ದೇಶ ಉಳಿಸುವ ಕೆಲಸ ಮಾಡಿ

1 (1)
Published on

ಮೈಸೂರು: ಸಮರ್ಪಣಾ ಭಾವದಿಂದ ಯುವ ಜನರು ದೇಶ ಉಳಿಸುವ ಕೆಲಸವನ್ನು ಮಾಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಜಿ.ನಿಜಗಣ್ಣವರ ಹೇಳಿದರು.

ನಗರದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ(ಎಸ್‌ಜೆಸಿಇ) ಆವರಣದಲ್ಲಿ ಶನಿವಾರ ಆಯೋಜಿಸಿದ್ದ 10ನೇ ಪದವೀಧರರ ದಿನಾಚರಣೆಯಲ್ಲಿ ಮಾತನಾಡಿದರು.

ಇತ್ತೀಚೆಗೆ ಆತಂಕಕಾರಿ ನಡುಕಗಳು ಉದ್ಭವಿಸುತ್ತಿವೆ. ವಿವಿಧ ಕಾರಣಕ್ಕೆ ಪ್ರಕ್ಷುಬ್ಧ ವಾತಾವರಣವೂ ನಿರ್ಮಾಣವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಯುವಜನರು ಇದನ್ನು ತಿಳಿಗೊಳಿಸಿ ದೇಶವನ್ನು ಮತ್ತು ಇಲ್ಲಿಯ ವ್ಯವಸ್ಥೆಯನ್ನು ಸಂರಕ್ಷಣೆ ಮಾಡಬೇಕಿದೆ. ಈಗಿನ ಸಂದಿಗ್ಧ ಸ್ಥಿತಿಯಲ್ಲಿ ಬುದ್ಧನ ಸಂದೇಶವಾದ ‘ಯಾರನ್ನೂ ತಾತ್ಸಾರದಿಂದ ನೋಡಬೇಡಿ, ನಿಮ್ಮ ಹೊರತಾಗಿಯೂ’ ಎಂಬುದನ್ನು ಪಾಲಿಸಬೇಕಿದೆ. ಈ ಸಂದೇಶವು ಕಾಲಮೀರಿದ ಸಾರ್ವತ್ರಿಕ ಸತ್ಯವಾಗಿದೆ ಎಂದರು.

ಪ್ರಜಾಪ್ರಭುತ್ವ ಉಳಿದರೆ ಮಾತ್ರ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ. ಜತೆಗೆ, ಮಾನವ ಹಕ್ಕುಗಳ ರಕ್ಷಣೆ, ನಾಗರಿಕ ಸೌಲಭ್ಯಗಳೂ ದೊರೆಯಲಿವೆ. ಶಿಕ್ಷಣ ಮತ್ತು ಹವ್ಯಾಸಕ್ಕೂ ಪರಸ್ಪರ ಸಂಬಂಧವಿದೆ. ಶಿಕ್ಷಣವನ್ನು ಹಾಳು ಮಾಡುವಂತಹ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಡಿ. ಶುಭ್ರ ಬಟ್ಟೆಯನ್ನು ಧರಿಸಿ ಚಿಂತನೆಗಳು ಕಳಪೆಯಾಗಿದ್ದರೆ ಏನು ಲಾಭ? ಎಂದು ಪ್ರಶ್ನಿಸಿದರು.

ಇಂಜಿನಿಯರ್‌ಗಳು ರಾಷ್ಟ್ರ ನಿರ್ಮಾತೃದಾರರು. ದೇಶ ಮತ್ತು ಸಮಾಜದ ಬೆಳವಣಿಗೆಗೂ ಕಾರಣಕರ್ತರರು. ಇವರ ಪಾತ್ರ ಪ್ರತಿಯೊಬ್ಬರ ಬದುಕಿನಲ್ಲೂ ಅವಶ್ಯಕತೆ ಇದೆ. ಇದನ್ನು ಯಾರೂ ಮರೆಯುವಂತಿಲ್ಲ ಎಂದ ಅವರು, ಭಾರತ ಹಳ್ಳಿಗಳ ದೇಶ. ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಜನರಿಗೆ ನಿಗದಿತ ಅನ್ವೇಷಣೆಯ ಲಾಭ ಮತ್ತು ಕೃಷಿ ಕ್ಷೇತ್ರಕ್ಕಾಗಿ ಆಧುನಿಕ ತಂತ್ರಜ್ಞಾನ ಕಲ್ಪಿಸಿಕೊಡಬೇಕು ಎಂದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ತಾಂತ್ರಿಕ ಶಿಕ್ಷಣ ವಿಭಾಗ ಸಲಹೆಗಾರ ಪ್ರೊ.ಎಂ.ಎಚ್.ಧನಂಜಯ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಪತಿ ಪ್ರೊ.ಎಲ್.ಜವಾಹಾರ್ ನೇಸನ್, ನಿಯಂತ್ರಣಾಧಿಕಾರಿ ಪ್ರೊ.ಕೆ.ಎನ್.ಉದಯಕುಮಾರ್, ಪ್ರಾಂಶುಪಾಲ ಪ್ರೊ.ಟಿ.ಎಸ್.ನಾಗಭೂಷಣ್ ಹಾಜರಿದ್ದರು.

ಪದವಿ ಪ್ರದಾನ: 875 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 874 ಬಿಇ ವಿದ್ಯಾರ್ಥಿಗಳು, ಎಂಸಿಎ ಪದವಿಯ ಒಬ್ಬ ವಿದ್ಯಾರ್ಥಿ ಪದವಿ ಸ್ವೀಕರಿಸಿದರು. ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 12 ಪದಕ ಹಾಗೂ 9 ದತ್ತಿ ಪದಕ ನೀಡಲಾಯಿತು.

ರ‌್ಯಾಂಕ್ ಗಳಿಸಿದ ಎಂ.ನಿಶ್ಚಯ್ ಪ್ರಸಾದ್, ಎಂ.ಲೋಚನ, ಅಮೃತವರ್ಷಿಣಿ ಸುಂದರ್, ಎಚ್.ಎಸ್.ಸುಪ್ರಿಯಾ, ಆಶಿಶ್ ಜಾನ್ ಥಾಮಸ್, ಎಚ್.ಆದ್ಯನಾಥ್, ಅನುಷ ಎಂ.ಕಂಕೇರಿ, ಶರ್ಮಿನ್ ತಸ್ಮಿಯಾ, ಯಶವಂತ್ ಎಂ.ಜೈನ್, ಜಿ. ಶ್ರೀತೇಜಸ್ವಿ, ಆಶಿಶ್ ವಿ. ಹೆಗ್ಡೆ, ಎನ್.ಆರ್.ಅಮೃತ ಅವರಿಗೆ ಪದಕ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net