

ಮಂಜುನಾಥ ತಿಮ್ಮಯ್ಯ ಮೈಸೂರು
ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಬಿಲ್ ಪಾವತಿಸಲೂ ಹಣ ಇಲ್ಲ..!
ಕಳೆದ ಎರಡು ವರ್ಷದಿಂದ ಹೊಸ ಕಾಮಗಾರಿ ಕೈಗೊಂಡಿಲ್ಲ. ಅದಕ್ಕೂ ಹಿಂದಿನ ವರ್ಷ 18.91 ಕೋಟಿ ರೂ. ಗುತ್ತಿಗೆ ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದು ವಿವಿ ಹಣಕಾಸಿನ ಸ್ಥಿತಿಗತಿಗೆ ಸಾಕ್ಷಿ.
ದೇಶದ ಪ್ರತಿಷ್ಠಿತ ವಿವಿಗಳ ಸಾಲಿನಲ್ಲಿ ವಿಶೇಷ ಸ್ಥಾನ ಗಳಿಸಿರುವ ಮೈವಿವಿ ಕಳೆದ ನಾಲ್ಕು ವರ್ಷಗಳಿಂದ ಗುತ್ತಿಗೆ ಬಿಲ್‌ಗಳನ್ನು ಪಾವತಿ ಮಾಡಿಲ್ಲ. ಇದರಿಂದಾಗಿ ಟೆಂಡರ್‌ದಾರ ಸ್ಥಿತಿ ಹೇಳತೀರದಾಗಿದೆ. ವಿವಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಬಹುತೇಕ ಕೆಲಸ ಮುಗಿದು ವರ್ಷವಾದರೂ ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ.
ಸಣ್ಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ 2.48 ಕೋಟಿ ರೂ., ಕಟ್ಟಡಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿಗೆ ಕೆಲಸಗಳ 1.23 ಕೋಟಿ ರೂ., ಐಡಿಎಫ್ ಕುರಿತು 13.55 ಕೋಟಿ ರೂ. ಗುತ್ತಿಗೆ ಹಣ ನೀಡಿಲ್ಲ. ಜತೆಗೆ, ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ, ಪಿಎಚ್.ಡಿ ಪ್ರದಾನ ಮಾಡಲು ಪ್ರತಿ ವರ್ಷ ನಡೆಯುವ ಘಟಿಕೋತ್ಸವ ವೆಚ್ಚವಾದ 24.19 ಲಕ್ಷ ರೂ.ಗಳನ್ನೂ ನೀಡಿಲ್ಲ. ಪಿಎಸ್‌ಎಫ್‌ಎಸ್ 9.93 ಲಕ್ಷ ರೂ., ಸಹೋದ್ಯಮ ಕೋರ್ಸ್‌ಗಳ 29.87 ಲಕ್ಷ ರೂ. ಸೇರಿದಂತೆ 18,91,64,074 ರೂ.ಗಳು ಗುತ್ತಿಗೆದಾರರಿಗೆ ವಿವಿಯಿಂದ ಕೊಡುವುದು ಬಾಕಿ ಇದೆ ಎಂದು ಮೈಸೂರು ವಿವಿ ಕಾರ್ಯಪಾಲಕ ಇಂಜಿನಿಯರ್ ವಿಭಾಗದ ಮೂಲಗಳು ತಿಳಿಸಿವೆ.
