

ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.28ಕ್ಕಿಂತ ಹೆಚ್ಚು ಸರಕು ಸಾಗಣೆಯ ಅಸಾಧಾರಣ ಬೆಳವಣಿಗೆಯನ್ನು ಸಾಧಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಗಮನಾರ್ಹ ಸಾಧನೆಯು ಮೈಸೂರು
ವಿಭಾಗವನ್ನು ಸರಕು ಸಾಗಣೆ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೆಯಲ್ಲಿಯೇ ಎರಡನೇ ಸ್ಥಾನಕ್ಕೆ ಏರಿಸಿದೆ.
ಈ ಸಾಧನೆಯನ್ನು ಗುರುತಿಸಿ ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರಿಗೆ ಮಂಗಳವಾರ ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ಪ್ರಶಸ್ತಿ ನೀಡಿದರು.
ಸರಕು ಸಾಗಾಣೆ ವಿಭಾಗವು ಪ್ರಸಕ್ತ ವರ್ಷದ ಆಗಸ್ಟ್‌ವರೆಗಿನ ಸರಕು ಸಾಗಣೆಯಲ್ಲಿ ಹಲವಾರು ಮಹತ್ವದ ಅಂಶಗಳನ್ನು ಹೊಂದಿದೆ. 2023ರ ಜನವರಿ ತಿಂಗಳ 1.074 ದಶಲಕ್ಷ ಟನ್‌ಗಳ ಸಾಗಾಟದ ಹಿಂದಿನ ದಾಖಲೆಯನ್ನು ಮೀರಿಸಿ 1.119 ದಶಲಕ್ಷ ಟನ್‌ಗಳಷ್ಟು ಮಾಸಿಕ ಲೋಡಿಂಗ್ ಸಾಧಿಸಿದೆ.
ವಿಭಾಗವು ಆ.14 ರಂದು 12 ರೇಕ್‌ಗಳೊಂದಿಗೆ ಒಂದೇ ದಿನದಲ್ಲಿ ಅತ್ಯಧಿಕ ಸಂಖ್ಯೆಯ ಕಬ್ಬಿಣದ ಅದಿರು ರೇಕ್‌ಗಳ ಲೋಡಿಂಗ್‌ನ ಹೊಸ ದಾಖಲೆ ಸ್ಥಾಪಿಸಿದೆ. ವಿಭಾಗವು ಆ.14 ರಂದು 848 ವ್ಯಾಗನ್‌ಗಳೊಂದಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ವ್ಯಾಗನ್‌ಗಳನ್ನು ಲೋಡ್ ಮಾಡಿರುವ ಹೊಸ ದಾಖಲೆ ನಿರ್ಮಿಸಿದೆ.
2023ರ ಆಗಸ್ಟ್ ತಿಂಗಳಿನಲ್ಲಿ ವಿಭಾಗದಿಂದ ಹೊರಡುವ ಸಾಗಾಣೆಯ ಲೋಡಿಂಗ್ ಸಾಧನೆಯು ಅಸಾಧಾರಣವಾಗಿದ್ದು, 309.5 ರೇಕ್‌ಗಳೊಂದಿಗೆ 1.119 ದಶಲಕ್ಷ ಟನ್ ಲೋಡ್ ಆಗಿದೆ. 2022ರ ಆಗಸ್ಟ್‌ಗೆ ಹೋಲಿಸಿದರೆ ಶೇ.65.5 ಹೆಚ್ಚಳದ ಬೆಳವಣಿಗೆಯನ್ನು ಹೊಂದಿದೆ.
ಕಬ್ಬಿಣದ ಅದಿರು ಲೋಡಿಂಗ್‌ಗೆ ಸಂಬಂಧಿಸಿದಂತೆ 2023ರ ಆಗಸ್ಟ್‌ನಲ್ಲಿ ವಿಭಾಗದ ಲೋಡಿಂಗ್ ನಿರ್ವಹಣೆ 0.927 ದಶಲಕ್ಷ ಟನ್ ಗಳೊಂದಿಗೆ 230 ರೇಕ್‌ಗಳ ಲೋಡಿಂಗ್ ಆಗಿದ್ದು, ಆಗಸ್ಟ್ 2022ಕ್ಕೆ ಹೋಲಿಸಿದರೆ ಶೇ.93.1ನ ಹೆಚ್ಚಳವಾಗಿದೆ. ಆಗಸ್ಟ್ ಅಂತ್ಯಕ್ಕೆ ಕಬ್ಬಿಣದ ಅದಿರು ಒಟ್ಟು 809 ರೇಕ್‌ಗಳೊಂದಿಗೆ 3.272 ದಶಲಕ್ಷ ಟನ್ ಲೋಡಿಂಗ್ ಆಗಿದ್ದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅತ್ಯಂತ ಹೆಚ್ಚು, ಅಂದರೆ ಶೇ.47.5 ರಷ್ಟು ಹೆಚ್ಚಳವಾಗಿದೆ.
