

ಸರಗೂರು: ದುಡಿಮೆ ಮನುಷ್ಯನ ಘನತೆ ಮತ್ತು ಸೃಜನಶೀಲತೆಯ ಶ್ರೇಷ್ಠತೆ ವ್ಯಕ್ತಪಡಿಸುವ ಸಾಧನ ಎಂದು ತಂಬಾಕು ಮಂಡಳಿ ಕ್ರಾಪ್ ಕಮಿಟಿ ಸದಸ್ಯ ಪರಶಿವಮೂರ್ತಿ ಹೇಳಿದರು.
ಪಟ್ಟಣದ ಸಂತೆಮಾಳದಲ್ಲಿರುವ ಕಟ್ಟಡ ಕಾರ್ಮಿಕರ ಸಂಘದಿಂದ ಗುರುವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಜೀವನದ ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಪರಿಶ್ರಮದಲ್ಲಿಯೇ ಕಾರ್ಮಿಕರು ಬದುಕಿನ ಖುಷಿ ಕಾಣಲಿದ್ದಾರೆ ಎಂದು ತಿಳಿಸಿದರು.
ಹಗಲು, ರಾತ್ರಿ ಎಂದು ನೋಡುವುದಿಲ್ಲ, ಬಿಸಿಲು, ಮಳೆ, ಗಾಳಿಗೂ ಜಗ್ಗುವುದಿಲ್ಲ, ಕಠಿಣ ಪರಿಶ್ರಮ, ಸಮರ್ಪಣಾ ಭಾವಕ್ಕೆ ಇವರು ಸಾಕ್ಷಿ. ಕಷ್ಟವನ್ನು ನುಂಗಿ ಖುಷಿ ಹಂಚುವವರು ಕಾರ್ಮಿಕರು. ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಬಹಳ ದೊಡ್ಡದು. ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ಶ್ರಮಜೀವಿಗಳೇ ಇಲ್ಲದ ದೇಶವನ್ನು ಊಹಿಸಲು ಸಾಧ್ಯ ಇಲ್ಲ. ಶಾಸಕ ಅನಿಲ್ ಕುಮಾರ್ ಜತೆ ಮಾತುಕತೆ ನಡೆಸಿ ಸಂಘದ ಕಟ್ಟಡವನ್ನು ಪೂರ್ಣಗೊಳಿಸಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಸರಗೂರು ಪೊಲೀಸ್ ಠಾಣೆ ಉಪನಿರೀಕ್ಷಕ ಕಿರಣ್ ಮಾತನಾಡಿ, ದುಡಿಮೆಯಿಂದಲೇ ಕುಟುಂಬವನ್ನು ಮುನ್ನಡೆಸುವ ಕಾರ್ಮಿಕರು ತಾವು ದುಡಿಯುತ್ತಿರುವ ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತಾರೆ ಎಂದು ಹೇಳಿದರು.
ಸಮಾಜ ಸೇವಕ ಎಸ್.ವಿ.ವೆಂಕಟೇಶ್, ಕಾರ್ಮಿಕ ನಿರೀಕ್ಷಕಿ ಅಕ್ಷತಾ ಮಾತನಾಡಿದರು. ಸಂಘದ ಅಧ್ಯಕ್ಷ ರಾಚಯ್ಯ, ಉಪಾಧ್ಯಕ್ಷ ಭೋಗಯ್ಯ(ಸಣ್ಣ), ಗೌರವಾಧ್ಯಕ್ಷ ನರಸಿಂಹಶಟ್ಟಿ, ಕಾರ್ಯದರ್ಶಿ ಎಸ್.ಪಿ.ರಮೇಶ್, ಖಜಾಂಚಿ ಚಿಕ್ಕನಾಯಕ, ಕಾರ್ಯನಿರ್ವಾಹಕ ಸಿದ್ದಪ್ಪ, ಪರಶಿವಮೂರ್ತಿ, ಮಾಜಿ ಅಧ್ಯಕ್ಷ ಶಿವರಾಜು, ದಿಲೀಪ್ ಕುಮಾರ್, ಆದಿಶೇಷ, ಬಸವರಾಜು, ಮಹದೇವ, ಶ್ರೀನಿವಾಸ, ಗೋವಿಂದರಾಜು, ಮಹದೇವ, ಮಹದೇವಸ್ವಾಮಿ, ಪ್ರಸಾದ್, ಅಪ್ಪಾಜಿ, ಕೆ ದಾಸಿ ಇತರರು ಇದ್ದರು.