ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ: ತಬ್ಬಲಿ ಹುಡುಗಿಯ ‘ಚಿನ್ನ’ದ ಸಾಧನೆ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಸಣ್ಣ ವಯಸ್ಸಿನಲ್ಲೇ ಪಾಲಕರನ್ನು ಕಳೆದುಕೊಂಡು, ಹಾಸ್ಟೆಲ್‌ನಲ್ಲೇ ಓದಿರುವ ‘ತಬ್ಬಲಿ ಹುಡುಗಿ’ ಎಂ.ಎ. ಕನ್ನಡ ವಿಷಯದಲ್ಲಿ 10 ಚಿನ್ನದ ಪದಕ, 4 ನಗದು ಬಹುಮಾನ ಪಡೆಯುವ ಮೂಲಕ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.


ವಿ.ತೇಜಸ್ವಿನಿ ಎಂಬಾಕೆಯೇ ಈ ಸಾಧನೆ ಮಾಡಿದ ಅನಾಥ ಹುಡುಗಿ. ಭಾನುವಾರ ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ ಹೆಚ್ಚಿನ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರು.


ಗಡಿ ಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಗ್ರಾಮದವರು. 4ನೇ ವಯಸ್ಸಿನಲ್ಲೇ ಇರುವಾಗಲೇ ತಾಯಿ, ಪಿಯುಸಿ ಇರುವಾಗಲೇ ತಂದೆಯನ್ನು ಕಳೆದುಕೊಂಡರು. ಅಂದಿನಿಂದಲೂ ಇವರು ಅನಾಥೆ. ಕುಟುಂಬದವರು ಕೈಬಿಟ್ಟರೂ ಶಿಕ್ಷಣ ಮಾತ್ರ ಕೈ ಬಿಡಲಿಲ್ಲ.
ದಿಕ್ಕಿಲ್ಲದ ಇವರಿಗೆ ಸರ್ಕಾರಿ ಹಾಸ್ಟೆಲ್ ತವರು ಮನೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿನಿಲಯದಲ್ಲೇ ಉಳಿದುಕೊಂಡೇ ಈ ಹಂತಕ್ಕೆ ಬೆಳೆದಿದ್ದಾರೆ.


ತಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದಲ್ಲಿ 1ರಿಂದ 10ನೇ ತರಗತಿ, ಮಂಡ್ಯ ಜಿಲ್ಲೆಯ ಮಳವಳ್ಳಿಯ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಪಿಯುಸಿ, ಮೈಸೂರು ಮಹಾರಾಣಿ ಕಲಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಬಿಎ ಪದವಿಯಲ್ಲೂ 9 ಚಿನ್ನದ ಪದಕ, 10 ನಗದು ಬಹುಮಾನ ಬಾಚಿಕೊಂಡಿದ್ದರು. ಅದೇ ರೀತಿಯ ಸಾಧನೆಯನ್ನು ಸ್ನಾತಕೋತ್ತರ ಪದವಿಯಲ್ಲೂ ಪುನರಾವರ್ತನೆ ಮಾಡಿದ್ದಾರೆ.


‘ನನ್ನ ಇಡೀ ಶೈಕ್ಷಣಿಕ ಜೀವನ ಹಾಸ್ಟೆಲ್‌ನಲ್ಲೇ ಕಳೆದಿರುವೆ. ಕಷ್ಟಪಟ್ಟು ಕಲಿತ ಶಿಕ್ಷಣವೇ ಕೈ ಹಿಡಿದು ನಡೆಸುತ್ತಿದೆ. ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಿಎಚ್.ಡಿ ಮಾಡಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುವ ಆಸೆ ಇದೆ’ ಎಂದು ತೇಜಸ್ವಿನಿ ಆತ್ಮವಿಶ್ವಾಸದಿಂದ ಹೇಳಿದರು.


ಅಂಧೆಯ ಬಂಗಾರದ ಸಾಧನೆ:


ಹುಟ್ಟಿನಿಂದ ಅಂಧೆ ಆಗಿರುವ ಎಸ್.ಅನಘಾ ಅವರು ಎಂ.ಎ.ಕನ್ನಡ ವಿಷಯದಲ್ಲಿ ಚಿನ್ನದ ಪದಕ ಪಡೆದು ಮಿಂಚಿದ್ದಾರೆ. ಕಣ್ಣಿಲ್ಲದಿದ್ದರೂ ಶಿಕ್ಷಣದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.


