ಮೈಸೂರು: ಮತ ಜಾಗೃತಿಗೆ ದೊರೆಯಿತು ಸ್ಪಂದನೆ

Ballari MP Election Logo
Published on

ಸದೇಶ್ ಕಾರ್ಮಾಡ್ ಮೈಸೂರು
ದೇಶದ ಬಹುದೊಡ್ಡ ಪ್ರಜಾಪ್ರಭುತ್ವ ಹಬ್ಬ ‘ಲೋಕಸಭಾ ಚುನಾವಣೆ’ಯಲ್ಲಿ ಪ್ರಜಾಪ್ರಭುತ್ವದ ಪ್ರಭುಗಳಾದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡ ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಫಲವಾಗಿ ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ನಿರಂತರ ಮತದಾನ ಜಾಗೃತಿ ಕಾರ್ಯಕ್ರಮಗಳ ಫಲವಾಗಿ ಪ್ರತಿ ಚುನಾವಣೆಯಲ್ಲೂ ಮತದಾನ ಪ್ರಮಾಣ ಏರಿಕೆ ಕಾಣುತ್ತಿದ್ದು, ಈ ಬಾರಿ ಶೇ.70.62 ರಷ್ಟು ಮತದಾನವಾಗಿದೆ. 2009ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಶೇ.56.62, 2014ರಲ್ಲಿ ಶೇ.67.21, 2019ರಲ್ಲಿ ಶೇ.68.14 ರಷ್ಟು ಮತದಾನವಾಗಿತ್ತು.

ಈ ಬಾರಿ ಒಟ್ಟು 20,92,222 ಮತದಾರರ ಪೈಕಿ 14,77,571 (ಶೇ.70.62) ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 10,26,324 ಪುರುಷ ಮತದಾರರು ಇದ್ದು, ಈ ಪೈಕಿ 7,32,605 ಪುರುಷರು (ಶೇ.71.38) ಮತದಾನ ಮಾಡಿದ್ದಾರೆ. ಒಟ್ಟು 10,65,714 ಮಹಿಳಾ ಮತದಾರರು ಇದ್ದು, 744,927 ಮಹಿಳೆಯರು (ಶೇ.69.90) ಮತದಾನ ಮಾಡಿದ್ದಾರೆ. ಒಟ್ಟು 184 ತೃತೀಯ ಲಿಂಗಿ ಮತದಾರರ ಪೈಕಿ 39 ಜನರು (ಶೇ.21.20) ಮತದಾನ ಮಾಡಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಇದ್ದು, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ.80.19), ಕೃಷ್ಣರಾಜ ಕ್ಷೇತ್ರದಲ್ಲಿ ಅತಿ ಕಡಿಮೆ (ಶೇ.60.87) ರಷ್ಟು ಮತದಾನವಾಗಿದೆ. ಉಳಿದಂತೆ ಮಡಿಕೇರಿ ಶೇ.75.41, ವಿರಾಜಪೇಟೆ ಶೇ.73.88, ಹುಣಸೂರು ಶೇ. 77.91, ಚಾಮುಂಡೇಶ್ವರಿ ಶೇ. 73.40, ಚಾಮರಾಜ ಶೇ.60.98, ನರಸಿಂಹರಾಜ ಶೇ.65.55 ರಷ್ಟು ಮತದಾನವಾಗಿದೆ.

ಹಕ್ಕು ಚಲಾಯಿಸಲು ನಿರಾಸಕ್ತಿ

ಈ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯ ಕಡೆಗೆ ಮುಖ ಮಾಡಲು ಆಸಕ್ತಿ ತೋರಲಿಲ್ಲ. ಕಳೆದ ಬಾರಿ ಶೇ 70.01 ರಷ್ಟು ಪುರುಷರು, ಶೇ.67.71 ರಷ್ಟು ಮಹಿಳೆಯರು ಮತದಾನ ಮಾಡಿದ್ದರು. ಈ ಬಾರಿಯೂ ಸಹ ಮಹಿಳಾ ಮತದಾರರಲ್ಲಿ ಮತದಾನದ ಉತ್ಸಾಹ ಕಂಡು ಬಂದಿಲ್ಲ. ಮಹಿಳಾ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಸಖಿ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಅಲ್ಲದೆ, ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲೂ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿತ್ತು. ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಇಷ್ಟೆಲ್ಲ ಕಸರತ್ತು ನಡೆಸಿದರೂ ಮಹಿಳಾ ಮತದಾರರಿಂದ ಈ ಬಾರಿಯೂ ಸೂಕ್ತ ಸ್ಪಂದನೆ ದೊರೆಯಲಿಲ್ಲ.

ವೈವಿಧ್ಯಮಯ ಕಾರ್ಯಕ್ರಮ:

ಮತದಾರರಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಈ ಬಾರಿ ವಿಂಟೇಜ್ ಕಾರುಗಳ ರ‌್ಯಾಲಿ, ಟಾಂಗಾ ಗಾಡಿಗಳ ಸವಾರಿ, ಸಹಿ ಸಂಗ್ರಹ, ಮತದಾನ ಹಬ್ಬ, ಚಿತ್ರಕಲಾ ಸ್ಪರ್ಧೆ, ಎತ್ತಿನ ಗಾಡಿ ಮೆರವಣಿಗೆ ಸೇರಿದಂತೆ ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಲಾಗಿತ್ತು.

