ಮೈಸೂರು: ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಏರಿಳಿತ

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ನವ ವರ್ಷ ಸನಿಹವಾಗಿದೆ. 2023ಕ್ಕೆ ಬೀಳ್ಕೊಡುಗೆ ಕೊಟ್ಟು, 2024ಕ್ಕೆ ಸ್ವಾಗತ ಕೋರಲು ಜನರು ಉಲ್ಲಾಸಗೊಂಡಿದ್ದಾರೆ.

ಈ ಘಳಿಗೆಯಲ್ಲಿ ಜಿಲ್ಲೆಯ ಹಿನ್ನೋಟದ ಮೇಲೆ ಕಣ್ಣು ಹಾಯಿಸಿದಾಗ ಅನೇಕ ಏರಿಳಿತಗಳು ಕಾಣುತ್ತವೆ. ಶೈಕ್ಷಣಿಕ ಕ್ಷೇತ್ರ, ಪ್ರವಾಸೋದ್ಯಮ, ರಾಜಕೀಯ ಸೇರಿದಂತೆ ವಿವಿಧ ರಂಗದಲ್ಲಿ ಬೇವು-ಬೆಲ್ಲ ಎರಡೂ ದೊರೆತಿವೆ. ಹಳೆಯ ಕಹಿ ಘಟನೆಗಳಿಂದ ಪಾಠ ಕಲಿತು ಮುನ್ನಡೆಯಬೇಕಿದೆ. ಇಂತಹ ಸಂದರ್ಭದಲ್ಲಿ 2023ರ ಸಿಂಹಾವಲೋಕನ ಇಲ್ಲಿದೆ.

ಮೈವಿವಿಗೆ ಹಿಡಿದ ಗ್ರಹಣ:


ಕುಲಪತಿ ಇಲ್ಲದೆ ಮೈಸೂರು ವಿಶ್ವವಿದ್ಯಾಲಯಕ್ಕೆ ಗ್ರಹಣ ಹಿಡಿದುಕೊಂಡಿತ್ತು. ಇದು ನಾವಿಕನಿಲ್ಲದ ಹಡಗಿನಂತಾಗಿತ್ತು. ಪ್ರೊ.ಹೇಮಂತ್‌ಕುಮಾರ್ ಬಳಿಕ ಮಾರ್ಚ್ 23ರಂದು ಮೈವಿವಿ ಕುಲಪತಿ ಆಗಿ ಪ್ರೊ.ಎನ್.ಕೆ.ಲೋಕನಾಥ್ ನೇಮಕಗೊಂಡರು. ಅಂದೇ ಅಧಿಕಾರ ಸ್ವೀಕರಿಸಿದರು.


ಈ ನೇಮಕ ರದ್ದುಪಡಿಸುವಂತೆ ಕೋರಿ ಪ್ರೊ.ಶರತ್ ಅನಂತಮೂರ್ತಿ ಮತ್ತು ಡಾ.ಜಿ.ವೆಂಕಟೇಶ್‌ಕುಮಾರ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನೇಮಕಾತಿ ಆದೇಶವನ್ನು ರದ್ದುಪಡಿಸಲಾಯಿತು. ಅದರಿಂದಾಗಿ ಕುಲಪತಿ ಸ್ಥಾನ ತೆರವಾಗಿತ್ತು. ಹಂಗಾಮಿ ಕುಲಪತಿಯನ್ನೂ ನೇಮಕ ಮಾಡಲಿಲ್ಲ. ಕುಲಸಚಿವೆ, ಹಣಕಾಸು ಅಧಿಕಾರಿಗೆ ದೈನಂದಿನ ಚಟುವಟಿಕೆ ನೋಡಿಕೊಳ್ಳಲು ಅಧಿಕಾರ ನೀಡಲಾಯಿತು.

ಏಕಸದಸ್ಯತ್ವ ಪೀಠದ ತೀರ್ಪಿಗೆ ವಿಭಾಗೀಯ ಪೀಠ ತಡೆ ನೀಡಿತು. ಈ ಕುರಿತು ಆದೇಶ ಹೊರಬಿದ್ದ ಕೆಲ ಗಂಟೆಯಲ್ಲೇ ಪ್ರೊ.ಲೋಕನಾಥ್ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ, ಈ ಪ್ರಕರಣ ಇನ್ನೂ ಸಂಪೂರ್ಣವಾಗಿ ಇತ್ಯರ್ಥವಾಗಿಲ್ಲ.

