

ಮೈಸೂರು: ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಮೈಸೂರು ವಿವಿಯ ಯುವರಾಜ ಕಾಲೇಜಿನ ನೌಕರರೊಬ್ಬರು ಕಾಲೇಜು ಆವರಣದಲ್ಲಿ ಬುಧವಾರ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಟಿ.ಕೆ.ಲೇಔಟ್ ನಿವಾಸಿ, ಕಾಲೇಜಿನ ಪ್ರಥಮ ದರ್ಜೆ ಗುಮಾಸ್ತ ಶಿವಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡೆತ್‌ನೋಟ್‌ನಲ್ಲಿ ‘ಯುವರಾಜ ಕಾಲೇಜಿನ ಪ್ರಾಂಶುಪಾಲ ದೇವರಾಜೇಗೌಡ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮನನೊಂದಿದ್ದೇನೆ. ಈ ಹಿಂದೆ ಇದ್ದ ಪ್ರಾಂಶುಪಾಲರೊಂದಿಗೆ ಚೆನ್ನಾಗಿದ್ದೆ ಎಂಬ ಕಾರಣದಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಸಮಯದ ದಾಖಲೆಗಳನ್ನು ನನ್ನಿಂದ ಪಡೆದು ಅವುಗಳನ್ನು ಹಿಂದಿರುಗಿಸದೆ ತೊಂದರೆ ಮಾಡುತ್ತಿದ್ದಾರೆ. ಕಾಲೇಜಿನ ಉಪಾಹಾರ ಮಂದಿರದ ಟೆಂಡರ್ ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಶಿವಕುಮಾರ್ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಲಕ್ಷ್ಮೀಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ಶಿವಕುಮಾರ್‌ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗುರುವಾರ ಅವರಿಂದ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿ ಸಂಘದ ಸದಸ್ಯರು ಈ ಸಂಬಂಧ ಕುಲಪತಿ ಕಚೇರಿಗೆ ತೆರಳಿ ದೇವರಾಜೇಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. ಯುವರಾಜ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿಗೆ ಗೌರವ ನೀಡುತ್ತಿಲ್ಲ. ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ‘ಯುವರಾಜ ಕಾಲೇಜಿನ ಪ್ರಾಂಶುಪಾಲರ ವರ್ತನೆಯ ಬಗ್ಗೆ ಇಲ್ಲಿವರೆಗೆ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ಕಾಲೇಜಿನ ಸಿಬ್ಬಂದಿ ಕರೆಸಿ ಮಾಹಿತಿ ಪಡೆದು, ಕ್ರಮ ವಹಿಸುತ್ತೇನೆ’ ಎಂದು ಕುಲಪತಿ ಪ್ರೊ. ಎನ್.ಕೆ.ಲೋಕನಾಥ್ ಮಾಹಿತಿ ನೀಡಿದ್ದಾರೆ.