ಹಣಕಾಸಿನ ಕೊರತೆಯಿಂದಾಗಿ ಕಳೆದ ಎರಡು ವರ್ಷದಿಂದಲೂ ಹೊಸ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಮೈಸೂರು ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗಿಲ್ಲ. ಅಗತ್ಯ ಇರುವ ನಿರ್ವಹಣಾ ಕೆಲಸವನ್ನು ಮಾತ್ರ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದರಿಂದ ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿವೆ. ಇದು ಶೈಕ್ಷಣಿಕ ಚಟುವಟಿಕೆಗಳು, ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಮೂಲಸೌಕರ್ಯಗಳೂ ಅಭಿವೃದ್ಧಿ ಪಡಿಸಲಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
ಸರ್ಕಾರದ ಅನುಮತಿ ಸಿಗುವ ಮುನ್ನವೇ ವಿವಿಧ ಕಾಮಗಾರಿಗಳಿಗೆ ಮೈವಿವಿ ಒಪ್ಪಿಗೆ ನೀಡಿತ್ತು. ಇದರ ಪರಿಣಾಮ ಗುತ್ತಿಗೆದಾರರಿಗೆ ಬಾಕಿ ಪಾವತಿ ಮಾಡಲು ಪರಿತಪಿಸುತ್ತಿದೆ ಎಂಬ ಸಂಗತಿ ಬಹಿರಂಗವಾಗಿದೆ. ಗುತ್ತಿಗೆದಾರರಿಗೆ ಬಾಕಿ ಹಣ ಕೊಡದ ಕಾರಣ ಕೆಲ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಪೂರ್ಣಗೊಂಡಿರುವ ಕಟ್ಟಡವನ್ನು ಹಸ್ತಾಂತರಿಸದೆ ಬೀಗ ಹಾಕಲಾಗಿದೆ. ಹೊಸ ಕಟ್ಟಡಗಳು ನಿರುಪಯುಕ್ತವಾಗಿವೆ.
ಹಣಕಾಸಿನ ಮುಗ್ಗಟ್ಟಿಗೆ ಮೈಸೂರು ವಿವಿ ಸಿಲುಕಿದೆ. ಜಮಾ, ಖರ್ಚುಗಳ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಗುತ್ತಿದೆ. ಎರಡನ್ನೂ ಸರಿದೂಗಿಸಿಕೊಂಡು ಹೋಗಲು ವಿವಿ ಪರದಾಡುತ್ತಿದೆ. ಈ ಕಾರಣಕ್ಕೆ ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಿ, ಅಗತ್ಯ ವೆಚ್ಚಗಳನ್ನು ಹೊರತುಪಡಿಸಿ ಉಳಿದ ವೆಚ್ಚಕ್ಕೆ ಕಡಿವಾಣ ಹಾಕಲು ಮೈವಿವಿ ಮುಂದಾಗಿದೆ.
2024-25ನೇ ಆರ್ಥಿಕ ಸಾಲಿನಲ್ಲಿ 277.39 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, 357.74 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ. 80.35 ಕೋಟಿ ರೂ. ಕೊರತೆಯಾಗಿದೆ. 2022-23, 2023-24, 2024-25ನೇ ಸಾಲಿನಲ್ಲಿ ಸರ್ಕಾರದಿಂದ ಪಿಂಚಣಿ ಅನುದಾನ ಕ್ರಮವಾಗಿ 56 ಕೋಟಿ ರೂ., 63 ಕೋಟಿ ರೂ., 70 ಕೋಟಿ ರೂ. ಕಡಿಮೆ ನೀಡಿದ್ದು, ಇದುವೇ ಕೊರತೆ ಬಜೆಟ್‌ಗೆ ಕಾರಣವಾಗಿದೆ.
ಪಿಂಚಣಿದಾರರು, ವಿವಿ ಸಿಬ್ಬಂದಿ, ಬೋಧಕ, ಬೋಧಕರೇತರ ಸಿಬ್ಬಂದಿಗಾಗಿ ಹೆಚ್ಚಿನ ಹಣ ಖರ್ಚಾಗುತ್ತಿದೆ. ಇದರ ಪ್ರಮಾಣ ಬರೋಬ್ಬರಿ ಶೇ.48ರಷ್ಟು (170.37 ಕೋಟಿ ರೂ.) ಆಗಿದೆ. ಹಾಲಿ ಇರುವ 1,802 ಪಿಂಚಣಿದಾರರಿಗಾಗಿ ಶೇ.34ರಷ್ಟು(120 ಕೋಟಿ ರೂ.) ಹಣ ಖರ್ಚಾಗಲಿದೆ. ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳಿಗೆ ಕೇವಲ ಶೇ.0.50ರಷ್ಟು (1.64 ಕೋಟಿ ರೂ.) ಹಣ ವ್ಯಯಿಸಲಾಗುತ್ತಿದೆ.