ಮುಕ್ತ ವಿವಿಗೆ ಕಪ್ಪುಚುಕ್ಕೆಗಳು


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಭಾಗಿತ್ವ ಸಂಸ್ಥೆಗಳು 2009-2016ರ ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಶುಲ್ಕದ ಮೊತ್ತವಾದ 250 ಕೋಟಿ ರೂ. ದುರ್ಬಳಕೆ ಕುರಿತು ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲಾಯಿತು.ದೇಶಾದ್ಯಂತ ಇರುವ 203 ಸಹಭಾಗಿತ್ವ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಶುಲ್ಕದ ಹಣ ಮುಕ್ತ ವಿವಿಗೆ ವರ್ಗಾವಣೆ ಆಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಬರೋಬ್ಬರಿ ಅಂದಾಜು 250 ಕೋಟಿ ರೂ. ದುರುಪಯೋಗವಾಗಿತ್ತು. ಇದು ಲೆಕ್ಕಪರಿಶೋಧನೆ ವೇಳೆ ಬೆಳಕಿಗೆ ಬಂದಿತ್ತು.


ಮುಕ್ತ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿ ದೊಡ್ಡ ಸದ್ದು ಮಾಡಿತ್ತು. ತೃತೀಯ ಬಿಕಾಂನ ಕಂಪ್ಯೂಟರ್ ಸೈನ್ಸ್ ಪ್ರಶ್ನೆಪತ್ರಿಕೆ ವ್ಯಾಟ್ಸ್‌ಆ್ಯಪ್ ಮೂಲಕ ಮಾರಾಟ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಜಯಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ನಗರ ಅಪರಾಧ ಘಟಕಕ್ಕೆ (ಸಿಸಿಬಿ)ವರ್ಗಾವಣೆ ಮಾಡಲಾಯಿತು.


ಮುಕ್ತ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿ ನಿಧಾನಗತಿಯಲ್ಲಿ ವೃದ್ಧಿಯಾಗಿದ್ದು, 67 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಸಂಖ್ಯೆಯನ್ನು 1 ಲಕ್ಷ ದಾಟಿಸುವ ಗುರಿ ಹಾಕಿಕೊಳ್ಳಲಾಗಿದೆ.


ಜುಲೈ 2ರಂದು ನಡೆದ ಮುಕ್ತ ವಿವಿ ಘಟಿಕೋತ್ಸವದಲ್ಲಿ 7,057 ಅಭ್ಯರ್ಥಿಗಳಿಗೆ ಪದವಿ ನೀಡಲಾಯಿತು. ಇಬ್ಬರಿಗೆ ಗೌರವ ಡಾಕ್ಟರೇಟ್(ಡಿ.ಲಿಟ್) ಪದವಿಯನ್ನು ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್‌ಗೆ ಆಯ್ಕೆಯಾಗಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗೈರಾಗಿದ್ದರು.

ಸಂಗೀತ ವಿವಿ ಘಟಿಕೋತ್ಸವ:


ಅಕ್ಟೋಬರ್ 18ರಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 2019-20 ಮತ್ತು 2020-21ನೇ ಸಾಲಿನ ಘಟಿಕೋತ್ಸವ ಸಮಾರಂಭ ನಡೆಯಿತು. 6 ಜನ ಸಾಧಕರಿಗೆ ಗೌರವ ಡಾಕ್ಟರೇಟ್, 6 ಜನರಿಗೆ ಡಿ.ಲಿಟ್, 83 ಜನರಿಗೆ ಪದವಿ ಪ್ರದಾನ ಮಾಡಲಾಯಿತು.


ಎಸ್ಸೆಸ್ಸೆಲ್ಸಿಯಲ್ಲಿ ಹಿನ್ನೆಡೆ:


2022-23ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆ 16ನೇ ಸ್ಥಾನ ಪಡೆಯುವುದರೊಂದಿಗೆ ಕಳಪೆ ಸಾಧನೆ ಮಾಡಿತ್ತು. ಜಿಲ್ಲೆಯಲ್ಲಿ ಶೇ.89.75ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಕಳೆದ ಬಾರಿಗಿಂತ ಶೇ.1.63ರಷ್ಟು ಫಲಿತಾಂಶ ಕುಸಿತವಾಗಿತ್ತು. ಪಕ್ಕದ ಜಿಲ್ಲೆಗಳಾದ ಮಂಡ್ಯ 2ನೇ, ಹಾಸನ 3ನೇ, ಚಾಮರಾಜನಗರ 7ನೇ ಸ್ಥಾನ ಗಳಿಸಿತ್ತು. ಅದಕ್ಕಿಂತ ಕಳಪೆ ಪ್ರದರ್ಶನವನ್ನು ಮೈಸೂರು ಜಿಲ್ಲೆ ನೀಡಿತ್ತು.


