ಮೈಸೂರು: ‘ವಿಜಯವಾಣಿ’ ಯಿಂದ ಯೋಗ ದಿನಾಚರಣೆ

Yoga Day celebrated by Vijayavani
Published on

ಮೈಸೂರು: ಕನ್ನಡದ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ವತಿಯಿಂದ ನಗರದ ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ಒಳಾಂಗಣದಲ್ಲಿ ಶ್ರೀ ನಟರಾಜ ಪ್ರತಿಷ್ಠಾನ, ಶ್ರೀ ಹೊಸಮಠ, ಬಸವಮಾರ್ಗ ಫೌಂಡೇಷನ್ ಸಹಯೋಗದೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಶನಿವಾರ ಯಶಸ್ವಿಯಾಗಿ ನಡೆಯಿತು.

ವಿಜಯವಾಣಿ, ಶ್ರೀ ನಟರಾಜ ಶಿಕ್ಷಣ ಸಂಸ್ಥೆ, ಶ್ರೀ ನಟರಾಜ ಪ್ರತಿಷ್ಠಾನ, ಶ್ರೀ ಹೊಸಮಠ, ಬಸವಮಾರ್ಗ ಫೌಂಡೇಷನ್‌ನ ಪ್ರತಿನಿಧಿಗಳು, ವಿದ್ಯಾರ್ಥಿಗಳು ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿದರು. ಯೋಗ ಶಿಕ್ಷಕ ಎಚ್.ಪಿ. ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಎಲ್ಲರು ಯೋಗ ಪ್ರದರ್ಶಿಸಿದರು.

ಮೂರು ಬಾರಿ ಓಂಕಾರದ ಪಠಣದೊಂದಿಗೆ ಯೋಗಾಭ್ಯಾಸ ಪ್ರಾರಂಭಗೊಂಡಿತು. ಕುತ್ತಿಗೆ ಚಾಲನ ಕ್ರಿಯೆ, ಸೊಂಟದ ಚಾಲನ ಕ್ರಿಯೆ, ಮಂಡಿ ಚಾಲನ ಕ್ರಿಯೆಯ ಬಳಿಕ ತಾಡಾಸನ, ವೃಕ್ಷಾಸಾನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ಉಷ್ಟ್ರಾಸನ, ಶಶಂಕಾಸನ, ವಕ್ರಾಸನ, ಭುಜಂಗಾಸನ, ಶಲಬಾಸನ, ಮಕರಾಸನ, ಸೇತುಬಂಧಾಸನ, ಪವನಮುಕ್ತಾಸನ, ಶವಾಸನ ನಡೆಸಲಾಯಿತು. ಆ ನಂತರ ಪ್ರಾಣಾಯಾಮದಲ್ಲಿ ಉಸಿರು ಸ್ವಚ್ಚ, ಭಸ್ತ್ರಿಕಾ ಪ್ರಾಣಾಯಾಮ, ಕಪಾಲಬಾತಿ, ಅನುಲೋಮ ವಿಲೋಮ, ನಾಡಿಶೋಧನ, ಭ್ರಾಮರಿ, ಧ್ಯಾನ ನೆರವೇರಿತು. ಬಳಿಕ ಲೋಕ ಕಲ್ಯಾಣ ಮಂತ್ರದೊಂದಿಗೆ ಸಾಮೂಹಿಕ ಯೋಗಾಭ್ಯಾಸ ಮುಕ್ತಾಯಗೊಂಡಿತು.

ಯೋಗದಿಂದ ಅಂತರಂಗ ಶುದ್ಧಿ: ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಬಸವಜ್ಞಾನ ಮಂದಿರದ ಶ್ರೀ ಮಾತೆ ಬಸವಾಂಜಲಿ ಮಾತನಾಡಿ, ಯೋಗಕ್ಕೆ 2014ರಲ್ಲಿ ವಿಶ್ವ ಮಾನ್ಯತೆ ದೊರೆಯಿತು. ಅದಾದ ನಂತರ ಇದೀಗ ವಿಶ್ವದ 170 ದೇಶಗಳು ಯೋಗಾಚರಣೆ ಮಾಡುತ್ತಿವೆ. ವಿದೇಶಿಯರು ಯೋಗದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದರು.

ಯೋಗ ಮಾಡಿದರೆ ಅಂತರಂಗ ಶುದ್ಧಿಯಾಗುತ್ತದೆ. ಯೋಗ ಒಂದು ಧರ್ಮಕ್ಕೆ ಸೀಮಿತವಲ್ಲ. ಆರೋಗ್ಯಕರ ಜೀವನಕ್ಕೆ ಪ್ರತಿಯೊಬ್ಬರು ಯೋಗ ಸಾಧನೆ ಮಾಡಬೇಕು. ಒಂದು ಯೋಗ ನೂರು ಮಾತ್ರೆಗಳಿಗೆ ಸಮಾನ. ಯೋಗಾಭ್ಯಾಸ ಮಾಡಿದರೆ ಆಸ್ಪತ್ರೆಯಿಂದ ದೂರ ಉಳಿಯಬಹುದು. ಹಾಗಾಗಿ ಎಲ್ಲರು ಯೋಗಾಭ್ಯಾಸ ಮಾಡಬೇಕು ಎಂದು ಹೇಳಿದರು.

