ಗುಮ್ಮಟನಗರಿಯಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಮೇಳ, ಎಲ್ಲಿ ಯಾವಾಗ ಗೊತ್ತಾ?

MYSORE SANDAL
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ ಪಿಕೆಎಂ ಸುದ್ದಿಗೋಷ್ಠಿ ನಡೆಸಿದರು. ಜನರಲ್ ಮ್ಯಾನೇಜರ್ ಗಂಗಪ್ಪ ಹಾಗೂ ವ್ಯವಸ್ಥಾಪಕ ರಮೇಶ ಇದ್ದಾರೆ.
Published on

ವಿಜಯಪುರ: ವಿಶ್ವ ವಿಖ್ಯಾತಿ ಪಡೆದಿರುವ ಮೈಸೂರು ಶ್ರೀಗಂಧದ ಎಣ್ಣೆ ಮತ್ತು ಮೈಸೂರು ಶ್ರೀಗಂಧದ ಸಾಬೂನು ಉತ್ಪನ್ನಗಳನ್ನು ಪ್ರಚುರ ಪಡಿಸುವ ಮೂಲಕ ಶ್ರೀಗಂಧ ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮೈಸೂರು ಸ್ಯಾಂಡಲ್ ಸಾಬೂನು ಮೇಳ ಹಮ್ಮಿಕೊಳ್ಳುತ್ತಾ ಬಂದಿದ್ದು, ಇದೀಗ ಜ. 11 ರಿಂದ 20 ರವರೆಗೆ ಗುಮ್ಮಟ ನಗರಿಯಲ್ಲಿ ಮೇಳ ಆಯೋಜಿಸಲಾಗಿದೆ ಎಂದು ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ ಪಿಕೆಎಂ ತಿಳಿಸಿದರು.

ನಗರದ ಶ್ರೀ ಸಿದ್ಧೇೀಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಪ್ರತಿ ದಿನ ಬೆಳಗ್ಗೆ 9.30 ರಿಂದ ರಾತ್ರಿ 9.30 ರವರೆಗೆ ಈ ಸಾಬೂನು ಮೇಳ ನಡೆಯಲಿದ್ದು, ವಿಶೇಷ ಆಕರ್ಷಣೆಯೊಂದಿಗೆ, ಸಂಸ್ಥೆ ಉತ್ಪಾದಿಸುತ್ತಿರುವ 48ಕ್ಕೂ ಹೆಚ್ಚು ಉತ್ಕೃಷ್ಟ ದರ್ಜೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಸಂಪೂರ್ಣ ಸರ್ಕಾರಿ ಸ್ವಾಮ್ಯದ ಒಡೆತನದಲ್ಲಿದ್ದು, ನೈಸರ್ಗಿಕ ಶ್ರೀಗಂಧದೆಣ್ಣೆಯಿಂದ ತಯಾರಿಸಿರುವ ಮೈಸೂರು ಸ್ಯಾಂಡಲ್‌ಸಾಬೂನಿನಿಂದ ವಿಶ್ವ ವಿಖ್ಯಾತಿ ಪಡೆದಿದೆ ಹಾಗೂ ಭೌಗೋಳಿಕ ಸ್ವಾಮ್ಯ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದು ಭಾರತದ ಬೌದ್ಧಿಕ ಆಸ್ತಿಯಾಗಿರುತ್ತದೆ. ಸಂಸ್ಥೆಯು 2010 ನೇ ವರ್ಷ ಮತ್ತು 2019 ನೇ ಸಾಲಿಗೆ ಸಾರ್ವಜನಿಕ ಶ್ರೇಷ್ಠತೆಗಾಗಿ ಮುಖ್ಯಮಂತ್ರಿ ರತ್ನ ಪ್ರಶಸ್ತಿಯೂ ಸೇರಿದಂತೆ ರಫ್ತು ಹಾಗೂ ಕಾಸ್ಟ್ ಅಕೌಂಟಿಗ್ ನಿರ್ವಹಣೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ ಎಂದರು.