ಪಿಯುಸಿಯಲ್ಲಿ 13ನೇ ಸ್ಥಾನ:


ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.79.89ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 13ನೇ ಸ್ಥಾನವನ್ನು ಮೈಸೂರು ಜಿಲ್ಲೆ ಪಡೆದುಕೊಂಡಿತ್ತು. ಕಳೆದ ಬಾರಿ ಶೇ.64.45ರಷ್ಟು ಫಲಿತಾಂಶ ಪಡೆಯುವ ಮೂಲಕ ಜಿಲ್ಲೆ ರಾಜ್ಯದಲ್ಲಿ 15ನೇ ಸ್ಥಾನ ಪಡೆದಿತ್ತು. ಈ ಸಲ ಎರಡು ಸ್ಥಾನ ಮೇಲಕ್ಕೆ ಏರಿತ್ತು.

ಚುನಾವಣೆಯಲ್ಲಿ ಕೈ ಮೇಲುಗೈ


ಮೇ 10ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಜಿಲ್ಲೆಯಲ್ಲಿ ಪಾರುಪತ್ಯ ಮೆರೆದಿತ್ತು. 2018ರಲ್ಲಿ 3 ಸ್ಥಾನ ಪಡೆದಿದ್ದ ಕಾಂಗ್ರೆಸ್ 8 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 5ರಿಂದ 2 ಸ್ಥಾನಕ್ಕೆ ಜೆಡಿಎಸ್ ಕುಸಿದಿತ್ತು. 3ರಿಂದ 1 ಸ್ಥಾನಕ್ಕೆ ಬಿಜೆಪಿ ಇಳಿದಿತ್ತು.
ಪಿರಿಯಾಪಟ್ಟಣ, ಕೃಷ್ಣರಾಜನಗರ, ಎಚ್.ಡಿ.ಕೋಟೆ, ನಂಜನಗೂಡು, ಚಾಮರಾಜ, ನರಸಿಂಹರಾಜ, ವರುಣ, ತಿ.ನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು.


ಜೆಡಿಎಸ್‌ನಿಂದ ಅಪ್ಪ-ಮಗ ಗೆದ್ದುಕೊಂಡಿದ್ದರು. ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕ ಜಿ.ಟಿ.ದೇವೇಗೌಡ, ಅವರ ಪುತ್ರ ಜಿ.ಡಿ.ಹರೀಶ್‌ಗೌಡ ಜಯ ಗಳಿಸಿದ್ದರು. ಶಾಸಕರಾಗಿದ್ದ ಜೆಡಿಎಸ್‌ನ ಸಾ.ರಾ.ಮಹೇಶ್, ಅಶ್ವಿನ್‌ಕುಮಾರ್, ಕೆ.ಮಹದೇವ, ಬಿಜೆಪಿಯ ಹರ್ಷವರ್ಧನ್, ಎಲ್.ನಾಗೇಂದ್ರ, ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ ಪರಾಜಯಗೊಂಡಿದ್ದರು.


ಜಿದ್ದಾಜಿದ್ದಿನ ಸ್ಪರ್ಧೆಯಿಂದ ರಾಷ್ಟ್ರದ ಗಮನ ಸೆಳೆದಿದ್ದ ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಭರ್ಜರಿ ಜಯ ಸಾಧಿಸಿದ್ದರು. ಮಾಜಿ ಸಚಿವ ಬಿಜೆಪಿಯ ವಿ.ಸೋಮಣ್ಣ ವರುಣದೊಂದಿಗೆ ಚಾಮರಾಜನಗರ ಕ್ಷೇತ್ರದಲ್ಲೂ ಹೀನಾಯವಾಗಿ ಪರಾಜಯಗೊಂಡಿದ್ದರು.


ಡಿ.ದೇವರಾಜ ಅರಸು ಬಳಿ ಹಿರಿಯ ಶಾಸಕ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿ ಆಗುವ ಮೂಲಕ ಮೈಸೂರು ಜಿಲ್ಲೆಗೆ ಕೀರ್ತಿ ತಂದುಕೊಟ್ಟರು.
ಏಪ್ರಿಲ್ 30ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಬೇಟೆ ನಡೆಸಿದ್ದರು. ಆದರೂ ಬಿಜೆಪಿಗೆ ಹೆಚ್ಚಿನ ಲಾಭವಾಗಲಿಲ್ಲ.

