ದೇಶ ಆಹಾರ ಸ್ವಾವಲಂಬನೆ ಹೊಂದಲು ಸ್ವಾಮಿನಾಥನ್ ಕೊಡುಗೆ ಅಪಾರ

mysore university
Published on

ಮೈಸೂರು: ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಲು ಹಸಿರುಕ್ರಾಂತಿಯ ಹರಿಕಾರ ಡಾ.ಎಂ.ಎಸ್. ಸ್ವಾಮಿನಾಥನ್ ಅವರ ಕೊಡುಗೆ ಅಪಾರ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ್ ಹೇಳಿದರು.

ಮೈಸೂರು ವಿಶ್ವ ವಿದ್ಯಾಲಯದ ಬಟಾನಿಕಲ್ ಸೊಸೈಟಿ, ಸಸ್ಯಶಾಸ್ತ್ರ ಅಧ್ಯಯನ ವಿಭಾಗ ವತಿಯಿಂದ ವಿಭಾಗದ ಸಭಾಂಗಣದಲ್ಲಿ ಶನಿವಾರ ಹಸಿರುಕ್ರಾಂತಿಯ ಹರಿಕಾರ ಡಾ.ಎಂ.ಎಸ್. ಸ್ವಾಮಿನಾಥನ್ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ದೇಶ ತೋರಿದ ಸಾಧನೆಯ ರೀತಿಯಲ್ಲಿಯೇ ವಿವಿಧ ಕ್ಷೇತ್ರದಲ್ಲಿ ದೇಶ ಉನ್ನತ ಸಾಧನೆ ತೋರಲು ಪ್ರತಿಯೊಬ್ಬರಿಗೂ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವ ಅವಶ್ಯಕತೆ ಇದೆ ಎಂದು ಹೇಳಿದರು.

ದೇಶ ಅಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಲು ಶಿಕ್ಷಣದ ಪಾತ್ರ ಮಹತ್ವದ್ದು. ಸ್ವಾಮಿನಾಥನ್ ಅವರಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯದೆ ಇದ್ದಿದ್ದರೆ ಹಸಿರು ಕ್ರಾಂತಿ ಸಾಧ್ಯವಾಗುತಿತ್ತೇ? ಹಾಗಾಗಿ ಶಿಕ್ಷಣದ ಮಹತ್ವವನ್ನು ನಾವು ಇನ್ನಾದರೂ ಅರಿತುಕೊಳ್ಳಬೇಕು. ಶಿಕ್ಷಣದ ಮೂಲಕ ಮಾತ್ರ ನಮ್ಮ ದೇಶ ಹೊಂದಿರುವ ವಿವಿಧ ಗುರಿಗಳನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಶಿಕ್ಷಣ ಮತ್ತು ದಾಸೋಹ ಒಟ್ಟಿಗೆ ಸಾಗುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಕೆ. ನಾಯ್ಕ, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎನ್.ವಿ. ಸುರೇಶ, ಮೈಸೂರು ವಿಶ್ವ ವಿದ್ಯಾಲಯದ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಸ್. ಉಮೇಶ, ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎನ್. ಅಮೃತೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net