

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೋಮವಾರ ಮತ್ತು ಮಂಗಳವಾರ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದೊಂದಿಗೆ ಆಚರಿಸಿದ ಜನರು ಬುಧವಾರ ಗೋವರ್ಧನ ಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಶ್ರೀಕೃಷ್ಣನು ಧಾರಾಕಾರ ಮಳೆಯಿಂದ ಗ್ರಾಮಸ್ಥರನ್ನು ರಕ್ಷಿಸಲು ಗೋವರ್ಧನ ಬೆಟ್ಟ ಎತ್ತುತ್ತಾನೆ. ಈ ಹಿನ್ನೆಲೆಯಲ್ಲಿ ದೀಪಾವಳಿಯ ಮರುದಿನ ಗೋವರ್ಧನ ಪೂಜೆ ನಡೆಸಲಾಗುತ್ತದೆ. ಗ್ರಾಮೀಣ ಭಾಗದಂತೆ ನಗರದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಗೋಪಾಲಕರು ಇದ್ದಾ ರೆ. ಹಬ್ಬದ ಪ್ರಯುಕ್ತ ಗೋಪಾಲಕರು ಗೋವುಗಳ ಮೈ ತೊಳೆದು, ಮೈಗೆ, ಕೋಡುಗಳಿಗೆ ಬಣ್ಣ ಹಚ್ಚಿ, ಕೊರಳಿಗೆ ವಿವಿಧ ಹಾರಗಳನ್ನು ಹಾಕಿ ಶೃಂಗರಿಸಿ ಪೂಜೆ ಸಲ್ಲಿಸಲಿದ್ದಾರೆ. ಪೂಜೆಯ ನಂತರ ಸಾಂಪ್ರದಾಯಿಕವಾಗಿ ಗೋ ಪೂಜೆ ನೆರವೇರಿಸಿ ಗೋವುಗಳಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣುಗಳನ್ನು ನೀಡುತ್ತಾರೆ. ಅಲ್ಲದೆ ಮನೆಗಳಲ್ಲಿ ಬೆಳ್ಳಿ ಕೃಷ್ಣ, ಬೆಳ್ಳಿ ಹಸು ಪ್ರತಿಮೆಗಳಿಗೆ ಪೂಜೆ, ಹಸುವಿನ ಸಗಣಿಯ ಉಂಡೆಗೆ ಚೆಂಡುಹೂವು ಇಟ್ಟು ಪೂಜೆ ಸಲ್ಲಿಸಲಾಗುವುದು.
ನಗರದಲ್ಲಿ ಸೋಮವಾರ ನರಕ ಚತುರ್ದಶಿ ಹಾಗೂ ಮಂಗಳವಾರ ಬಲಿಪಾಡ್ಯಮಿ ಹಾಗೂ ಲಕ್ಷ್ಮೀಪೂಜೆ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರದಿಂದಲೇ ನಗರದಲ್ಲಿ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು. ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ವಾಣಿವಿಲಾಸ ಮಾರುಕಟ್ಟೆ, ಧ್ವನಂತ್ರಿ ರಸ್ತೆ, ಅಗ್ರಹಾರ ವೃತ್ತ, ನಂಜುಮಳಿಗೆ, ಜೆಕೆ ಮೈದಾನದ ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆ ಹಾಗೂ ರಸ್ತೆ ಬದಿಗಳಲ್ಲಿ ಬೆಳಗ್ಗೆಯಿಂದಲೇ ಸಾರ್ವಜನಿಕರು ಹಬ್ಬದ ಉತ್ಸಾಹದಲ್ಲಿ ಹಬ್ಬಕ್ಕೆ ಬೇಕಾದ ಹಣ್ಣು, ಹೂವು, ತರಕಾರಿ, ಪೂಜಾ ಸಾಮಗ್ರಿ ಖರೀದಿಸಿದರು. ಅದೇ ರೀತಿ ಪಟಾಕಿಗಳನ್ನು ಸಹ ಜನರು ಉತ್ಸಾಹದಿಂದ ಖರೀದಿಸಿದರು.