ಉಳಿದಂತೆ ಸಾಮಾನ್ಯ ಆಡಳಿತ ವೆಚ್ಚಕ್ಕೆ ಶೇ.1 (3.09 ಕೋಟಿ ರೂ.), ವಿದ್ಯಾರ್ಥಿ ಕ್ಷೇಮಪಾಲನಾ ಕಾರ್ಯಕ್ರಮಗಳಿಗೆ ಶೇ.7 (26.93 ಕೋಟಿ ರೂ.), ಇಡೀ ಕ್ಯಾಂಪಸ್ ನಿರ್ವಹಣೆಗಾಗಿ ಶೇ.6ರಷ್ಟು (21.12), ಪರೀಕ್ಷಾ ಚಟುವಟಿಕೆಗಳಿಗೆ ಶೇ.4ರಷ್ಟು (14.57 ಕೋಟಿ ರೂ.) ಹಣ ಖರ್ಚಾಗುತ್ತಿದೆ. ಇಷ್ಟು ವೆಚ್ಚವನ್ನು ಸರಿದೂಗಿಸಿಕೊಂಡು ಹೋಗಲು ವಿವಿ ಹೈರಾಣಾಗಿದೆ.
ಬೇಕಾಬಿಟ್ಟಿಯಾಗಿ ನೇಮಕ ಮಾಡಿಕೊಂಡಿರುವ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗೆ ಮೈವಿವಿ ಆಂತರಿಕ ಸಂಪನ್ಮೂಲದಿಂದ ವೇತನ ಕೊಡಬೇಕಾಗಿದೆ. ಇದಕ್ಕಾಗಿ ಸರ್ಕಾರ ಅನುದಾನ ನೀಡಿಲ್ಲ. ಸದ್ಯ ಇರುವ 1,136 ಅರೆಕಾಲಿಕ ಬೋಧಕೇತರಿಗೆ ತಿಂಗಳಿಗೆ 2.30 ಕೋಟಿ ರೂ., ವರ್ಷಕ್ಕೆ 25 ಕೋಟಿ ರೂ. ಬೇಕಾಗುತ್ತದೆ. ಇವರಿಗೆ ವೇತನ ನೀಡುವುದು ಎರಡ್ಮೂರು ತಿಂಗಳು ವಿಳಂಬವಾಗುತ್ತಿದೆ. ಇದಕ್ಕೂ ಪರದಾಡುವಂತಹ ದುಸ್ಥಿತಿ ತಲೆದೋರಿದೆ.
ಸರ್ಕಾರದಿಂದ ಬರುವ ಅನುದಾನವನ್ನೇ ಮೈಸೂರು ವಿವಿ ಅವಲಂಬಿಸಿದೆ. ಹೀಗೆ ಬರುವ ಅನುದಾನವು ವೇತನ, ಪಿಂಚಣಿಗೆ ದೊಡ್ಡ ಪ್ರಮಾಣದಲ್ಲಿ ಹೋಗುತ್ತದೆ. ಕಾಯಂ ಸಿಬ್ಬಂದಿ ವೇತನಕ್ಕಾಗಿ 121.78 ಕೋಟಿ ರೂ., ಪಿಂಚಣಿ ಅನುದಾನ 50 ಕೋಟಿ ರೂ., ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ 3 ಕೋಟಿ ರೂ. ಅನುದಾನವು ಸರ್ಕಾರದಿಂದ ಬರುವ ನಿರೀಕ್ಷೆ ಇದೆ. ಇದರ ಪ್ರಮಾಣ ಶೇ.64ರಷ್ಟಾಗಿದೆ.