ಸಂಸ್ಥೆಯ ಶ್ರೀಗಂಧದೆಣ್ಣೆ ಸೇರಿದಂತೆ ಸಾಬೂನು, ಮಾರ್ಜಕ, ಸೌಂದರ್ಯವರ್ಧಕ, ಅಗರಬತ್ತಿ ಸೇರಿದಂತೆ ಸುಮಾರು 38 ಉತ್ಪನ್ನಗಳನ್ನು ತಯಾರಿಸುತ್ತಿದೆ. ಸಂಸ್ಥೆಯು ತನ್ನ ಉತ್ಪನ್ನಗಳ ಉತ್ತಮ ಗುಣಮಟ್ಟದ ಪ್ರಮಾಣ ಪತ್ರವನ್ನು ಪಡೆದಿದೆ. ಬಹು ರಾಷ್ಟ್ರೀಯ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆಯೂ ಸಂಸ್ಥೆಯು ಹೆಚ್ಚಿನ ವಹಿವಾಟನ್ನು ಹೊಂದಿದ್ದು ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದ್ದು 2023-24 ನೇ ಸಾಲಿನಲ್ಲಿ ರೂ.1571.00 ಕೋಟಿ ವಹಿವಾಟು ನಡೆಸಿ ಅಂದಾಜು ನಿವ್ಹಳ ರೂ.362.00 ಕೋಟಿಗಳ ದಾಖಲೆ ಲಾಭಗಳಿಸಿದ್ದೂ ಪ್ರಸ್ತುತ ಆರ್ಥಿಕ ವರ್ಷ 2024-25ರಲ್ಲಿ ಉತ್ಪನ್ನಗಳ ಮಾರಾಟದಲ್ಲಿ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಪ್ರಗತಿ ತೋರುತ್ತಿದ್ದು ನ.24ರ ವರೆಗಿನ ಮಾರಾಟವು ರೂ. 1090.71 ಕೋಟಿಗಳಾಗಿದೆ ಎಂದು ವಿವರಿಸಿದರು.

ಸಂಸ್ಥೆಯು ಗ್ರಾಹಕರಿಗೆ ಅಂತಾರಾಷ್ಟ್ರೀಯ ಗುಣ ಮಟ್ಟದ ವಿಶಿಷ್ಟ ರೀತಿಯಿಂದ ಕೂಡಿದ ಉತ್ಪನ್ನವಾದ ‘ಮೈಸೂರು ಸ್ಯಾಂಡಲ್ ಮಿಲೇನಿಯಂ’ ಸೂಪರ್ ಪ್ರೀಮಿಯಂ ಸಾಬೂನನ್ನು 2012 ಮತ್ತು 2024 ರಲ್ಲಿ ಹ್ಯಾಂಡ್ ವಾಶ್ ಮತ್ತು ವೆವ್ ಸೋಪ್‌ನ ವಿಭಿನ್ನ ಸುವಾಸನೆಯುಳ್ಳ ಸಾಬೂನುಗಳನ್ನು ಬಿಡುಗಡೆಗೊಳಿಸಿದ್ದು ಈ ಸಾಬೂನಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ ಎಂದರು.

2017 ನೇ ಸಾಲಿನಲ್ಲಿ ಕೆಎಸ್‌ಡಿಎಲ್ ಸಂಸ್ಥೆಯು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳ್ಳಿಸಿದ್ದು ಫ್ರೆಶ್‌ನಾಲ್, ಕಿತ್ತಲೆ ಪರಿಮಳದ ಕ್ಲೀನಾಲ್, ಮಲ್ಲಿಗೆ, ರೋಸ್, ನಾಗಚಂಪ ಅಗರಬತ್ತಿಗಳು ಮಲ್ಲಿಗೆ ಪರಿಮಳದ ಧೂಪ್ ಹಾಗೂ ಮೈಸೋಪ್ ಸಾಬೂನುಗಳಲ್ಲಿ ಐದು ಬಗೆಯ ಸುವಾಸನೆಯ ಸಾಬೂನುಗಳನ್ನು, ಬೇಬಿ ಶಾಂಪು, ಬೇಬಿ ಮಸಾಜ್ ಎಣ್ಣೆ, ಸುಖ್ ಮಸಾಜ್ ಎಣ್ಣೆ ಮತ್ತು 2019 ನವೆಂಬರ್ 24ರ ವರೆಗೆ ಮೈಸೂರ್ ಸ್ಯಾಂಡಲ್ ಹ್ಯಾಂಡ್ ವಾಶ್ ಮತ್ತಿತರ ಉತ್ಪನ್ನಗಳನ್ನು ಬಿಡುಗಡೆಗೊಳ್ಳಿಸಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.

ಸಂಸ್ಥೆಯು ಶ್ರೀಗಂಧವನ್ನು ನಿರಂತರವಾಗಿ ಪಡೆಯಲು ತನ್ನ ಪರಿಸರ ನೀತಿಯಂತೆ ‘ಹೆಚ್ಚು ಹೆಚ್ಚು ಶ್ರೀಗಂಧ ಬೆಳೆಸಿ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕರ್ನಾಟಕದ ವಿವಿಧ ಭಾಗದ ರೈತರಿಂದ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಜನರಲ್ ಮ್ಯಾನೇಜರ್ ಗಂಗಪ್ಪ ಹಾಗೂ ವ್ಯವಸ್ಥಾಪಕ ರಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net