ನಗರದ ವಿವಿಧ ಕಾರ್ಖಾನೆಗಳಲ್ಲಿ ನೌಕರರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಗಿತ್ತು. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ‘ಯುವ ಮತದಾರರ ಮತದಾನ ಜಾಗೃತಿ ಹಾಗೂ ಹಸ್ತಾಕ್ಷರ ಸಂಗ್ರಹ ಅಭಿಯಾನ’ವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಪ್ರತಿಯೊಂದು ತಾಲೂಕುಗಳಲ್ಲೂ ‘ಕಡ್ಡಾಯ ಮತದಾನ’ ಕುರಿತು ಮತದಾರರು ಪ್ರತಿಜ್ಞಾವಿಧಿ ಕಾರ್ಯ ನಡೆಸಲಾಗಿತ್ತು. ಈ ಬಾರಿ ಮತದಾನ ಜಾಗೃತಿಯಲ್ಲಿ ಅಂಗವಿಕಲರು ಸಹ ಪಾಲ್ಗೊಂಡು ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.

ಮತದಾನ ಮಾಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸಲು ನಗರ ಪಾಲಿಕೆ ವಲಯ ಕಚೇರಿಯ ಸ್ವಾಗತ ಕಮಾನು, ವಲಯ ಕಚೇರಿಯ ಮುಂಭಾಗದಲ್ಲಿ ಮತದಾನ ಕುರಿತು ಗೋಡೆಬರಹ, ಮತದಾನದ ಸೆಲ್ಫಿ ಕೌಂಟರ್‌ಹಾಗೂ ‘ನಾನು ಮತದಾನ ಮಾಡುತ್ತೇನೆ’ ಎಂಬ ಕುರಿತು ಹಸ್ತಾಕ್ಷರ ಸಂಗ್ರಹಣಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ನಗರದ ರೈಲ್ವೆ ನಿಲ್ದಾಣ ಹಾಗೂ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಮತದಾನ ದಿನದಂದು ಪ್ರವಾಸ ಕೈಗೊಳ್ಳದೆ ತಪ್ಪದೆ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಲಾಗಿತ್ತು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಕಲಾಮಂದಿರದಲ್ಲಿ ಚುನಾವಣಾ ಹಬ್ಬ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಹಿ ಸಂಗ್ರಹಣಾ ಅಭಿಯಾನ, ಚಿತ್ರಕಲಾ ಸ್ಪರ್ಧೆ, ಕಲಾ ತಂಡದಿಂದ ಮತದಾನ ಜಾಗೃತಿ ಗೀತೆಗಳ ವಾಚನ ಹಾಗೂ ಕಿರುನಾಟಕ ಕಾರ್ಯಕ್ರಮಗಳು ಮನಸೆಳೆದ್ದವು.

ಗಮನ ಸೆಳೆದ ವಿಂಟೇಜ್ ಕಾರು ರ‌್ಯಾಲಿ

ಪ್ರತಿ ಚುನಾವಣೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ವಿಂಟೇಜ್ ಕಾರುಗಳ ರ‌್ಯಾಲಿ ಆಯೋಜಿಸಲಾಗುತ್ತದೆ. ಈ ಬಾರಿಯೂ ವಿಂಟೇಜ್ ಕಾರುಗಳು ಮತದಾನ ಜಾಗೃತಿಗಾಗಿ ರಸ್ತೆಗೆ ಇಳಿದ್ದವು. ವಿಂಟೇಜ್ ಕಾರುಗಳ ಜತೆಗೆ ಟಾಂಗಾ ಗಾಡಿಗಳು ಸಹ ಗಮನ ಸೆಳೆಯಿತು. ಮತದಾನ ಜಾಗೃತಿ ಕಾರ್ಯಕ್ರಮ ಕೇವಲ ನಗರ, ಪಟ್ಟಣಗಳಿಗೆ ಮಾತ್ರ ಸೀಮಿತಗೊಳ್ಳದೆ ಹಳ್ಳಿ ಹಳ್ಳಿಗಳಲ್ಲೂ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆಯಲಾಗಿತ್ತು. ಕರ್ನಾಟಕ-ಕೇರಳ ಗಡಿ ಭಾಗವಾದ ಡಿ.ಬಿ.ಕುಪ್ಪೆಯಲ್ಲೂ ಈ ಬಾರಿ ಮತದಾನ ಜಾಗೃತಿ ಕಾರ್ಯಕ್ರಮ ಮಾಡಲಾಗಿತ್ತು. ಸುತ್ತೂರು ಗ್ರಾಮದಲ್ಲಿ ಎತ್ತಿನ ಗಾಡಿ ಜಾಥಾ ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾಗಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧಿಕಾರಿಗಳು, ಸ್ವಸಹಾಯ ಸಂಘದ ಮಹಿಳೆಯರು ಎತ್ತಿನ ಗಾಡಿ ಏರಿ ಸುತ್ತೂರಿನ ಪ್ರಮುಖ ರಸ್ತೆಗಳಲ್ಲಿ ಸಾಗಿ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net