ಇವರು ಮೈಸೂರಿನ ಶ್ರೀರಾಂಪುರದ ನಿವಾಸಿ. ತಂದೆ ಡಿಟಿಪಿ ಆಪರೇಟರ್ ಕೆ.ಸತೀಶ್, ತಾಯಿ ಪುಷ್ಪಲತಾ ಗೃಹಿಣಿ. ಸಂಗೀತದಲ್ಲಿ ಆಸಕ್ತಿ ಹೊಂದಿರುವ ಇವರು, ಪಿಎಚ್.ಡಿ ಮಾಡಿ ಪ್ರಾಧ್ಯಾಪಕರಾಗಬೇಕು ಎಂಬ ಕನಸು ಕಾಣುತ್ತಿದ್ದಾರೆ.


‘ಕಣ್ಣಿಲ್ಲ’ ಎಂಬ ಕಾರಣಕ್ಕೆ ಪರಾವಲಂಬನೆ ಜೀವನ ನನಗಿಷ್ಟವಿಲ್ಲ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಅದಕ್ಕಾಗಿ ಮನೆಗೆಲಸ ಸೇರಿದಂತೆ ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ. ಜತೆಗೆ, ಅಂಧರ ಕುರಿತು ಕರುಣೆ ಬೇಡ. ಅವಕಾಶಗಳು ಬೇಕು. ಉತ್ತೇಜನ ಕೊಡಿ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಅನಘಾ.


ಹಿಮಾಚಲ ಪ್ರದೇಶದ ಯೋಗ ಶಿಕ್ಷಕಿಗೆ 7 ಚಿನ್ನದ ಪದಕ


ಯೋಗ ಶಿಕ್ಷಕಿ ಅಜಿತಾ ಗುಲೇರಿಯಾ ಅವರು ಎಂ.ಎ.ತತ್ವಶಾಸ್ತ್ರ ವಿಷಯದಲ್ಲಿ 7 ಚಿನ್ನದ ಪದಕ, 4 ನಗದು ಬಹುಮಾನಗಳಿಗೆ ಮುತ್ತಿಟ್ಟಿದ್ದಾರೆ. ಇವರು ಹಿಮಾಚಲ ಪ್ರದೇಶದ ರಾಜಧಾನಿ ಧರ್ಮಶಾಲಾದವರು.

ಯೋಗ ಕಲಿಯಲು ಮೈಸೂರಿಗೆ ಬಂದ ಇವರು, ಇಲ್ಲೇ ಉನ್ನತ ಶಿಕ್ಷಣ ಮುಂದುವರಿಸಿ ಮಾಸ್ಟರ್ ಡಿಗ್ರಿಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಇಲ್ಲೇ ಪಿಎಚ್.ಡಿ ಮಾಡುವ ಆಸೆಯನ್ನೂ ಹೊಂದಿದ್ದಾರೆ.

ಮೇಘನಾ ಚಿನ್ನದ ಹುಡುಗಿ


ಎಂ.ಎಸ್ಸಿ ರಸಾಯನಶಾಸ್ತ್ರ ವಿಷಯದಲ್ಲಿ 15 ಚಿನ್ನದ ಪದಕ, ಬಹುಮಾನ ಪಡೆದ ಎಚ್.ಎಸ್.ಮೇಘನಾ ‘ಗೋಲ್ಡನ್ ಗರ್ಲ್’ ಆಗಿ ಪ್ರಕಾಶಿಸಿದರು. ಎಂ.ಎಸ್ಸಿ ಗಣಿತದಲ್ಲಿ ಡಿ.ದರ್ಶನ್ 5 ಚಿನ್ನದ ಪದಕ, 3 ಬಹುಮಾನ, ಬಿಎ ವಿಭಾಗದಲ್ಲಿ ಎಂ.ಸುಮಾ 5 ಚಿನ್ನದ ಪದಕ, 3 ಬಹುಮಾನ, ಬಿ.ನಂದೀಶ್ 4 ಚಿನ್ನ ಹಾಗೂ 10 ಬಹುಮಾನ, ಬಿ.ಕಾಂ.ನಲ್ಲಿ ವೈ.ವೈ.ಸಿಂಧು ಒಂದು ಚಿನ್ನದ ಪದಕ ಹಾಗೂ 2 ಬಹುಮಾನವನ್ನು ಗಿಟ್ಟಿಸಿಕೊಂಡರು.