ಮೈವಿವಿ ಆಂತರಿಕ ಸಂಪನ್ಮೂಲಗಳಿಂದ ಶೇ.15ರಷ್ಟು (ಪ್ರವೇಶ, ನೋಂದಣಿ, ಸಂಯೋಜನೆ ಇನ್ನಿತರ ಶುಲ್ಕಗಳಿಂದ 42 ಕೋಟಿ ರೂ.) ಸ್ಕೀಂ ಬಿ ಕೋರ್ಸ್‌ಗಳಿಂದ ಶೇ.1ರಷ್ಟು (3.50 ಕೋಟಿ ರೂ.), ಪರೀಕ್ಷಾ ಚಟುವಟಿಕೆಗಳಿಂದ ಶೇ.17ರಷ್ಟು (45 ಕೋಟಿ ರೂ.), ವಿವಿಯ ವಿವಿಧ ಆಸ್ತಿಗಳಿಂದ ಶೇ.1(3 ಕೋಟಿ ರೂ.), ಇತರ ಮೂಲಗಳಿಂದ ಶೇ.2ರಷ್ಟು (6 ಕೋಟಿ ರೂ.) ಆದಾಯ ಹರಿದು ಬರುತ್ತದೆ. ಆದರೆ, ಇದು ಯಾವುದಕ್ಕೂ ಸಾಲದಾಗಿದೆ.
ವಿಶ್ವವಿದ್ಯಾಲಯ ಪ್ರಗತಿಗಾಗಿ ರಾಜ್ಯ ಸರ್ಕಾರದಿಂದ ಬರುತ್ತಿದ್ದ ‘ಅಭಿವೃದ್ಧಿ ಅನುದಾನ’ ಕಳೆದ 2018ರಿಂದಲೇ ಸ್ಥಗಿತವಾಗಿದೆ. ಈ ಕಾರಣಕ್ಕೆ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಿರ್ವಹಣೆಗಾಗಿ ಪ್ರತ್ಯೇಕ ಅನುದಾನ ಕೊಡುವುದನ್ನೂ ನಿಲ್ಲಿಸಿದೆ. ಇದು ಮೈಸೂರು ವಿಶ್ವವಿದ್ಯಾಲಯದ ಕಥೆಯಷ್ಟೇ ಅಲ್ಲ. ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳದ್ದೂ ಇದೇ ವ್ಯಥೆ.ಪ್ರೊ.ಎನ್.ಕೆ.ಲೋಕನಾಥ್ಕುಲಪತಿ, ಮೈಸೂರು ವಿಶ್ವವಿದ್ಯಾಲಯ
ಸರ್ಕಾರದಿಂದ ವಿವಿಧ ಬಾಬ್ತಿನಲ್ಲಿ ಬರುವ ಅನುದಾನ ಕಡಿಮೆಯಾಗಿದ್ದು, ಇದರಿಂದಾಗಿ ಹಣಕಾಸಿನ ಕೊರತೆ ಎದುರಾಗಿದೆ. ಆಂತರಿಕ ಸಂಪನ್ಮೂಲದಿಂದ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ಹೊಸ ಕಾಮಗಾರಿಗಳನ್ನು ಕೈಗೊಂಡಿಲ್ಲ. ಬಾಕಿ ಉಳಿದಿರುವ ಗುತ್ತಿಗೆದಾರರ ಬಿಲ್‌ಗಳನ್ನು ಹಂತ ಹಂತವಾಗಿ ಪಾವತಿಗೆ ಕ್ರಮ ವಹಿಸಲಾಗುವುದು.ವಿ.ಆರ್.ಶೈಲಜಾ, ಕುಲಸಚಿವೆ, ಮೈಸೂರು ವಿಶ್ವವಿದ್ಯಾಲಯ