ವಿಜಯವಾಣಿಯಿಂದ ಸಂಗೀತ ಸಂಜೆ:


ಜುಲೈ 30ರಂದು ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ನಾದಮಂಟಪದಲ್ಲಿ ‘ಸಂಗೀತ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹುಬ್ಬಳ್ಳಿಯ ಹಿಂದುಸ್ತಾನಿ ಗಾಯಕ ಪಂಡಿತ್ ಜಯತೀರ್ಥ್ ಮೇವುಂಡಿ ಮತ್ತು ಚೆನ್ನೈನ ಕರ್ನಾಟಕ ಕೊಳಲು ವಾದಕ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯ ನಡುವೆ ನಡೆದ ಜುಗಲ್‌ಬಂದಿ ಸಂಗೀತ ಪ್ರೇಮಿಗಳನ್ನು ರಂಜಿಸಿತ್ತು.


ದಸರೆ ಸಂಭ್ರಮ:


ಈ ಸಲವೂ ದಸರಾ ಮಹೋತ್ಸವ ವೈಭೋಗದಿಂದ ಜರುಗಿತು. ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಅ.15ರಂದು ಸಂಗೀತ ನಿರ್ದೇಶಕ ಹಂಸಲೇಖ ದಸರೆಗೆ ಚಾಲನೆ ನೀಡಿದ್ದರು. ಬಳಿಕ 10 ದಿನ ಯುವ ದಸರಾ, ಕುಸ್ತಿ, ಪುಸ್ತಕ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ಮಹಿಳಾ, ಮಕ್ಕಳ ದಸರಾ… ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳಿಗೆ ದಸರೆ ಸಾಕ್ಷಿಯಾಯಿತು. ಅಕ್ಟೋಬರ್ 24ರಂದು ನಡೆದ ಜಂಬೂಸವಾರಿ ಮೆರವಣಿಗೆ ಮನಮೋಹಕವಾಗಿ ಕಂಗೊಳಿಸಿತು.

ಚೆನ್ನಕೇಶವ ದೇವಾಲಯ ಯುನೆಸ್ಕೋ ಮಾನ್ಯತೆ


ಯುನೆಸ್ಕೋ ಪಟ್ಟಿಗೆ ಸೋಮನಾಥಪುರದ ಚೆನ್ನಕೇಶವ ದೇವಾಲಯ ಸೇರ್ಪಡೆಯೊಂದಿಗೆ, ಜಿಲ್ಲೆಗೆ ಹಿರಿಮೆ ತಂದುಕೊಟ್ಟಿದೆ. ಜಾಗತಿಕ ಮಟ್ಟದಲ್ಲಿ ಮೈಸೂರು ಪ್ರವಾಸೋದ್ಯಮ ಗುರುತಿಸಿಕೊಳ್ಳಲು ಅನುಕೂಲವಾಗಿದೆ. ಈ ಸಾಲಿನಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಹುರುಪು ಬಂದಿದೆ. ‘ಬ್ರಾೃಂಡ್ ಮೈಸೂರು’ ಯೋಜನೆ, ಅದರ ಲಾಂಛನ ಬಿಡುಗಡೆಯಾಗಿದ್ದು ಇದಕ್ಕೆ ಪೂರಕ ಎನಿಸಿದೆ. ದಸರಾ ಬಳಿಕ ಕ್ರಿಸ್‌ಮಸ್, ವರ್ಷಾಚರಣೆಗಾಗಿ ಸಹಸ್ರಾರು ಜನರು ನಗರಕ್ಕೆ ಭೇಟಿ ನೀಡುತ್ತಿರುವುದರಿಂದ ಪ್ರವಾಸಿಗರ ಕಲರವ ಕಳೆಗಟ್ಟಿದೆ.

ರೋಪ್ ವೇ ಯೋಜನೆಗೆ ವಿರೋಧ


ಚಾಮುಂಡಿಬೆಟ್ಟದ ರೋಪ್ ವೇ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಕೈಬಿಡಲಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆ ಜಾರಿಗೆ ಸಿದ್ಧ ಎಂದಿದ್ದಾರೆ. ಇದೀಗ ಮತ್ತೆ ವಿರೋಧ ವ್ಯಕ್ತವಾಗಿದ್ದು, ಹೋರಾಟಕ್ಕೆ ಮುನ್ನುಡಿ ಬರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net