜೂನ್ 2023ರವರೆಗ ಅಧಿಕಾರ ನಡೆಸಿದ್ದರು. ನಂತರ 18 ಜೂನ್ 2023 ರಿಂದ ಈತನಕ ವಾಣಿಜ್ಯಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿರುವ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಆಡಳಿತಾಧಿಕಾರಿಯಾಗಿ ಮುಂದುವರೆದಿದ್ದಾರೆ. ಆಡಳಿತಾಧಿಕಾರಿ ನೇಮಕಗೊಂಡು 4 ವರ್ಷಗಳು ಪೂರ್ಣಗೊಂಡು 5ನೇ ವರ್ಷಕ್ಕೆ ಕಾಲಿಟ್ಟಿದೆ. ಪಂಚಾಯತ್‌ರಾಜ್ ವ್ಯವಸ್ಥೆ ರಚನೆಯಾದ ನಂತರ ಇಷ್ಟೊಂದು ಸುದೀರ್ಘ ಅವಧಿವರೆಗೆ ಚುನಾವಣೆ ನಡೆಸದೆ ಆಡಳಿತಾಧಿಕಾರಿಗಳ ಆಡಳಿತ ನಡೆದ ಉದಾಹರಣೆ ಇಲ್ಲ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಸಜ್ಜಾಗಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸುವಂತೆ ಕೋರಿ ಅನೇಕ ಬಾರಿ ಸರ್ಕಾರಕ್ಕೆ ಪತ್ರಬರೆದಿದೆ. ಆದರೆ, ಸರ್ಕಾರದಿಂದ ಸ್ಪಂದನೆ ದೊರೆಯದೆ ಇದ್ದಾಗ ಚುನಾವಣಾ ಆಯೋಗ ನ್ಯಾಯಾಲಯದ ಮೊರೆ ಹೋಗಿತ್ತು. ಆ ಸಂದರ್ಭ ಶೀಘ್ರದಲ್ಲೇ ಮೀಸಲಾತಿ ಪ್ರಕಟಿಸಲಾಗುವುದು ಎಂದು ಸರ್ಕಾರ ಅಫಿಡವಿಟ್ ಸಲ್ಲಿಸಿತ್ತು. ಆದರೆ, ವಿವಿಧ ಕಾರಣಗಳನ್ನು ಮುಂದೊಡ್ಡಿ ಸರ್ಕಾರ ಮೀಸಲಾತಿ ಪ್ರಕಟಿಸುವುದನ್ನು ವಿಳಂಬ ಮಾಡುತ್ತಲೇ ಇದೆ. ಈಗಾಗಲೇ ಕ್ಷೇತ್ರಗಳ ಮರು ವಿಂಗಡಣೆ ಕಾರ್ಯ ಪೂರ್ಣಗೊಂಡಿದ್ದು, ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸುವುದು ಮಾತ್ರ ಬಾಕಿ ಉಳಿದಿದೆ. ಸರ್ಕಾರ ಮೀಸಲಾತಿ ನಿಗದಿ ಮಾಡಲು ಮನಸ್ಸು ಮಾಡಿದರೆ ಶೀಘ್ರದಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆ ಇದೆ.
ದಸರೆ ನಂತರ ಚುನಾವಣೆ ?: ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ದಸರೆಯೊಳಗೆ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎ. ಸಂಗ್ರೇಶಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ರಾಜಕೀಯ ನೇತಾರರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಗರಿಗೆದರುವಂತೆ ಮಾಡಿದೆ.
ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಜ್ಜಾಗಿದೆ. ಸರ್ಕಾರದಿಂದ ಮೀಸಲಾತಿಗಾಗಿ ಎದುರು ನೋಡುತ್ತಿದ್ದೇವೆ. ಮೇ 30ರೊಳಗೆ ಸರ್ಕಾರ ಮೀಸಲಾತಿ ಪಟ್ಟಿ ನೀಡುವುವಾಗಿ ತಿಳಿಸಿದೆ. ನಂತರ ಎರಡು, ಮೂರು ತಿಂಗಳಲ್ಲಿ ಚುನಾವಣೆಗೆ ತಯಾರಿ ನಡೆಸಲಾಗುವುದು. ದಸರಾ ನಂತರ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಂಗ್ರೇಶಿ ತಿಳಿಸಿದ್ದಾರೆ. ಚುನಾವಣಾ ಯೋಗದ ಆಯುಕ್ತರ ಹೇಳಿಕೆ ಪ್ರಕಾರ ವರ್ಷಾಂತ್ಯದೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರ ಮೀಸಲಾತಿ ಪ್ರಕಟಿಸಲು ಹಿಂದೇಟು ಹಾಕಿದರೆ ಚುನಾವಣೆ 2026ಕ್ಕೆ ನಡೆಯುವ ಸಾಧ್ಯತೆ ಹೆಚ್ಚು ಇದೆ.