ಮಕ್ಕಳ ವಿಜ್ಞಾನದ ಕುತೂಹಲ ತಣಿಸಿದ ಮೈಸೂರು ಸೈನ್ಸ್ ಫೌಂಡೇಷನ್

Mysore Science Foundation
Published on

ಮೈಸೂರು: ತರಗತಿಗಳಲ್ಲಿ ಪಠ್ಯದ ಮೂಲಕ ಕಲಿತಿದ್ದರಿಂದಲೇ ಸಮಾಧಾನ ಪಟ್ಟುಕೊಳ್ಳುವ ಮಕ್ಕಳಿಗೆ ಪ್ರಾಯೋಗಿಕವಾಗಿ ಮೂಲ ವಿಜ್ಞಾನ, ಮೂಲ ಗಣಿತ, ಎಲೆಕ್ಟಾನಿಕ್ಸ್ ಮೊದಲಾದ ವಿಷಯಗಳನ್ನು ಕಲಿಸುವ ಮೂಲಕ ಭವಿಷ್ಯದಲ್ಲಿ ಈ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ನಗರದ ಮೈಸೂರು ಸೈನ್ಸ್ ಫೌಂಡೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಹತ್ತು ದಿನಗಳ ಕಾರ್ಯಾಗಾರ ಎಲ್ಲರ ಗಮನ ಸೆಳೆಯಿತು.

ಸಾಹುಕಾರ್ ಚನ್ನಯ್ಯ ರಸ್ತೆಯ ಜ್ಞಾನೋದಯ ಕಾಲೇಜಿನಲ್ಲಿ ಆಯೋಜಿಸಿದ್ದ ಈ ಕಾರ್ಯಾಗಾರದಲ್ಲಿ 30ಕ್ಕೂ ಹೆಚ್ಚು ಮಕ್ಕಳು ಹತ್ತು ದಿನಗಳ ಕಾಲ ಆಸಕ್ತಿಯಿಂದ ಪಾಲ್ಗೊಂಡು, ಮೂಲ ವಿಜ್ಞಾನಕ್ಕೆ ಸಂಬಂಧಿಸಿದಂತೆ ನಿತ್ಯ ಒಂದಿಲ್ಲೊಂದು ಪ್ರಯೋಗ, ಕ್ಲಿಷ್ಟ ಗಣಿತವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಬಗೆ, ಸರಳ ಎಲೆಕ್ಟಾನಿಕ್ಸ್ ಮಾದರಿಗಳಲ್ಲಿ ತಮ್ಮನ್ನು ಅತೀವ ಆಸಕ್ತಿಯಿಂದ ತೊಡಗಿಸಿಕೊಂಡರು.

ಈ ವೇಳೆ ಗುರುತ್ವಾಕರ್ಷಣ ಶಕ್ತಿ, ಬೆಳಕಿನ ಪ್ರತಿಫಲನ, ನ್ಯೂಟನ್‌ನ ಉಂಗುರ ಮೊದಲಾದ ಭೌತಶಾಸ್ತ್ರ, ಜತೆಗೆ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ ಮೊದಲಾದವುಗಳನ್ನು ಮಾದರಿಗಳ ಮೂಲಕ ವಿವರಿಸಲಾಯಿತು.

ಇದೇ ಸಂದರ್ಭ ನಗರದ ಕುಕ್ಕರಹಳ್ಳಿ ಕೆರೆಗೆ ಮಕ್ಕಳನ್ನು ಕರೆದೊಯ್ದು ಬೈನಾಕ್ಯುಲರ್ ಮೂಲಕ ವಿವಿಧ ಪಕ್ಷಿಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಅಲ್ಲದೆ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ನೆಹರು ತಾರಾ ವೀಕ್ಷಣಾಲಯಗಳಿಗೂ ಮಕ್ಕಳು ಭೇಟಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಜಿ.ಬಿ. ಸಂತೋಷ್ ಕುಮಾರ್, ಎಚ್.ವಿ. ಮುರಳೀಧರ್, ಎಚ್.ಎಸ್. ಮಂಜುಳಾ, ಸಿ. ಪುರಂದರ್, ಜಿ.ಕೆ. ಕಾಂತರಾಜು, ನಿರಂಜನ್, ಸಿ.ಎನ್. ಗೀತಾ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net