ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆ

9
Published on

ಮೈಸೂರು: ಕರೊನಾ ಭೀತಿಯ ನಡುವೆ ಜಿಲ್ಲೆಯಲ್ಲಿ ಜೂ.25ರಿಂದ ಜು.4ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಈ ಬಾರಿ 151 ಪರೀಕ್ಷಾ ಕೇಂದ್ರಗಳಲ್ಲಿ 39,822 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮಂಗಳವಾರ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

ಕೇಂದ್ರಗಳಲ್ಲಿ ಬೆಂಚುಗಳನ್ನು ಜೋಡಿಸುವ ಹಾಗೂ ರೋಲ್ ನಂಬರ್ ಬರೆಯುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಪರೀಕ್ಷಾ ಕೇಂದ್ರದ ಆವರಣ ಹಾಗೂ ಹೊರ ಭಾಗದಲ್ಲಿ ವಿದ್ಯಾರ್ಥಿಗಳು ಗುಂಪುಗೂಡುವುದನ್ನು ತಪ್ಪಿಸಲು ಪ್ರತಿ ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಬಿಳಿ ಬಣ್ಣ ಬಳಕೆ ಮಾಡಿ ಮಾರ್ಕ್‌ಗಳನ್ನು ಮಾಡಲಾಗಿದೆ.

ಜೂ.18ರಂದು ನಡೆದ ಪಿಯುಸಿ ಇಂಗ್ಲಿಷ್ ಪರೀಕ್ಷೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಸಾಮಾಜಿಕ ಅಂತರ ಮರೆತು ಗುಂಪುಗೂಡಿದ್ದ ದೃಶ್ಯಗಳು ಕಂಡು ಬಂದಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ರೀತಿಯ ತಪ್ಪುಗಳು ಆಗದಂತೆ ಎಚ್ಚರ ವಹಿಸಲಾಗುತ್ತಿದೆ. ಪರೀಕ್ಷಾ ಕೇಂದ್ರದ ಆವರಣ ಹಾಗೂ ಹೊರ ಭಾಗದಲ್ಲಿ ವಿದ್ಯಾರ್ಥಿಗಳು ಗುಂಪುಗೂಡುವುದನ್ನು ತಪ್ಪಿಸಲು ಪೊಲೀಸ್ ಸಿಬ್ಬಂದಿಯ ನೆರವು ಪಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಪ್ರತಿ ವರ್ಷ ಜಿಲ್ಲೆಯಲ್ಲಿ 139 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತಿತ್ತು. ಆದರೆ, ಈ ಬಾರಿ ಹೆಚ್ಚುವರಿಯಾಗಿ 12 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲಾಗಿದೆ. ಜ್ವರ, ಕೆಮ್ಮು, ನೆಗಡಿಯಿಂದ ಬಳಲುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಕಲ್ಪಿಸಲಾಗುವುದು. ಕಂಟೇನ್ಮೆಂಟ್ ವಲಯದಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇವರಿಗೆ ಎನ್-95 ಮಾಸ್ಕ್ ನೀಡಲಾಗುವುದು. ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪ್ರತಿನಿತ್ಯ ಕಂಟೇನ್ಮೆಂಟ್ ವಲಯದಲ್ಲಿ ಇರುವ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶಾಲೆಯ ಮೂಲಕ ಈಗಾಗಲೇ ಮಾಸ್ಕ್ ವಿತರಣೆ ಮಾಡಲಾಗಿದೆ. ಒಂದುವೇಳೆ ಮಾಸ್ಕ್ ಮರೆತು ಬಂದರೆ ಪರೀಕ್ಷಾ ಕೇಂದ್ರಗಳಲ್ಲೂ ಉಚಿತವಾಗಿ ಮಾಸ್ಕ್ ದೊರೆಯಲಿದೆ. ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳ ದೇಹದ ಉಷ್ಣಾಂಶವನ್ನು ಆರೋಗ್ಯ ಸಿಬ್ಬಂದಿ ತಪಾಸಣೆ ನಡೆಸಿ ಒಳಗೆ ಬಿಡುತ್ತಾರೆ. ಆ ನಂತರ ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುವುದು. ಪರೀಕ್ಷಾ ಕೇಂದ್ರದ ಒಳಗೆ ಬರುವ ಸಂದರ್ಭ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಈ ಹಿಂದೆ ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಇದೀಗ ಈ ಸಂಖ್ಯೆಯನ್ನು 18 ರಿಂದ 20ಕ್ಕೆ ಇಳಿಕೆ ಮಾಡಲಾಗಿದೆ.

ನೆರವಿಗೆ ಸಹಾಯವಾಣಿ ಸಂಪರ್ಕಿಸಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯದ ಅವಶ್ಯಕತೆ ಹಾಗೂ ಪರೀಕ್ಷೆಗೆ ಸಂಬಂಧಿಸಿದಂತೆ ಮಾಹಿತಿಯ ಅವಶ್ಯಕತೆ ಇದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಹಂತದಲ್ಲಿ ಸಹಾಯವಾಣಿಯನ್ನು ಸಂಪರ್ಕಿಸಬಹುದು. ವಿದ್ಯಾರ್ಥಿಗಳು ಮೈಸೂರು ಜಿಲ್ಲೆ 0821-2490025, ಎಚ್.ಡಿ.ಕೋಟೆ ತಾಲೂಕು ಮೊ: 7019866895 ಅಥವಾ ಮೊ: 9481813909, ಹುಣಸೂರು ತಾಲೂಕು ಮೊ: 8073687805 ಅಥವಾ ಮೊ: 9740927585, ಕೆ.ಆರ್.ನಗರ ತಾಲೂಕು ದೂ: 08223-263504, ಮೈಸೂರು ಉತ್ತರ ವಲಯ 0821-2496323, ದಕ್ಷಿಣ ವಲಯ ಮೊ: 9964967554, 8073389743 ಅಥವಾ ಮೊ: 8971544137, ನಂಜನಗೂಡು ತಾಲೂಕು ದೂ: 08221-225404, ಪಿರಿಯಾಪಟ್ಟಣ ತಾಲೂಕು ದೂ: 08223-274246, ತಿ.ನರಸೀಪುರ ತಾಲೂಕು ಮೊ: 6361291076 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net