ಬಿ.ಇಡಿಯಲ್ಲಿ ಎಂ.ಮಾನಸಾ ಹಾಗೂ ಕೆ.ರಂಜಿತಾ ತಲಾ 2 ಚಿನ್ನದ ಪದಕ, 2 ನಗದು ಬಹುಮಾನ, ಎಂಬಿಎ ಅಗ್ರಿ ಬ್ಯುಸಿನೆಸ್‌ನಲ್ಲಿ ಎಸ್.ಲಿಖಿತಾ 5 ಚಿನ್ನದ ಪದಕ, ಎಂ.ಕಾಂ.ನಲ್ಲಿ ಪಿ.ಬಿ. ಭಾಗ್ಯಶ್ರೀ ಭಟ್ 4 ಚಿನ್ನ, 2 ಬಹುಮಾನವನ್ನು ಮಡಿಲಿಗೆ ಹಾಕಿಕೊಂಡರು..


ಎಲ್‌ಎಲ್‌ಎಂನಲ್ಲಿ ಎಚ್.ಎಲ್.ನವ್ಯಶ್ರೀ 4 ಚಿನ್ನದ ಪದಕ, 3 ಬಹುಮಾನ, ಬಿ.ಎಸ್ಸಿ.ಯಲ್ಲಿ ವಿ.ಪಿ.ರೋಶಿನಿ 5 ಚಿನ್ನದ ಪದಕ, 2 ನಗದು ಬಹುಮಾನ, ಎಂ.ಎಸ್.ದೀಪಿಕಾಗೌಡ 4 ಚಿನ್ನದ ಪದಕ, 7 ನಗದು ಬಹುಮಾನಕ್ಕೆ ಭಾಜನರಾದರು.

ವನಿತೆಯರ ಪಾರುಪತ್ಯ


ಮೈಸೂರು ವಿವಿಯ 104ನೇ ಘಟಿಕೋತ್ಸವದಲ್ಲೂ ವಿದ್ಯಾರ್ಥಿನಿಯರದ್ದೇ ಮೇಲುಗೈ. ಹೆಚ್ಚಿನ ಗೋಲ್ಡ್ ಮೆಡಲ್ ಗಳಿಸುವ ಮೂಲಕ ಚಿನ್ನದ ರಾಣಿ ಆಗಿ ಮಿನುಗಿದರು.


19,992 ಮಹಿಳೆಯರು (ಶೇ. 61.99) ಹಾಗೂ 12,257 ಪುರುಷರು (ಶೇ.38) ಸೇರಿದಂತೆ 32,249 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. 45 ಮಹಿಳೆಯರು ಮತ್ತು 55 ಪುರುಷರು ಸೇರಿದಂತೆ 100 ಅಭ್ಯರ್ಥಿಗಳು ವಿವಿಧ ವಿಷಯಗಳಲ್ಲಿ ಪಿಎಚ್.ಡಿ ಪದವಿ ಪಡೆದರು. 436 ಪದಕಗಳು ಮತ್ತು 266 ನಗದು ಬಹುಮಾನಗಳನ್ನು 252 ಅಭ್ಯರ್ಥಿಗಳು ಗಿಟ್ಟಿಸಿಕೊಂಡರು. ಅವರಲ್ಲಿ 174 ಮಹಿಳೆಯರೇ ಆಗಿದ್ದು ವಿಶೇಷ.

ಎಲ್ಲ ವಿಭಾಗದಲ್ಲೂ ಮಹಿಳಾ ಮಣಿಗಳೇ ಪಾರುಪತ್ಯ ಮೆರೆದರು. 4,039 ಮಹಿಳೆಯರು (ಶೇ. 65.73) ಸೇರಿದಂತೆ 6,144 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಗೆ ಹಾಗೂ 15,910 ಮಹಿಳೆಯರು (ಶೇ 61.17) ಸೇರಿದಂತೆ 26,009 ಅಭ್ಯರ್ಥಿಗಳು ಸ್ನಾತಕ ಪದವಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net