

ಅವಿನಾಶ್ ಜೈನಹಳ್ಳಿ ಮೈಸೂರು
ಮಹಾಮಾರಿ ಕರೊನಾ ವೈರಸ್ ಆರ್ಭಟದಿಂದ ನಗರದಲ್ಲಿ ಮುಚ್ಚಿದ್ದ ಈಜುಕೊಳಗಳು ಮತ್ತೆ ಮುಕ್ತಗೊಂಡಿದ್ದು, ಬೇಸಿಗೆ ತಾಪಮಾನದಿಂದ ಪಾರಾಗಲು ಸಾರ್ವಜನಿಕರೀಗ ಈಜುಕೊಳಗಳ ಕಡೆ ಮುಖ ಮಾಡುತ್ತಿದ್ದಾರೆ.
ಬಿರುಬಿಸಿಲಿನ ಬೇಗೆಯಿಂದ ಬಸವಳಿಯುತ್ತಿರುವ ಸಾಂಸ್ಕೃತಿಕ ನಗರಿಯ ಜನರು, ಸೂರ್ಯನ ವಕ್ರದೃಷ್ಟಿಯಿಂದ ಪಾರಾಗಲು ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಈಜುಕೊಳಕ್ಕೆ ಧುಮುಕುತ್ತಿದ್ದು, ಜಲಕ್ರೀಡೆಗಳತ್ತ ಮುಖ ಮಾಡಿದ್ದಾರೆ.
ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಈಜುಕೊಳ, ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಈಜುಕೊಳ ಹಾಗೂ ಜೆ.ಪಿ.ನಗರದಲ್ಲಿರುವ ಈಜುಕೊಳ, ಮೈಸೂರು ವಿ.ವಿ. ಈಜುಕೊಳದಲ್ಲಿ ನಿರೀಕ್ಷೆಗೂ ಮೀರಿದ ಜನದಟ್ಟಣೆ ಕಂಡುಬರುತ್ತಿದೆ.
ಸರಸ್ವತಿಪುರಂ ಈಜುಕೊಳದಲ್ಲಿ ಪ್ರತಿದಿನ ನೂರಾರು ಜನರು ಈಜುತ್ತಿದ್ದಾರೆ. ಬೆಳಗ್ಗೆ 6.30 ರಿಂದ 7.15, 7.30 ರಿಂದ 8.15, 8.30 ರಿಂದ 9.15 ಹಾಗೂ ಮಧ್ಯಾಹ್ನ 3 ಮತ್ತು 4 ಹಾಗೂ 5 ರಿಂದ 6 ಗಂಟೆಯಿಂದ ಆರಂಭವಾಗುವ ಪ್ರತ್ಯೇಕ ಬ್ಯಾಚ್‌ಗಳಲ್ಲಿ ತಲಾ 100 ರಿಂದ 150 ಸಾರ್ವಜನಿಕರು ಈಜಾಡುತ್ತಿದ್ದಾರೆ. ಅಲ್ಲದೆ, ಬೇಸಿಗೆ ವೇಳೆ ಈಜುಕೊಳಕ್ಕೆ ಹೆಚ್ಚು ಜನರು ಬರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮಧ್ಯಾಹ್ನ 2 ರಿಂದ ಹೆಚ್ಚುವರಿ ಬ್ಯಾಚ್‌ಗಳನ್ನು ನಡೆಸಲಾಗುತ್ತದೆ.
ಈ ಬಾರಿ ಈಜುಕೊಳದಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. ಸಂಜೆ 4 ರಿಂದ 5ರ ಅವಧಿಯನ್ನು ಮಹಿಳೆಯರಿಗೆ ಮೀಸಲಿಡಲಾಗಿದ್ದು, ಈ ಬ್ಯಾಚ್‌ಗೆ 20ಕ್ಕೂ ಹೆಚ್ಚು ಮಹಿಳೆಯರು ಹಾಜರಾಗುತ್ತಿದ್ದಾರೆ. ಇತರ ಬ್ಯಾಚ್‌ಗಳಲ್ಲಿ ತಲಾ 10-15 ಮಹಿಳೆಯರು ಸೇರಿದಂತೆ ಪ್ರತಿದಿನ 80ಕ್ಕೂ ಹೆಚ್ಚು ಮಹಿಳೆಯರು ಈಜುಕೊಳಕ್ಕೆ ಬರುತ್ತಿದ್ದಾರೆ. ಸಂಜೆ 6 ರಿಂದ 7ರವರೆಗೆ ವೃತ್ತಿಪರ ಈಜುಗಾರರು ಅಭ್ಯಾಸ ನಡೆಸುತ್ತಾರೆ.
‘ಕರೊನಾ ಕಾರಣದಿಂದ ಕಳೆದ ಎರಡು ವರ್ಷಗಳವರೆಗೆ ಈಜುಕೊಳವನ್ನು ಮುಚ್ಚಲಾಗಿತ್ತು. ಬೇಸಿಗೆ ರಜೆಯ ಸಂದರ್ಭದಲ್ಲಿ ನಡೆಸಲಾಗುತ್ತಿದ್ದ ಈಜು ಶಿಬಿರದ ಮೇಲೂ ಕರೊನಾ ವೈರಸ್‌ನ ಕರಿಛಾಯೆ ಆವರಿಸಿತ್ತು. ಈಗ ಕರೊನಾ ಪ್ರಭಾವ ಕಡಿಮೆಗೊಂಡಿದ್ದು, ಈಜುಕೊಳ ತೆರೆಯಲಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ನಮ್ಮ ಈಜುಕೊಳಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಜತೆಗೆ ಈಜು ತರಬೇತಿ ಶಿಬಿರ ಆಯೋಜಿಸಲಾಗಿದೆ’ ಎಂದು ಈಜು ತರಬೇತುದಾರ ದೀಪಕ್ ಸುಬ್ಬರಾಜೇ ಅರಸ್ ತಿಳಿಸಿದ್ದಾರೆ.
‘ಬಿಸಿಲಿನ ಬೇಗೆಯಿಂದ ಪಾರಾಗಲು ಸ್ನೇಹಿತರ ಜತೆ ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯ ಈಜುಕೊಳಕ್ಕೆ ಬರುತ್ತಿದ್ದೇನೆ. ಈಜುಕೊಳದಲ್ಲಿ ವಿಪರೀತ ಜನದಟ್ಟಣೆಯಿದೆ. ಆದರೂ, ಈಜಾಡಲು ಖುಷಿಯಾಗುತ್ತಿದೆ’ ಎಂದು ಈಜುಪಟು ದುಷ್ಯಂತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.