ವಿಭಾಗವು ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕಂಟ್‌ಗಳು ಲೋಡಿಂಗ್‌ನಲ್ಲಿ ಅದ್ಭುತ ಸಾಧನೆ ಮೆರೆದಿದ್ದು, 2023ರ ಆಗಸ್ಟ್‌ನಲ್ಲಿ 0.166 ದಶಲಕ್ಷ ಟನ್‌ಅನ್ನು ಲೋಡ್ ಮಾಡಲಾಗಿದೆ. ಇದು ಆಗಸ್ಟ್ 2022ಕ್ಕೆ ಹೋಲಿಸಿದರೆ ಶೇ.10.7 ರಷ್ಟು ಹೆಚ್ಚಳ ಸಾಧಿಸಿದೆ. 2023ರ ಆಗಸ್ಟ್‌ವರೆಗೆ ಒಟ್ಟು 308 ರೇಕ್‌ಗಳೊಂದಿಗೆ 0.800 ದಶಲಕ್ಷ ಟನ್ ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕಂಟ್‌ಗಳು ಲೋಡ್ ಆಗಿದ್ದು,ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.8.8 ರಷ್ಟು ಹೆಚ್ಚಳವಾಗಿದೆ.
ಮೈಸೂರು ವಿಭಾಗವು ಸರಕು ಲೋಡಿಂಗ್ ಸಾಧನೆಯಲ್ಲಿ ಮಾತ್ರವೇ ಅಲ್ಲದೇ, ಸರಕು ಸಾಗಣೆ ಆದಾಯದಲ್ಲಿಯೂ ಸಹ ಗಮನಾರ್ಹ ಹೆಚ್ಚಳ ಸಾಧಿಸಿದೆ. ಆಗಸ್ಟ್ ತಿಂಗಳ ಸರಕು ಸಾಗಣೆ ಆದಾಯವು 75.64 ಕೋಟಿಗಳಾಗಿದ್ದು, ಕಳೆದ ವರ್ಷ ಆಗಸ್ಟ್‌ಗೆ ಹೋಲಿಸಿದರೆ ದಾಖಲೆಯ ಶೇ.61.42 ರಷ್ಟು ಬೆಳವಣಿಗೆಯಾಗಿದೆ. ಆಗಸ್ಟ್ ಅಂತ್ಯದವರೆಗೆ ಒಟ್ಟು ಸರಕು ಸಾಗಣೆ ಆದಾಯವು 399.43 ರು. ಕೋಟಿಗಳಷ್ಟಾಗಿದ್ದೂ, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.59.1 ರಷ್ಟು ಹೆಚ್ಚಳವಾಗಿದೆ.
ಈ ಸಂದರ್ಭದಲ್ಲಿ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಈ ಮೈಲಿಗಲ್ಲನ್ನು ಸಾಧಿಸುವಲ್ಲಿ ವಿಶೇಷ ಕೊಡುಗೆ ನೀಡಿದ ಮೈಸೂರು ವಿಭಾಗದ ಸಂಪೂರ್ಣ ತಂಡವನ್ನು ಅಭಿನಂದಿಸಿದರು. ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಮ್ಮ ಉತ್ಸಾಹವನ್ನು ಹೆಚ್ಚಿಸಿಕೊಳ್ಳುವಂತೆ ಪ್ರೇರೇಪಿಸಿದರು ಮತ್ತು ಮುಂಬರುವ ತಿಂಗಳುಗಳು ಮತ್ತು ವರ್ಷಗಳಲ್ಲಿ ಹೊಸ ಎತ್ತರಕ್ಕೆ ಏರಲು ಶ್ರಮಿಸುವಂತೆ ಕರೆ ನೀಡಿದರು.