

ಮೈಸೂರು: ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಏರಬೇಕು ಎಂದು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥೆ ಡಾ.ಎನ್.ಕೆ. ಲೋಲಾಕ್ಷಿ ಕರೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿ ನಿಲಯ ಬ್ಲಾಕ್-2ರ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಹಾಗೂ ಉತ್ತಮ ಉದ್ಯೋಗ ಪಡೆಯುವ ಕಡೆಗೆ ಹೆಣ್ಣು ಮಕ್ಕಳು ಹೆಚ್ಚಿನ ಗಮನ ಹರಿಸಬೇಕು. ಆ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು. ನಮ್ಮ ಬದುಕಿನ ಹಾದಿಯನ್ನು ನಾವೇ ರೂಪಿಸಿಕೊಳ್ಳಬೇಕು ಎಂದರು.
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಎಲ್ಲ ಸಮಸ್ಯೆಗಳ ನಡುವೆಯೂ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವುದು ಸಂತಸದ ವಿಚಾರ. ಅದೇ ರೀತಿ ಈ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ. ಎಸ್.ಎಸ್. ಸುಷ್ಮಾ ಮಾತನಾಡಿ, ಹೆಣ್ಣು ಮಕ್ಕಳು ಉತ್ನತ ಸಾಧನೆ ತೋರುವ ಗುರಿ ಇಟ್ಟುಕೊಳ್ಳಬೇಕು. ಕೇವಲ ಗುರಿ ಇಟ್ಟುಕೊಂಡರೆ ಮಾತ್ರ ಸಾಲದು, ಗುರಿ ಸಾಧನೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಪೈಪೋಟಿಗಳು ಇರುತ್ತದೆ. ಈ ಪೈಪೋಟಿಗಳನ್ನು ಎದುರಿಸಿ ಏನನ್ನಾದರು ಸಾಧಿಸಬೇಕಾದರೆ ಅದಕ್ಕೆ ಕೌಶಲ್ಯದ ಅವಶ್ಯಕತೆ ಇದೆ. ವಿದ್ಯಾರ್ಥಿನಿಯರು ಉದ್ಯೋಗಕ್ಕೆ ಪೂರಕವಾದ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ನಿಲಯದ ಶಿಕ್ಷಕ ಸಲಹೆಗಾರರಾದ ಡಾ.ಕೆ. ಸೌಭಾಗ್ಯವತಿ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಬಿ. ಸಚಿನ್ ಇದ್ದರು.