ಅಂತರಂಗ ಶುದ್ಧವಾಗಿದ್ದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅಂತರಂಗ ಶುದ್ಧಿಯ ಜತೆಗೆ ಬಹಿರಂಗ ಶುದ್ಧಿಯೂ ಅವಶ್ಯಕ. ಅದಕ್ಕೆ ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸಹ ಉತ್ತಮವಾಗಿ ಇಟ್ಟುಕೊಳ್ಳಬೇಕು. ಅಂತರಂಗ ಹಾಗೂ ಬಹಿರಂಗವನ್ನು ಶುದ್ಧಿಯಾಗಿ ಇಟ್ಟುಕೊಳ್ಳಲು ಒಳ್ಳೆಯ ಮನಸ್ಸು ಅಗತ್ಯ. ಒಳ್ಳೆಯ ಮನಸ್ಸು ರೂಪಿಸಲು ಯೋಗದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ ಮಾತನಾಡಿ, ಆರೋಗ್ಯ ಉತ್ತಮವಾಗಿದ್ದರೆ ನಮ್ಮಲ್ಲಿ ಎಲ್ಲ ಐಶ್ವರ್ಯಗಳು ಇದ್ದಹಾಗೆ. ಉತ್ತಮ ಆರೋಗ್ಯವನ್ನು ನೀಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಯೋಗವು ದೇಹ ಹಾಗೂ ಆತ್ಮವನ್ನು ನಿಯಂತ್ರಿಸುತ್ತದೆ. ದೇಹ ಹಾಗೂ ಮನಸ್ಸನ್ನು ಶಾಂತಗೊಳಿಸುತ್ತದೆ. ನಮ್ಮ ಮನಸ್ಸನ್ನು ಯೋಗ ಪರಿಶುದ್ಧಗೊಳಿಸುತ್ತದೆ. ದೈಹಿಕ ಹಾಗೂ ಮಾನಸಿಕ ಸಮತೋಲನವನ್ನು ನಿರ್ವಹಿಸಲು ಯೋಗ ಸಹಕಾರಿಯಾಗಿದೆ. ವಿಶ್ವದ ಶೇ.99 ಜನರಲ್ಲಿ ಆತಂಕ, ಗೊಂದಲ, ಸಮಸ್ಯೆಗಳು ಇವೆ. ಆತಂಕವನ್ನು ಯೋಗ ದೂರ ಮಾಡುತ್ತದೆ. ಹಾಗಾಗಿ ಯೋಗದ ಮಹತ್ವವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಯೋಗ ಎಂಬುದು ಕಲ್ಪವೃಕ್ಷ ಇದ್ದಂತೆ, ನಾವು ಬಯಸಿದ್ದೆಲ್ಲವನ್ನು ಯೋಗ ನೀಡುವ ಶಕ್ತಿ ಹೊಂದಿದೆ. ಯೋಗವು ಹಲವಾರು ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಯೋಗವನ್ನು ನಮ್ಮ ಋಷಿ ಮುನಿಗಳು ನೀಡಿದ್ದು, ಅವರನ್ನು ನಾವು ಎಂದಿಗೂ ಮರೆಯಬಾರದು. ಒಳ್ಳೆಯ ಜೀವನ ಶೈಲಿಗೆ ಯೋಗ ಅತ್ಯಂತ ಮುಖ್ಯ. ಯೋಗದ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್. ಬಸವರಾಜು ಮಾತನಾಡಿ, ಎಲ್ಲರು ಮೊಬೈಲ್ ವ್ಯಸನಕ್ಕೆ ಒಳಗಾಗಿದ್ದು, ಜನರು ಈ ವ್ಯಸನದಿಂದ ಹೊರ ಬಂದು ಯೋಗದಂತಹ ಆರೋಗ್ಯಕರ ಚಟುವಟಿಕೆಯಲ್ಲಿ ತೊಡಗಬೇಕು. ಮಕ್ಕಳಲ್ಲಿ ಉತ್ತಮ ಅಭ್ಯಾಸವನ್ನು ಬೆಳೆಸುವ ಪ್ರಯತ್ನವನ್ನು ಪಾಲಕರು ಮಾಡಬೇಕು. ಪಾಲಕರು ಮಕ್ಕಳಿಗೆ ಯೋಗಾಭ್ಯಾಸ ಮಾಡಿಸುವ ಮೂಲಕ ಅವರ ಆರೋಗ್ಯ ವೃದ್ಧಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ವಿಜಯವಾಣಿ ಮೈಸೂರು ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆಯಾದ ನಂತರ ಹಾಗೂ ಮೈಸೂರಿನಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡ ನಂತರ ಜಿಲ್ಲೆಯಲ್ಲಿ ಯೋಗ ಚಟುವಟಿಕೆ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಕನ್ನಡದ ನಂ.1. ದಿನಪತ್ರಿಕೆ ‘ವಿಜಯವಾಣಿ’ ಯೋಗ ಚಟುವಟಿಕೆಗೆ ಉತ್ತೇಜನ ನೀಡಲು ಯೋಗ ದಿನಾಚರಣೆಯನ್ನು ನಿರಂತರವಾಗಿ ಆಚರಿಸಿಕೊಂಡು ಬರುತ್ತಿದೆ ಎಂದರು.

ಈ ಸಂದರ್ಭ ಆಯುರ್ವೇದ ವೈದ್ಯರು ಹಾಗೂ ಯೋಗ ಶಿಕ್ಷಕರಾದ ಡಾ.ಪೂರ್ಣ ತೇಜಸ್ವಿ, ಯೋಗ ಶಿಕ್ಷಕರಾದ ಶ್ರೀಹರಿ, ಸುಪ್ರಿಯಾ ಅವರನ್ನು ಸನ್ಮಾನಿಸಲಾಯಿತು. ಶ್ರೀ ಹೊಸಮಠದ ಅಧ್ಯಕ್ಷರಾದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ನಟರಾಜ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ. ಶಾರದಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net